ದೇವದುರ್ಗ ನಗರದ ಮುಖ್ಯ ರಸ್ತೆಯಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳು ಉರಿಯದೆ ಸಾರ್ವಜನಿಕರು ರಾತ್ರಿ ಹೊತ್ತು ಕತ್ತಲಲ್ಲಿ ತಿರುಗಾಡುವಂತಾಗಿದೆ ಎಂದು ಎಸ್‌ಡಿಪಿಐ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.
ನಗರದ ಮುಖ್ಯ ರಸ್ತೆಯ ಶಬರಿ ವೃತ್ತದಿಂದ ವಿ.ಎಮ್.ಮೇಟಿವರೆಗೆ ಅಳವಡಿಸಿರುವ ವಿದ್ಯುತ್ ದೀಪ ಸಂಪೂರ್ಣ ಕೆಟ್ಟ ಹೋಗಿವೆ, ಹೀಗಾಗಿ ಜನರಿಗೆ ರಾತ್ರಿ ವೇಳೆ ಓಡಾಡಲು ತೊಂದರೆಯಾಗುತ್ತಿದೆ. ಇನ್ನು ಮುಖ್ಯ ರಸ್ತೆ ಮೇಲೆ ಬೇಕಾಬಿಟ್ಟಿಯಾಗಿ ತಿರುಗಾಡುವ ಬಿಡಾಡಿ ದನಗಳ ಹಾವಳಿಯಿಂದ ವಾಹನ ಸವಾರರು ಪರದಾಡುತ್ತಿದ್ದಾರೆʼ ಎಂದರು.
ಈ ಬಗ್ಗೆ ಹಲವು ಬಾರಿ ವಿವಿಧ ಸಂಘಟನೆಗಳ ನೇತ್ರತ್ವದಲ್ಲಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಅಧಿಕಾರಿಗಳು ಇತ್ತ ಗಮನಹರಿಸಿ ತ್ವರಿತವಾಗಿ ಬೀದಿ ದೀಪ ದುರಸ್ತಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕುʼ ಎಂದು ಆಗ್ರಹಿಸಿದರು.
ಬಿಡಾಡಿ ದನಗಳು ರಸ್ತೆ ಮೇಲೆ ವಾಸ್ತವ್ಯ ಹೂಡುವ ಕಾರಣದಿಂದ ವಾಹನ ಸವಾರರು ಬೇಸತ್ತು ಹೋಗಿದ್ದಾರೆ. ಈ ಕಾರಣಕ್ಕೆ ಅಪಘಾತಗಳು ನಡೆದ ಉದಾಹರಣೆಗಳಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಈ ವೇಳೆ ಎಸ್‌ಡಿಪಿಐ ತಾಲ್ಲೂಕಧ್ಯಕ್ಷ ರಿಯಾಜ್ ಬಾಳೆ ಹಾಗೂ ಕಾರ್ಯಕರ್ತರಿದ್ದರು.
