ಗದಗ ಜಿಲ್ಲೆಯ ರೋಣ ಪುರಸಭಾ ವ್ಯಾಪ್ತಿಯಲ್ಲಿದ್ದ ಇಂದಿರಾ ಕ್ಯಾಂಟೀನ್ ಕಟ್ಟಡವು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿತ್ತು. ಈ ಬಗ್ಗೆ ಗಮನಿಸಿದ್ದ ಈ ದಿನ.ಕಾಮ್, ಕಳೆದ ಸೆ. 17ರಂದು “ಗದಗ | ಅನೈತಿಕ ಚಟುವಟಿಕೆ ತಾಣವಾದ ‘ಇಂದಿರಾ ಕ್ಯಾಂಟೀನ್’; ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯ” ಎಂ ಶೀರ್ಷಿಕೆಯಡಿಯಲ್ಲಿ ವಿಸ್ತೃತವಾದ ವರದಿ ಪ್ರಕಟಿಸಿತ್ತು.
ಅಲ್ಲದೇ, ಈ ಬಗ್ಗೆ ಸಿಎಂ ಕಚೇರಿಯಲ್ಲಿರುವ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ. ವೈಷ್ಣವಿ ಅವರ ಗಮನಕ್ಕೂ ತಂದಿತ್ತು. ಈ ದಿನ.ಕಾಮ್ ವರದಿಯ ಬೆನ್ನಲ್ಲೇ ಎಚ್ಚೆತ್ತ ರೋಣ ಪುರಸಭೆಯ ಅಧಿಕಾರಿಗಳು, ಪಟ್ಟಣದ ಇಂದಿರಾ ಕ್ಯಾಂಟೀನ್ ಕಟ್ಟಡ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್‌ಗೆ ಮಾಹಿತಿ ನೀಡಿರುವ ಸಿಎಂ ಕಚೇರಿ, ರೋಣ ಪುರಸಭೆಯ ಮುಖ್ಯಾಧಿಕಾರಿ ರಮೇಶ್ ಹೊಸಮನಿ ಬರೆದಿರುವ ಪತ್ರವನ್ನೂ ಕೂಡ ಹಂಚಿಕೊಂಡಿದೆ. ಈ ಪತ್ರದಲ್ಲಿ ಮುಂದಿನ ದಿನಗಳಲ್ಲಿ ಈ ರೀತಿಯ ನಿರ್ಲಕ್ಷ್ಯ ಆಗದಂತೆ ಎಚ್ಚರಿಕೆ ವಹಿಸುವುದಾಗಿ ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಈ ಕುರಿತು ಈದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿರುವ ಪುರಸಭೆ ಮುಖ್ಯಾಧಿಕಾರಿ ರಮೇಶ್ ಹೊಸಮನಿ, “ಈ ದಿನ.ಕಾಮ್ ಇಂದಿರಾ ಕ್ಯಾಂಟೀನ್ ಕಟ್ಟಡದಲ್ಲಿನ ಅವ್ಯವಸ್ಥೆ ಕುರಿತು ಸುದ್ದಿ ಪ್ರಸಾರ ಮಾಡಿತ್ತು. ಇದಕ್ಕೆ ಸಿಎಂ ಕಚೇರಿಯಿಂದಲೂ ನಮಗೆ ಮಾಹಿತಿ ಬಂದಿದ್ದರಿಂದ ಸ್ಪಂದಿಸಿದ್ದು, ಎಲ್ಲನ್ನೂ ಸ್ವಚ್ಛತೆ ಮಾಡಲಾಗಿದೆ. ಕೂಡಲೇ ಕಾಮಗಾರಿ ಆರಂಭಿಸಿ, ಕ್ಯಾಂಟೀನ್ ಸುತ್ತಲು ಕಾಂಪೌಂಡ್ ಕಟ್ಟಿಸಿ, ತಿಂಗಳಲ್ಲಿಯೇ ಇಂದಿರಾ ಕ್ಯಾಂಟೀನ್ ಆರಂಭಿಸಲು ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.
ಅನೈತಿಕ ಚಟುವಟಿಕೆಗಳ ತಾಣವಾಗಿದ್ದ ‘ಇಂದಿರಾ ಕ್ಯಾಂಟೀನ್’ ಕಟ್ಟಡ
ಗದಗ ಜಿಲ್ಲೆಯ ರೋಣ ಪಟ್ಟಣದ ಇಂದಿರಾ ಕ್ಯಾಂಟೀನ್ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿತ್ತು. ಆರ್ಥಿಕವಾಗಿ ಹಿಂದುಳಿದ ಜನರ ಹಸಿವನ್ನು ನೀಗಿಸಬೇಕಿತ್ತು. ಆದರೆ ಈ ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಉದ್ಘಾಟನೆಗೊಳ್ಳದೆ ಸುಮಾರು ಏಳೆಂಟು ತಿಂಗಳಿಂದ ನೆನೆಗುದಿಗೆ ಬಿದ್ದಿತ್ತು. ಇದರಿಂದ ಅನೈತಿಕ ಚಟುವಟಿಕೆಗಳ ಅಡ್ಡವಾಗಿ ಮಾರ್ಪಟ್ಟಿತ್ತು.
ಕೂಲಿ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ರೈತರಿಗೆ, ಆಟೋ ಚಾಲಕರಿಗೆ ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಬಡವರ ಹಸಿವನ್ನು ನೀಗಿಸುವ ಸಲುವಾಗಿ ಕಡಿಮೆ ಹಣದಲ್ಲಿ ಹೊಟ್ಟೆತುಂಬಾ ಊಟ ಮಾಡಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಆರಂಭಿಸಿತ್ತು. ಆದರೆ ರೋಣದ ಇಂದಿರಾ ಕ್ಯಾಂಟೀನ್ ಅನೈತಿಕ ಚಟುವಟಿಕೆಗಳಿಂದ ಕೂಡಿ, ಕುಡುಕರ ಅಡ್ಡವಾಗಿತ್ತು. ಇದನ್ನು ಗಮನಿಸಿದ್ದ ಈ ದಿನ.ಕಾಮ್ ವಿಶೇಷ ಸುದ್ದಿ ಮಾಡಿತ್ತು.
ಇದನ್ನು ಓದಿದ್ದೀರಾ? ಗದಗ | ಅನೈತಿಕ ಚಟುವಟಿಕೆ ತಾಣವಾದ ‘ಇಂದಿರಾ ಕ್ಯಾಂಟೀನ್’; ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯ
ಈ ವರದಿಗೆ ಸಿಎಂ ಕಚೇರಿಯಿಂದ ಸ್ಪಂದನೆಯ ಕರೆ ಬಂದಿದ್ದು, ಈ ಕೂಡಲೇ ಇಂದಿರಾ ಕ್ಯಾಂಟೀನ್ ಸ್ವಚ್ಛತೆಗೊಳಿಸಬೇಕೆಂದು ಸೂಚನೆ ಮಾಡಲಾಗಿದೆ ಎಂದು ತಿಳಿಸಿದ್ದರು. ಅದರಂತೆ ರೋಣ ಪುರಸಭೆ ಅಧಿಕಾರಿಗಳು ಎಚ್ಚೆತ್ತು, ಇಂದಿರಾ ಕ್ಯಾಂಟೀನ್ ಮುಂದೆ ಬೆಳೆದಿದ್ದ ಗಿಡಗಂಟಿ, ಕ್ಯಾಂಟೀನ್ ಒಳಗಡೆ ಇದ್ದ ಮದ್ಯದ ಬಾಟಲಿ, ಪ್ಲಾಸ್ಟಿಕ್ ಪ್ಯಾಕೆಟ್ ಸೇರಿದಂತೆ ಎಲ್ಲವನ್ನೂ ಸ್ವಚ್ಛಗೊಳಿಸಿದ್ದಾರೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.
ಶರಣಪ್ಪ ಸಂಗನಾಳ ಅವರ ಸಾಮಾಜಿಕ ಜವಾಬ್ದಾರಿಗೆ ಹೃತ್ಪೂರ್ವಕ ಧನ್ಯವಾದಗಳು