ಔರಾದ ತಾಲೂಕಿನ ಎಕಂಬಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಭೀಮರಾವ ನಾಯಕ ತಾಂಡಾದಲ್ಲಿ ನೀರಿನ ಸಮಸ್ಯೆ ಉದ್ಬಿವಿಸಿ, ಜನರು ಜೀವ ಜಲಕ್ಕಾಗಿ ಪರದಾಡುತ್ತಿದ್ದ ಪರಿಸ್ಥಿತಿ ಕುರಿತು ʼಈದಿನ.ಕಾಮ್ʼ ಪ್ರಕಟಿಸಿದ ವರದಿಗೆ ಫಲಶೃತಿ ಲಭಿಸಿದೆ.
ಈದಿನ.ಕಾಮ್ ನಲ್ಲಿ ಫೆ.23 ರಂದು ʼಕುಡಿಯುವ ನೀರಿಗಾಗಿ ಪರದಾಡುತ್ತಿರುವ ಭೀಮರಾವ್ ನಾಯ್ಕ ತಾಂಡಾ ನಿವಾಸಿಗಳುʼ ಎಂಬ ಶೀರ್ಷಿಕೆಯಲ್ಲಿ ಮೊಟ್ಟ ಮೊದಲು ವಿಸ್ತೃತ ವರದಿ ಪ್ರಕಟವಾಗಿತ್ತು. ವರದಿಗೆ ಎಚ್ಚೆತುಕೊಂಡ ತಾಲೂಕು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಅಧಿಕಾರಿಗಳು, ಎಕಂಬಾ ಗ್ರಾಮ ಪಂಚಾಯಿತಿ ಪಿಡಿಒ ಅವರು ತಾಂಡಾಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶೀಘ್ರದಲ್ಲಿ ತಾಂಡಾದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ನೀರಿನ ಸಮಸ್ಯೆ ಬಗ್ಗೆ ಮುತುವರ್ಜಿ ವಹಿಸಿದ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳ ನೇತ್ರತ್ವದಲ್ಲಿ ಮಾರ್ಚ್ 10 ರಂದು ಹೊಸ ಬೋರವೆಲ್ ಕೊರೆಸಿ, ಭೀಮಾ ನಾಯಕ ತಾಂಡಾ ನಿವಾಸಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭೀಮರಾವ್ ನಾಯ್ಕ್ ತಾಂಡಾ ನಿವಾಸಿಗಳಿಗೆ ನೀರಿನ ಸಮಸ್ಯೆ ಕುರಿತು ʼಈದಿನ.ಕಾಮ್ʼ ವರದಿಗಾರರು ತಾಂಡಾಕ್ಕೆ ಭೇಟಿ ನೀಡಿ ಮೊದಲ ಬಾರಿಗೆ ವಿಶೇಷ ವರದಿ ಪ್ರಕಟಿಸಿದರು. ಇದಕ್ಕೆ ಸ್ಪಂದಿಸಿದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದೀಗ ತಾಂಡಾದಲ್ಲಿ ಹೊಸ ಬೊರವೆಲ್ ಕೊರೆಸಿದ್ದಾರೆ. ತಾಂಡಾ ಜನರಿಗೆ ನೀರಿನ ಸಮಸ್ಯೆ ಪರಿಹಾರಕ್ಕಾಗಿ ವಿಶೇಷ ಕಾಳಜಿಯಿಂದ ಸುದ್ದಿ ಪ್ರಕಟಿಸಿದ ʼಈದಿನ.ಕಾಮ್ʼ ತಂಡಕ್ಕೆ ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಸಂಚಾಲಕ ಬಾಬುರಾವ ಕೌಠಾ ಧನ್ಯವಾದ ತಿಳಿಸಿದ್ದಾರೆ.
“ತಾಂಡಾದಲ್ಲಿ ಈಗಾಗಲೇ ಸರ್ಕಾರದ ಅನುದಾನದಲ್ಲಿ ಕೊರೆಸಿದ ತೆರೆದ ಬಾವಿ ಇದೆ. ಆದರೆ ಬಾವಿಗೆ ಜಮೀನು ನೀಡಿದ ಭೂಮಾಲಿಕರ ತಕರಾರಿನಲ್ಲಿರುವ ಕಾರಣ ತಾಂಡಾದಲ್ಲಿ ನೀರಿನ ಸಮಸ್ಯೆ ಉದ್ಬವಿಸಿತ್ತು. ತಾಂಡಾದಲ್ಲಿ ಶಾಶ್ವತ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರದ 30 ಲಕ್ಷ ರೂ. ವೆಚ್ಚ ಅನುದಾನದಲ್ಲಿ ಕೊರೆಸಿದ ತೆರೆದ ಬಾವಿ ಗ್ರಾಮ ಪಂಚಾಯತ್ ಸುಪರ್ದಿಗೆ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ ಲೋಕಸಭಾ ಕ್ಷೇತ್ರ | ದಶಕದ ʼಕಮಲʼ ಕೋಟೆ ಭೇದಿಸಲು ʼಕೈʼ ರಣತಂತ್ರ
ತಾಂಡಾ ನಿವಾಸಿ ಮಾರುತಿ ರಾಠೋಡ್ ಮಾತನಾಡಿ, ʼಈದಿನ.ಕಾಮ್ʼ ನ್ಯೂಸ್‌ನವರು ತಾಂಡಾಕ್ಕೆ ಖುದ್ದು ಭೇಟಿ ನೀಡಿ ಮೊದಲು ಸುದ್ದಿ ಮಾಡಿದರು, ಸುದ್ದಿಯ ಫಲವಾಗಿ ನಮಗೆ ಕುಡಿಯುವ ನೀರು ಸಿಗುವಂತಾಗಿದೆ” ಎಂದು ಈದಿನ.ಕಾಮ್ ಮಾಧ್ಯಮಕ್ಕೆ ಧನ್ಯವಾದ ತಿಳಿಸಿದರು.