ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗಳು ಒಂದೇ ಆವರಣದಲ್ಲಿದ್ದವು. ಈ ಎರಡೂ ಶಾಲೆಗಳಿಗೆ ಒಂದೇ ಅಡುಗೆ ಕೋಣೆಯಿದ್ದು, ಅದೂ ಕೂಡ ಶಿಥಿಲಗೊಂಡಿತ್ತು. ಶಾಲೆಯ ಅವ್ಯವಸ್ಥೆಯ ಬಗ್ಗೆ ಕಳೆದ ಡಿಸೆಂಬರ್ 25, 2023ರಂದು ಈದಿನ.ಕಾಮ್ ವರದಿ ಮಾಡಿತ್ತು.
ಜೊತೆಗೆ ನಿರಂತರವಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ, ಫಾಲೋಅಪ್ ಮಾಡಿರುವುದರಿಂದ ಶಾಲೆಯ ನವೀಕರಣಕ್ಕೆ ಸರ್ಕಾರವು 1.80 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಬೀಳುವ ಹಂತದಲ್ಲಿರುವ ಹಳೆ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣದ ಕಾಮಗಾರಿಯನ್ನು ಈಗಾಗಲೇ ಆರಂಭಿಸಲಾಗಿದೆ.
ಆಳಂದ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆಯ ಬಾಗಿಲುಗಳು ಕೂಡ ಮುರಿದಿದ್ದವು. ಪರಿಣಾಮ, ತರಗತಿ ನಡೆಯುವ ಕೊಠಡಿಯಲ್ಲಿಯೇ ಅಡುಗೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೊಸ ಅಡುಗೆ ಕೋಣೆ ನಿರ್ಮಿಸಿಕೊಡಬೇಕೆಂದು ಶಾಲೆಯ ಅಡುಗೆ ಸಿಬ್ಬಂದಿ ಕೂಡ ಬೇಡಿಕೆ ಇಟ್ಟಿದ್ದರು.
“ಶಾಲೆಯಲ್ಲಿ ಮೊದಲೇ ತರಗತಿಗಳಿಗೆ ಅಗತ್ಯವಿರುವಷ್ಟು ಕೊಠಡಿಗಳು ಇಲ್ಲ. ಅಡುಗೆ ಕೋಣೆ ಶಿಥಿಲಗೊಂಡಿದೆ. ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು, ಯಾವಾಗ ಬೇಕಿದ್ದರೂ ಬೀಳುವ ಆತಂಕವಿದೆ. ಅದನ್ನು ಕೆಡವಿ, ಹೊಸ ಕಟ್ಟಡ ನಿರ್ಮಾಣ ಮಾಡಬೇಕು. ಆದರೆ, ಹಳೆಯ ಕಟ್ಟಡದಲ್ಲಿಯೇ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದೆ” ಎಂದು ಸ್ಥಳೀಯರು ಮಾಹಿತಿ ನೀಡಿದ್ದರು.
“ಕೆಲವು ಕೊಠಡಿಗಳು ಕೂಡ ತರಗತಿ ನಡೆಸಲು ಯೋಗ್ಯವಾಗಿಲ್ಲ. ಸರ್ಕಾರ ಕಟ್ಟಡಗಳ ದುರಸ್ತಿ, ನವೀಕರಣ ಹಾಗೂ ಪ್ರಗತಿಗೆ ಅಗತ್ಯವಾಗಿ ಹೆಚ್ಚಿನ ಒತ್ತು ನೀಡಬೇಕು” ಎಂದು ಆಗ್ರಹಿಸಿದ್ದರು.
“ಶಾಲಾ ಪ್ರಗತಿ, ನಿರ್ವಹಣೆಗೆ ಗ್ರಾಮ ಪಂಚಾಯತಿ ಆಡಳಿತದ ಹೊಂದಾಣಿಕೆಯೊಂದಿಗೆ ಮಕ್ಕಳ ಪೋಷಕರ ಎಸ್‌ಡಿಎಂಸಿ ಸಮಿತಿ ರಚಿಸಿದ್ದರೂ ಶಾಲೆಗಳು ಸಮಸ್ಯೆಯಿಂದ ಬಿಡುಗಡೆಗೊಂಡಿಲ್ಲ. ಅನೇಕ ಶಾಲಾ ಕಟ್ಟಡಗಳು ಸೋರುತ್ತಿವೆ. ಗೋಡೆ ಮೇಲೆ ಮಳೆ ನೀರು ಇಳಿದು ಅಪಾಯದ ಸ್ಥಿತಿಗೆ ತಲುಪಿವೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಈ ದಿನ.ಕಾಮ್ ಶಾಲೆಯ ಪರಿಸ್ಥಿತಿಯ ಬಗ್ಗೆ ವರದಿ ಮಾಡಿ ಅಧಿಕಾರಿಗಳ ಗಮನಕ್ಕೆ ತಂದಿತ್ತು. ಈಗ ಶಾಲೆಯ ಹಳೆ ಕೋಣೆಗಳನ್ನು ಕೆಡವಿ ಹೊಸ ಕೋಣೆಗಳ ನಿರ್ಮಾಣಕ್ಕೆ ಒಂದು ಕೋಟಿ 80 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎರಡು ಅಂತಸ್ತಿನ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಇದನ್ನು ಓದಿದ್ದೀರಾ? ಬಾಗಲಕೋಟೆ | ದೇವಸ್ಥಾನದ ಕಾರ್ಯಕ್ರಮದಲ್ಲಿ ‘ವಕ್ಫ್’ ವಿಚಾರ: ಶಾಸಕ ಯತ್ನಾಳ್‌ಗೆ ಸಾರ್ವಜನಿಕರಿಂದ ಛೀಮಾರಿ
ಈ ಬಗ್ಗೆ ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ಜೂನಿಯರ್ ಇಂಜಿನಿಯರ್ ಪ್ರದೀಪ್ ಪಾಟೀಲ, “ಮೊದಲ ಅಂತಸ್ತಿನಲ್ಲಿ ಆರು ಹಾಗೂ ಕೆಳಗಿನ ಅಂತಸ್ತಿನಲ್ಲಿಯೂ ಆರು ಕೋಣೆಗಳು ನಿರ್ಮಾಣ ಮಾಡುತ್ತಿದ್ದೇವೆ. ಆದಷ್ಟು ಶೀಘ್ರವೇ ಕಾಮಗಾರಿ ಮುಗಿಸಲಿದ್ದೇವೆ” ಎಂದು ತಿಳಿಸಿದ್ದಾರೆ.
ಶಾಲೆಯ ಪರಿಸ್ಥಿತಿಯ ಬಗ್ಗೆ ವರದಿ ಮಾಡಿದ್ದಕ್ಕೆ ಈ ದಿನ.ಕಾಮ್‌ಗೆ ಪೋಷಕರು ಹಾಗೂ ವಿದ್ಯಾರ್ಥಿಗಳು ಧನ್ಯವಾದ ಸಲ್ಲಿಸಿದ್ದಾರೆ.