ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ನಾವದಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದುಸ್ಥಿತಿಯಲ್ಲಿತ್ತು. ಈ ಶಾಲೆಯಲ್ಲಿ ಒಟ್ಟು 6 ಕೊಠಡಿಗಳಿದ್ದು, ಇಂದು ನಾಳೆಯೋ ಬೀಳುವ ಹಂತದಲ್ಲಿವೆ. ಮಳೆ ಜೋರಾಗಿ ಸುರಿಯತೊಡಗಿದರೆ ಕೂಡಲೇ ಮಕ್ಕಳನ್ನು ಶಾಲೆಯ ಹೊರಗಡೆ ತಂದು ಕೂರಿಸುತ್ತಾರೆ. ಈ ಶಾಲೆಯ ಸಮಸ್ಯೆಯ ಬಗ್ಗೆ ಈ ದಿನ.ಕಾಮ್ ಆಗಸ್ಟ್ 1ರಂದು ವರದಿ ಪ್ರಕಟಿಸಿತ್ತು.
ಈ ವಿಡಿಯೋ ವರದಿಯನ್ನು ಗಮನಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಲೆಗೆ ಇಂದು (ಆ.2) ಭೇಟಿ ನೀಡಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ಭರವಸೆ ನೀಡಿದ್ದಾರೆ.
ಶಾಲೆಗೆ ಭೇಟಿ ನೀಡಿದ ಡಿಡಿಪಿಐ ಸೂರ್ಯಕಾಂತ ಮದನೆ, ಕಮಲಾಪುರ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಅಂಬರೀಷ್ ಭೇಟಿ ನೀಡಿದ್ದು, ಶಾಲೆಯ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿದರು.
ಭೇಟಿಯ ವೇಳೆ ಉಪಸ್ಥಿತರಿದ್ದ ನವದಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಪರಶುರಾಮ್ ಅವರೊಂದಿಗೂ ಕೂಡ ಮಾಹಿತಿ ಕಲೆ ಹಾಕಿದರು.
“ನಾಲ್ಕು ಹೊಸ ಕೋಣೆಗಳು ನಿರ್ಮಾಣ ಮಾಡಿಕೊಡುವುದಾಗಿ ಭೇಟಿ ನೀಡಿ ಭರವಸೆ ನೀಡಿದ್ದಾರೆ. ಉಳಿದ ಕೋಣೆಗಳು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ(KKRDB)ಯ ನೆರವಿನೊಂದಿಗೆ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ” ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಪರಶುರಾಮ್ ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದಾರೆ.
ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಯನ್ನು ವರದಿ ಪ್ರಕಟಿಸುವ ಮೂಲಕ ಅಧಿಕಾರಿಗಳ ಗಮನ ಸೆಳೆದಿದ್ದಕ್ಕಾಗಿ ಎಸ್.ಡಿ.ಎಂ.ಸಿ ಅಧ್ಯಕ್ಷ ಪರಶುರಾಮ್ ಮತ್ತು ಶಾಲೆಯ ಮುಖ್ಯ ಶಿಕ್ಷಕಿ ಜಯಶ್ರೀ ಅವರು ಈ ದಿನ. ಕಾಮ್ ಗೆ ಧನ್ಯವಾದ ಸಲ್ಲಿಸಿದ್ದಾರೆ.




ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.