ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ಮನನೊಂದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಶಿವಲಿಂಗಪ್ಪ ನಾಗಪ್ಪ ಜೇವರ್ಗಿ (60) ಮೃತರು. ರೈತನಿಗೆ 2.36 ಎಕರೆ ಜಮೀನಿನಲ್ಲಿ ಕೃಷಿಗಾಗಿ ಜೇವರ್ಗಿ ತಾಲೂಕಿನ ನೆಲೋಗಿ ಶಾಖೆಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ನಲ್ಲಿ 1.70 ಲಕ್ಷ ಹಾಗೂ ಗ್ರಾಮದ ಖಾಸಗಿ ಅವರ ಬಳಿ 5 ಲಕ್ಷ ಸೇರಿ ಒಟ್ಟು 6.70 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು.
ಸಾಲ ತೀರಿಸುವುದು ಹೇಗೆ ಎಂದು ಭಯಗೊಂಡು ಸೋಮವಾರ ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮೃತರ ಸಂಬಂಧಿ ಶರಣಬಸಪ್ಪ ಸಲಗರ್ ಅವರು ದೂರು ಸಲ್ಲಿಸಿದ್ದು, ನೆಲೋಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.