ಉಡುಪಿ ಜಿಲ್ಲೆಯ ಗ್ರಾಮವೊಂದಕ್ಕೆ ಗುರುವಾರ ದಾಳಿ ನಡೆಸಿರುವ ಅಬಕಾರಿ ಇಲಾಖೆಯ ಅಧಿಕಾರಿಗಳು, ಅಕ್ರಮವಾಗಿ ದಾಸ್ತಾನಿರಿಸಿದ್ದ ಭಾರೀ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬೋಳ ಗ್ರಾಮದ ಎರಡು ಮನೆಗಳಲ್ಲಿ ಗೋವಾ ರಾಜ್ಯದ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ 15 ಲಕ್ಷ ರೂ.ಮೌಲ್ಯದ ಮದ್ಯದ ಬಾಕ್ಸ್ ಗಳನ್ನು ಅಬಕಾರಿ ಇಲಾಖೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದೆ.
ಅಬಕಾರಿ ಉಪ ಆಯುಕ್ತ ಬಿಂದು ಅವರ ನೇತೃತ್ವದಲ್ಲಿ ಬೋಳದ ಅವಿನಾಶ್ ಮಲ್ಲಿ ಎಂಬವರ ಮನೆಗೆ ದಾಳಿ ನಡೆಸಿದ್ದು, ದುಬಾರಿ ಮೌಲ್ಯದ ಮದ್ಯದ ಬಾಟಲಿಗಳು ಬಾಕ್ಸ್‌ಗಳು ಕೂಡ ಪತ್ತೆಯಾಗಿದೆ. 200ಕ್ಕೂ ಅಧಿಕ ಬಾಕ್ಸ್‌ಗಳನ್ನು ವಶಕ್ಕೆ ಪಡೆದಿದ್ದು, ಇವು ನಕಲಿ ಮದ್ಯವೋ, ಅಸಲಿ ಮದ್ಯವೋ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.

ಗ್ರಾಮೀಣ ಭಾಗದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮದ್ಯ ದಾಸ್ತಾನು ಮಾಡಿರುವ ಬಗ್ಗೆ ಅಧಿಕಾರಿಗಳು ದಂಗಾಗಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಪರಿಶೀಲನೆ ನಡೆಯುತ್ತಿದ್ದು, ತನಿಖೆ ನಡೆಸಲಾಗುತ್ತಿದೆ. ಶೀಘ್ರ ವಿವರವಾದ ಮಾಹಿತಿ ನೀಡಲಾಗುವುದು ಎಂದು ಅಬಕಾರಿ ಡಿಸಿ ಬಿಂದು ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡನಿಗೆ ಸೇರಿದ್ದು ಎಂದು ಬಿಜೆಪಿ ಟ್ವೀಟ್
ಈ ಬೆಳವಣಿಗೆಯ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕ ಐಟಿ ಸೆಲ್, “ಉಡುಪಿಯ ಕಾಂಗ್ರೆಸ್ ಮುಖಂಡರೊಬ್ಬರ ಮನೆಯಲ್ಲಿ 70 ಲಕ್ಷ ಮೌಲ್ಯದ ವಿಸ್ಕಿ ಪತ್ತೆಯಾಗಿದೆ. ಇದು ಕೇವಲ ಒಬ್ಬ ಕಾಂಗ್ರೆಸ್ ನಾಯಕನಾಗಿದ್ದರೆ, ಇತರರು ಎಷ್ಟು ಮರೆಮಾಚುತ್ತಿದ್ದಾರೆ? ಅಬಕಾರಿ ಹಗರಣವು 700 ಕೋಟಿ ರೂ.ಗಳನ್ನು ಮೀರಿದೆ. ಮಹಾರಾಷ್ಟ್ರ ಚುನಾವಣೆಗೆ ಕರ್ನಾಟಕಕ್ಕೆ ಇನ್ನೂ ಎಷ್ಟು ಹಣ ಬೇಕು? ರಾಹುಲ್ ಗಾಂಧಿಯವರು ಈ ಬಗ್ಗೆ ಉತ್ತರಿಸಬೇಕು” ಎಂದು ತಿಳಿಸಿದೆ.
Whiskey worth 70 lakh found at a Congress leader's house in Udupi! If this is just one Congress leader, how much are others hiding? The excise scam is way beyond 700 crores. How much more money does Karnataka need to fund for Maharashtra elections, Mr. Balak Buddi @RahulGandhi?… pic.twitter.com/I4cRhMvoUj
— BJP Karnataka (@BJP4Karnataka) November 14, 2024
