ಒಂದೂವರೆ ತಿಂಗಳಿನಿಂದ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ಸರ್ವರ್ ಸಮಸ್ಯೆಯಿಂದ ಹಲವಾರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲಾಗದೆ ಅತಂತ್ರ ಸ್ಥಿತಿಯಲ್ಲಿದ್ದರು. ಈ ಬಗ್ಗೆ ಗಮನಿಸಿದ್ದ ಈ ದಿನ.ಕಾಮ್ ಸಂತ್ರಸ್ತ ವಿದ್ಯಾರ್ಥಿಗಳನ್ನು ಮಾತನಾಡಿಸಿ, ವರದಿ ಪ್ರಕಟಿಸಿತ್ತು.
ಈ ದಿನ.ಕಾಮ್ ವರದಿಯ ಬಳಿಕ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ ಮತ್ತೊಮ್ಮೆ ಅವಕಾಶ ನೀಡಿದ್ದು, ಅ.30ರವರೆಗೂ ಅವಧಿ ವಿಸ್ತರಿಸಿ ಅರ್ಜಿ ಹಾಕಲು ಅವಕಾಶ ಮಾಡಿಕೊಡಲಾಗಿದೆ.
ಹಾಸ್ಟೆಲ್‌ಗಳಲ್ಲಿ ಪ್ರವೇಶ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿತ್ತು. ಆದರೆ, ಸರ್ವರ್ ಸಮಸ್ಯೆಯಿಂದ ಅರ್ಜಿ ಸಲ್ಲಿಸಲಾಗದೆ, ಕೊನೆಯ ದಿನಾಂಕವು ಮುಗಿದ್ದರಿಂದ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದರು.
ಈ ಕುರಿತು ಈದಿನ.ಕಾಮ್‌ನಲ್ಲಿ ಅಕ್ಟೋಬರ್ 4ರಂದು “ಸರ್ವರ್ ಸಮಸ್ಯೆ : ಹಾಸ್ಟೆಲ್ ಪ್ರವೇಶದಿಂದ ವಂಚಿತರಾದ ವಿದ್ಯಾರ್ಥಿಗಳು” ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು. ಈ ವರದಿಯ ಲಿಂಕ್ ಅನ್ನು ಓದುಗರೋರ್ವರು ಎಕ್ಸ್(ಟ್ವಿಟ್ಟರ್) ಖಾತೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಸಿಎಂ ಕಚೇರಿಗೆ ಟ್ಯಾಗ್ ಮಾಡಿ, ಅರ್ಜಿ ಸಲ್ಲಿಸಲು ಮತ್ತೆ ಅವಕಾಶ ನೀಡುವಂತೆ ವಿನಂತಿ ಮಾಡಿಕೊಂಡಿದ್ದರು.
ಈ ಪೋಸ್ಟ್‌ಗೆ ಸಕರಾತ್ಮಕವಾಗಿ ಸ್ಪಂದಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, “ಸರ್ವರ್ ಸಮಸ್ಯೆ ಇಲ್ಲ, ಆದರೂ ಯಾವೊಬ್ಬ ವಿದ್ಯಾರ್ಥಿಯೂ ಹಾಸ್ಟೆಲ್‌ನಿಂದ ಹೊರಗುಳಿಯಬಾರದು ಎನ್ನುವುದೇ ಇಲಾಖೆಯ ಉದ್ದೇಶ” ಎಂದಿದ್ದರಲ್ಲದೇ, ಅರ್ಜಿ ಸಲ್ಲಿಸುವ ಅವಧಿಯನ್ನು ಮತ್ತೆ ವಿಸ್ತರಣೆ ಮಾಡುವ ಭರವಸೆ ನೀಡಿದ್ದರು.
ಅದರಂತೆ, ಪ್ರಸ್ತುತ ಇಲಾಖೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಅ.30ರವರೆಗೂ ಅವಧಿ ವಿಸ್ತರಿಸಿದ್ದು, ಅರ್ಜಿ ಹಾಕಲು ಅರ್ಹ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ.
ಅರ್ಜಿ ಹಾಕಲಾಗದೇ, ಕಷ್ಟಪಡುತ್ತಿದ್ದ ವಿದ್ಯಾರ್ಥಿಗಳು ಈಗ ಅರ್ಜಿ ಹಾಕಲು ಆರಂಭಿಸಿದ್ದು, ಅವಧಿ ವಿಸ್ತರಿಸಿದ ಇಲಾಖೆಗೆ ಹಾಗೂ ವರದಿ ಮಾಡುವ ಮೂಲಕ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಕ್ಕೆ ಈ ದಿನ.ಕಾಮ್‌ಗೆ ಕರೆ ಮಾಡಿ ಧನ್ಯವಾದ ತಿಳಿಸಿದ್ದಾರೆ.
ಇನ್ನೂ ಯಾರಾದರೂ ಅರ್ಜಿ ಸಲ್ಲಿಸದೆ ಇರುವವರು ಈ ಕೆಳಗಿನ ಲಿಂಕ್ ಬಳಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಅರ್ಜಿಯ ಕೊನೆಯ ದಿನಾಂಕವನ್ನು 31.10.2024 ರವರೆಗೆ ವಿಸ್ತರಿಸಲಾಗಿದೆ. ಕೆಳಗೆ ನೀಡಿರುವ ಲಿಂಕ್‌ನೊಂದಿಗೆ ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದು.
https://swdhmis.karnataka.gov.in/#/registration
ಅಗತ್ಯ ಮಾಹಿತಿಗಾಗಿ ನಮ್ಮ 24X7 ಸಹಾಯವಾಣಿ 9482300400 ಸಂಖ್ಯೆಗೆ ಕರೆ ಮಾಡಬಹುದು.
