ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದ ಅಂಗನವಾಡಿಗೆ ಕೊನೆಗೂ ‘ವಿದ್ಯುತ್ ಭಾಗ್ಯ’ ಲಭಿಸಿದೆ. ಹೌದು. ಇದಕ್ಕೆ ಕಾರಣವಾದದ್ದು ಈ ದಿನ.ಕಾಮ್.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೊಡ್ಡಮಾಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೆಳಗೋಡು ಗ್ರಾಮದ ಅಂಗನವಾಡಿ ಕೇಂದ್ರವು ಹಲವು ಮೂಲ ಸೌಕರ್ಯಗಳಿಂದ ವಂಚಿತವಾಗಿತ್ತು. ಮಕ್ಕಳು ಹಾಗೂ ಅಂಗನವಾಡಿ ಶಿಕ್ಷಕಿಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈ ದಿನ.ಕಾಮ್ ವಿಸ್ತಾರವಾಗಿ ವರದಿ ಹಾಗೂ ವಿಡಿಯೋ ವರದಿಯನ್ನು ಆಗಸ್ಟ್ 13ರಂದು ಪ್ರಕಟಿಸಿತ್ತು. ಈ ದಿನ ವರದಿಯ ಬೆನ್ನಲ್ಲೇ ಸಂಬಂಧಪಟ್ಟ ಅಧಿಕಾರಿಗಳು ಅಂಗನವಾಡಿಗೆ ಭೇಟಿ ನೀಡಿದ್ದು, ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ.
ಬೆಳಗೋಡು ಗ್ರಾಮದ ಅಂಗನವಾಡಿಗೆ ದಿನನಿತ್ಯ 10-15 ಕ್ಕಿಂತ ಹೆಚ್ಚು ಮಕ್ಕಳು ಬರುತ್ತಾರೆ. ಅಂಗನವಾಡಿಯಲ್ಲಿ ಮಕ್ಕಳಿಗೆ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದಾಗಿತ್ತು. ಮಕ್ಕಳಿಗೆ ಶೌಚಾಲಯಕ್ಕೆ ಹೋಗಬೇಕಾದರೆ ಕಾಡಿನ ಮಧ್ಯೆ ಹಾಗೂ ಹಸಿರು ಗಿಡ ಗಂಟಿಗಳ ಪೊದೆಗಳ ಮಧ್ಯೆ ಹೋಗಬೇಕಿತ್ತು. ಆ ಜಾಗಗಳಲ್ಲಿ ಹಾವು ಉಪಟಳಗಳು ಹಾಗೂ ಕೀಟಗಳ ಕಾಟ ಎದುರಾಗುತ್ತಿದ್ದವು.
ಸರಿಯಾದ ಶೌಚಾಲಯ ಹಾಗೂ ವಿದ್ಯುತ್ ವ್ಯವಸ್ಥೆ ಅಂಗನವಾಡಿಯಲ್ಲಿ ಇರಲಿಲ್ಲ. ಸರಿಯಾದ ಕುರ್ಚಿ,ಟೇಬಲ್ ವ್ಯವಸ್ಥೆ ಕೂಡ ಇರಲಿಲ್ಲ. ಅರ್ಧಕ್ಕೆ ನಿಲ್ಲಿಸಲಾಗಿದ್ದ ಶೌಚಾಲಯ ಹಾಗೂ ಅದಕ್ಕಾಗಿ ತೆಗೆದಿರುವ ಪಿಟ್ ಗುಂಡಿಯಲ್ಲಿ ನೀರು ಸೋರಿಕೆ ಉಂಟಾಗಿತ್ತು. ಅಂಗನವಾಡಿ ಅಡುಗೆ ಮನೆಯು ಪಕ್ಕದಲ್ಲಿರುವುದರಿಂದ ದುರ್ವಾಸನೆ ಬೀರುತ್ತಿದ್ದವು. ಇದರಿಂದಾಗಿ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಈದಿನ.ಕಾಮ್ ವಿಡಿಯೋ ಸಹಿತ ವರದಿ ಮಾಡಿತ್ತು.

ಈ ದಿನ.ಕಾಮ್ನ ವರದಿಯನ್ನು ಗಮನಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಓ ರಂಗನಾಥ್ ಮತ್ತು ಸೂಪರ್ ವೈಸರ್ ಶಿವಕುಮಾರಿ ಅವರು ಬೆಳಗೋಡು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಆ ಬಳಿಕ ಸಂಬಂಧಿಸಿದ ಇಲಾಖೆಯ ಮೂಲಕ ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿ ಅಳವಡಿಸಿದ್ದಾರೆ.
ಅಂಗನವಾಡಿ ಮಕ್ಕಳಿಗೆ ಕುಳಿತು ಕೊಳ್ಳುವುದಕ್ಕೆ ಬೆಂಚು, ಕುರ್ಚಿ, ಟೇಬಲ್, ಅಡುಗೆ ಮನೆ ಉಪಕರಣ, ಮಕ್ಕಳಿಗೆ ಪುಸ್ತಕ ಇಡುವುದಕ್ಕೆ ಟೇಬಲ್ ಮತ್ತು ಪಿಟ್ ಗುಂಡಿ ಸಮಸ್ಯೆ ಸರಿಪಡಿಸುತ್ತೇವೆಂದು ಸ್ಥಳಕ್ಕೆ ಬಂದು ಸಮಸ್ಯೆಯನ್ನು ಪರಿಶೀಲಿಸಿ ಕೆಲಸ ಮಾಡಿಸಿ ಕೊಡುತ್ತೇವೆಂದು ಭರವಸೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ರೇಣುಕಾಸ್ವಾಮಿ ಕೊಲೆ | ಹಾಸ್ಯನಟ ಚಿಕ್ಕಣ್ಣಗೆ ಮತ್ತೆ ಸಂಕಷ್ಟ?
ಅಂಗನವಾಡಿ ಸಮಸ್ಯೆಯನ್ನು ಬಗೆಹರಿಸಲು ವರದಿ ಮಾಡಿದ್ದಕ್ಕಾಗಿ ಈ ದಿನ. ಕಾಮ್ ತಂಡಕ್ಕೆ ಅಂಗನವಾಡಿಯ ಶಿಕ್ಷಕಿ ದ್ರಾಕ್ಷಾಯಿಣಿ, ಸಹಾಯಕಿ ಚಂದ್ರಕಲಾ ಹಾಗೂ ಪೋಷಕರು ಧನ್ಯವಾದ ಸಲ್ಲಿಸಿದ್ದಾರೆ.

ಗಿರಿಜಾ ಎಸ್ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.
Fine madam