ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರಾಚಪ್ಪ ಗೌಡಗಾಂವ್ ಗ್ರಾಮದ ಜೀಜಾಬಾಯಿ ಮಾಧವರಾವ್ (64) ಎನ್ನುವ ನಿರ್ಗತಿಕ ವಯೋವೃದ್ಧ ಮಹಿಳೆ ಮನೆಗೆ ಭಾಲ್ಕಿ ತಾಲೂಕಿನ ಸಾಯಿಗಾಂವ್ ಹೋಬಳಿಯ ಉಪ ತಹಸೀಲ್ದಾರ್ ಸುನೀಲ್ ಸಜ್ಜನ ಹಾಗೂ ಗ್ರಾಮ ಲೆಕ್ಕಾಧಿಕಾರಿ ವಿನೋದ ರಾಠೋಡ್ ಭೇಟಿ ನೀಡಿ ವೃದ್ಧಾಪ್ಯ ವೇತನ ಮಂಜೂರಾತಿ ಪತ್ರ ಹಸ್ತಾಂತರಿಸಿದರು.
ಅನ್ನಭಾಗ್ಯ, ಗೃಹಲಕ್ಷ್ಮಿ, ವಿಧವಾ ವೇತನ ಹಾಗೂ ವೃದ್ಧಾಪ್ಯ ವೇತನ ಹಣ ಸೇರಿದಂತೆ ಸರ್ಕಾರದ ಎಲ್ಲ ಯೋಜನೆಗಳಿಂದ ವಂಚಿತರಾದ ಜೀಜಾಬಾಯಿ ಅವರು ನಿರ್ಗತಿಕ ಬದುಕಿನ ಸಂಕಟ ಕುರಿತು ʼಈದಿನ.ಕಾಮ್ʼ ನಲ್ಲಿ ಬೀದರ್ | ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿರುವ ವೃದ್ಧ ಮಹಿಳೆ: ಕಣ್ಣು ಹಾಯಿಸುವರೇ ಅಧಿಕಾರಿಗಳು? ಎಂಬ ಶೀರ್ಷಿಕೆಯಡಿ ಸೆ.20 ರಂದು ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಜೀಜಾಬಾಯಿ ಮನೆಗೆ ದೌಡಾಯಿಸಿ ಸಮಸ್ಯೆ ಆಲಿಸಿದ್ದಾರೆ.
ʼಈದಿನ.ಕಾಮ್ʼ ವರದಿಗೆ ಎಚ್ಚೆತುಕೊಂಡ ಕಂದಾಯ ಇಲಾಖೆಯ ಅಧಿಕಾರಿಗಳು ಸೆ.25 ರಂದು ಬೆಳಿಗ್ಗೆ ರಾಚಪ್ಪ ಗೌಡಗಾಂವ್ ಗ್ರಾಮದ ವೃದ್ಧೆ ಜೀಜಾಬಾಯಿ ಮನೆಗೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದ್ದಾರೆ. ವೃದ್ಧಾಪ್ಯ ವೇತನಕ್ಕೆ ಬೇಕಾದ ಅಗತ್ಯ ದಾಖಲೆ ಪಡೆದು ಕಚೇರಿಗೆ ತೆರಳಿದ್ದರು. ಅದೇ ದಿನ ವೃದ್ಧಾಪ್ಯ ವೇತನ ಮಂಜೂರು ಮಾಡಿ ಪುನಃ ಗ್ರಾಮಕ್ಕೆ ಹೋಗಿ ಅಜ್ಜಿಯ ಕೈಗೆ ಮಂಜೂರಾತಿ ಪತ್ರ ನೀಡಿದ್ದಾರೆ.
ಜೀಜಾಬಾಯಿಗೆ ಓರ್ವ ಮಗನಿದ್ದ, ಆತ ಎಂಟತ್ತು ವರ್ಷದ ಹಿಂದೆ ಸಾವನಪ್ಪಿದ್ದಾನೆ, ಸೊಸೆ ಬೇರೆ ಕಡೆ ವಾಸವಾಗಿದ್ದಾರೆ. ಸಕ್ಕರೆ ಕಾರ್ಖಾನೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗಂಡನನ್ನು ಕಳೆದುಕೊಂಡ ಜೀಜಾಬಾಯಿ, ಸದ್ಯ ತಗಡಿನ ಶೀಟ್ ಇರುವ ಮನೆಯಲ್ಲಿ ಒಂಟಿ ಜೀವನ ನಡೆಸುತ್ತಿದ್ದಾರೆ. ಅಜ್ಜಿಗೆ 64 ವರ್ಷದವಾದರೂ ʼಕಷ್ಟ ಎಲ್ಲರಿಗೂ ಬರುತ್ತದೆʼ ಎಂದು ಹೆದರದೇ ಕೂಲಿಗೆ ಹೋಗುವುದು ಅನಿವಾರ್ಯವಾಗಿತ್ತು. ಇದೀಗ ಅಧಿಕಾರಿಗಳು ಇಚ್ಚಾಶಕ್ತಿ ತೋರಿ ವೃದ್ಧಾಪ್ಯ ವೇತನ ಮಂಜೂರು ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಭಾಷಣ ಮಾಡುವಾಗಲೇ ಅಸ್ವಸ್ಥರಾದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಎರಡು ವರ್ಷಗಳಿಂದ ಸರ್ಕಾರದ ಯೋಜನೆಗಳಿಂದ ವಂಚಿತಳಾಗಿ ಸಂಕಷ್ಟದ ಬದುಕು ದೂಡುತ್ತಿದ್ದ ಅಜ್ಜಿಯ ಮನೆಯ ಕಡೆಗೆ ತಿರುಗಿ ನೋಡದ ಅಧಿಕಾರಿಗಳು ʼಈದಿನ.ಕಾಂʼ ವರದಿಗೆ ಸ್ಪಂದಿಸಿ ಒಂದೇ ದಿನದಲ್ಲಿ ವೃದ್ಧಾಪ್ಯ ಪಿಂಚಣಿ ಮಂಜೂರು ಮಾಡಿದ್ದಾರೆ. ಕಂದಾಯ ಅಧಿಕಾರಿಗಳ ಕಾರ್ಯವೈಖರಿಗೆ ಜನ ಭೇಷ್ ಎಂದಿದ್ದಾರೆ.