ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ʼರೈತರು ಕೃಷಿ ಪಂಪ್ ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ರೈತರೇ ವೆಚ್ಚ ಭರಿಸಲು ಸೂಚಿಸಿರುವ ಆದೇಶ ಹಿಂಪಡೆಯಬೇಕು. 2 ರಿಂದ 3 ಲಕ್ಷ ಹಣವನ್ನು ರೈತರು ಭರಿಸಲು ಸಾಧ್ಯವಾಗುದಿಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼರಾಜ್ಯದಲ್ಲಿ ಕಳೆದ ವರ್ಷ ಏಪ್ರಿಲ್‌ನಿಂದ ಈವರಗೆ 1182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ ಅತಿಹೆಚ್ಚು ಯುವ ರೈತರೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೂಡಲೇ ಸರ್ಕಾರ ರೈತರಲ್ಲಿ ಆತ್ಮಸೈರ್ಯ ಹೆಚ್ಚಿಸಲು ಮುಂದಾಗಬೇಕು. ಕೃಷಿ ಬೆಲೆ ಆಯೋಗವನ್ನು ಸಬಲೀಕರಣಗೊಳಿಸಿ ರಾಜ್ಯ ಸರ್ಕಾರವೇ ಬೆಂಬಲ ಬೆಲೆ ನಿಗದಿಪಡಿಸಬೇಕು. ಬ್ಯಾಂಕ್‌ಗಳು ಬರಗಾಲದಲ್ಲೂ ಒತ್ತಾಯದಿಂದ ಸಾಲ ವಸೂಲಾತಿಗೆ ಮಾಡುತ್ತಿರುವುದು ತಡೆಯಬೇಕುʼ ಎಂದು ಒತ್ತಾಯಿಸಿದರು.
ʼಎಲ್ಲ ಬೆಳೆಗಳಿಗೆ ಫಸಲ್ ಭೀಮಾ ಯೋಜನೆಯಡಿ ವಿಸ್ತರಿಸಿ ಗ್ರಾಮ ಮಟ್ಟದಲ್ಲಿ ಬೆಳೆಹಾನಿ ನಿರ್ಧರಿಸಿ ವಿಮಾ ಕಂಪನಿಗಳು ಬಾಕಿ ಉಳಿಸಿಕೊಂಡ ಬೆಳೆಹಾನಿ ಪರಿಹಾರ ಬಿಡುಗಡೆಗೊಳಿಸಬೇಕು, ಫಸಲ್ ಭೀಮಾ, ಪಹಣಿ , ಪಕ್ಕ ಪೋಡಿ, ಹದ್ದುಬಸ್ತು ಶುಲ್ಕ ಹೆಚ್ಚಳ ಹಿಂಪಡೆಯಬೇಕು. ಖರೀದಿ ಕೇಂದ್ರದ ಮೂಲಕ ರೈತರಿಂದ ಜೋಳ, ರಾಗಿ ಖರೀದಿಸಿ ಬಾಕಿ ಉಳಿಸಿಕೊಂಡ ರೈತರ ಹಣ ಪಾವತಿಸಬೇಕುʼ ಎಂದರು.
ಅರಣ್ಯ ಭೂಮಿ ಸಾಗುವಳಿ ರೈತರಿಗೆ ಪಟ್ಟಾ ಭೂಮಿ ನೀಡುವುದು, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಮತ್ತು ಗೋಹತ್ಯೆ ನಿಷೇದ ಕಾಯ್ದೆ ಹಿಂಪಡೆಯಬೇಕು. ತುಂಗಭದ್ರ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಅನಧಿಕೃತ ನೀರಾವರಿ ತಡೆದು ಕೆಳಭಾಗದ ರೈತರ ಜಮೀನಿಗೆ ನೀರು ಒದಗಿಸಬೇಕು. ನಾರಾಯಣಪುರ ಬಲದಂಡೆ ಕಾಲುವೆ 18 ವಿತರಣಾ ಕಾಲುವೆ ದುರಸ್ತಿ ಅರಬರೆಯಾಗಿದ್ದು ಕಳಪೆಯಾಗಿದೆ. ಕೂಡಲೇ ಗುಣಮಟ್ಟ ಕಾಮಗಾರಿ ಪೂರ್ಣಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ರೈತ ಮುಖಂಡರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್-ಬೆಂಗಳೂರು ವಿಮಾನ ಸೇವೆ: 2 ವಾರದಲ್ಲಿ ವರದಿ ಸಲ್ಲಿಸಲು ಸಚಿವ ಎಂ.ಬಿ.ಪಾಟೀಲ್ ಸೂಚನೆ
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ, ವೆಂಕಪ್ಪ ಕಾರಬಾರಿ, ಮಲ್ಲಣ್ಣದಿನ್ನಿ, ಬಸನಗೌಡ ಮಲ್ಲಿಗೆಮಡಗು, ಲಿಂಗಾರೆಡ್ಡಿ ಪಾಟೀಲ್, ಗೋವಿಂದ ನಾಯಕ, ಮಲ್ಲಮ್ಮ ಹುನಕುಂಟಿ, ಸಿದ್ದಯ್ಯಸ್ವಾಮಿ ಮಾನವಿ, ಹುಚ್ಚಪೀರಸಾಬ ಮಲ್ದಕಲ್, ಉಮಣ್ಣ ಮಲದಕಲ್, ದೇವರಾಜ ನಾಯಕ, ಬ್ರಹ್ಮಯ್ಯ ಆಚಾರಿ, ರವಿಕುಮಾರ ಗಬ್ಬೂರು, ಸೂಗರೆಡ್ಡಿ ಕುನ್ನಿ, ಕಲ್ಲೂರಾಯ, ಬಯ್ಯಾರೆಡ್ಡಿ, ಶಿವರಾಜ, ಚನ್ನಬಸವ, ವೀರೇಶ ಗವಿಗಟ್ಟ, ಶಂಕ್ರಪ್ಪಗೌಡ, ರಮೇಶ ಅಬಕಾರಿ ಸುಂಕೇಶ್ವರಹಾಳ ಸೇರಿದಂತೆ ಅನೇಕರಿದ್ದರು.