ಮದ್ಯ ಹಾಗೂ ಮಾದಕ ವಸ್ತುಗಳ ಸೇವೆಯಿಂದ ಅನೇಕ ಕುಟುಂಬಗಳು ವಿವಿಧ ರೀತಿಯ ಸಮಸ್ಯೆಗಳು ಎದುರಿಸುತ್ತಿದ್ದು, ಎಲ್ಲರೂ ವ್ಯಸನ ಮುಕ್ತರಾಗಲು ಪಣತೊಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.
ಗುರುವಾರ ಬೀದರ್ ನಗರದ ಡಾ.ಚನ್ನಬಸವ ಪಟ್ಟದೇವರು ರಂಗದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ʼದೇಶದಲ್ಲಿ ಲಕ್ಷಾಂತರ ಜನರು ವಿವಿಧ ರೀತಿಯ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಪ್ರೌಢ ಶಿಕ್ಷಣದ ಹಂತದಲ್ಲಿಯೇ ಮಾದಕ ವ್ಯಸನಕ್ಕೆ ಬಲಿಯಾದ ಯುವಕರು ಅದರಿಂದ ಹೊರಬರಲಾಗದೆ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ದೇಶದ ಭವಿಷ್ಯ ರೂಪಿಸಬೇಕಾದ ಯುವ ಸಮೂಹ ಮೋಜಿಗಾಗಿ ಮಾದಕ ವ್ಯಸನಿಗಳಾಗುತ್ತಿರುವುದು ವಿಷಾದನೀಯʼ ಎಂದು ಬೇಸರ ವ್ಯಕ್ತಪಡಿಸಿದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ʼಮಹಾಂತ ಶಿವಯೋಗಿಗಳು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಆಂದೋಲನ ನಡೆಸಿ ಅರಿವು ಮೂಡಿಸಿದರು. ಸಾವಿರಾರು ಜನರನ್ನು ದುಶ್ಚಟಗಳಿಂದ ಮುಕ್ತಗೊಳಿಸಿದ್ದರು. ವ್ಯಸನ ಮುಕ್ತ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ದೇಶ, ವಿದೇಶದಲ್ಲಿ ಸಂಚರಿಸಿ ಜನರ ದುಶ್ಚಟಗಳನ್ನೆ ಭಿಕ್ಷೆ ರೂಪದಲ್ಲಿ ತಮ್ಮ ಜೋಳಿಗೆಯಲ್ಲಿ ಸಂಗ್ರಹಿಸಿದ್ದರು. ಸರ್ಕಾರದಿಂದ ಅವರ ಜನ್ಮದಿನವನ್ನು ವ್ಯಸನ ಮುಕ್ತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆʼ ಎಂದರು.


ಲಾತೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಅಮರನಾಥ ಸೋಲಪುರ ಮಾತನಾಡಿ, ʼಯುವಜನತೆ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ಅನೇಕ ಸಾಂಕ್ರಾಮಿಕ ರೋಗಗಳು ಬಂದಂತೆ ಇಂದು ಅದೇ ರೀತಿ ವ್ಯಸನಗಳು ಹರಡುತ್ತಿವೆʼ ಎಂದರು.
ವಿಜಯ ಮಾಹಾಂತೇಶ ಚಾರಿಟೇಬಲ್ ಟ್ರಸ್ಟ್ ಡಿಗ್ರಿ ಕಾಲೇಜಿನ ಅಧ್ಯಕ್ಷ ರಾಚಪ್ಪ ಮಾಶೆಟ್ಟಿ ಮಾತನಾಡಿ, ʼದುಶ್ಚಟಗಳಿಗೆ ಅಂಟಿಕೊಂಡ ವ್ಯಕ್ತಿಗೆ ಎಲ್ಲಾ ರೀತಿಯಿಂದ ಹಾನಿಯಿದೆ, ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೇ ತಮ್ಮ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಒಲವು ತೋರಬೇಕು ಮತ್ತು ಮೊಬೈಲ್ ಹೆಚ್ಚಾಗಿ ಬಳಸಬಾರದುʼ ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಅವರು ಎಲ್ಲರಿಗೂ ವ್ಯಸನ ಮುಕ್ತ ಪ್ರತಿಜ್ಞಾ ವಿಧಿ ಬೋಧಿಸಿದರು. ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಯನಾಡಿಗಾದದ್ದು ನಮ್ಮಲ್ಲೂ ಆಗಬಹುದಲ್ಲವೇ?
ಕಾರ್ಯಕ್ರಮದಲ್ಲಿ ಜಾನಪದ ಅಕಾಡೆಮಿ ಸಹ ಸದಸ್ಯ ವಿಜಯಕುಮಾರ ಸೋನಾರೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ ಶಾಬಾದಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸುರೇಶ ಜಿ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಮಹೇಶ ಮಾಶೆಟ್ಟಿ, ಶಿವಶಂಕರ ಟೋಕರೆ ಸೇರಿದಂತೆ ವಿವಿಧ ಶಾಲಾ,ಕಾಲೇಜಿನ ಮಕ್ಕಳು, ಉಪನ್ಯಾಸಕರು, ಶಿಕ್ಷಕರು ಹಾಗೂ ಇತರರು ಉಪಸ್ಥಿತರಿದ್ದರು.