ವಾಟದಹೊಸಹಳ್ಳಿ ಅಮಾನಿ ಭೈರಸಾಗರ ಕೆರೆ ನೀರನ್ನು ನಗರಕ್ಕೆ ಹರಿಸುವಂತೆ ನಗರಸಭೆ ಸದಸ್ಯರು ಶಾಸಕರಿಗೆ ಮನವಿ ಸಲ್ಲಿಸಿದ್ದು, ಈ ವಿಚಾರದಲ್ಲಿ ಶಾಸಕರ ಏಕಪಕ್ಷೀಯ ನಿರ್ಧಾರ ಸರಿಯಲ್ಲ ಎಂದು ವಾಟದಹೊಸಹಳ್ಳಿ ಕೆರೆ ಅಚ್ಚುಕಟ್ಟು ವೇದಿಕೆಯ ಮಾಳಪ್ಪ ಹೇಳಿದರು.
ಗೌರಿಬಿದನೂರು ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಟದಹೊಸಹಳ್ಳಿ ಭಾಗದ ಬಹುತೇಕ ರೈತರು ವ್ಯವಸಾಯವನ್ನೇ ನಂಬಿ ಬದುಕುತ್ತಿದ್ದು, ಮಳೆಯಾಧಾರಿತವಾಗಿರುವ ಕೆರೆ ನೀರನ್ನು ನಗರಕ್ಕೆ ಹರಿಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಶಾಸಕರು ಈ ಭಾಗದ ರೈತರೊಂದಿಗೆ ಸಾಧಕ ಬಾದಕಗಳನ್ನು ಚರ್ಚಿಸದೆ ಏಕಪಕ್ಷಿಯ ನಿರ್ಧಾರ ಕೈಗೊಂಡಿರುವುದು ಖಂಡನೀಯ ಎಂದರು.
ನಗರದಲ್ಲಿ ಇತ್ತೀಚಿಗೆ ನೀರಿಗಾಗಿ ನಡೆದ ಜಾಥಾದಲ್ಲಿ ನಗರಸಭೆ ನಾಮ ನಿರ್ದೇಶಿತ ಸದಸ್ಯರು ನೀಡಿರುವ ಹೇಳಿಕೆ ಖಂಡನೀಯ. ಅಲ್ಲಿ ರೈತರಿಲ್ಲ, ಕೆಲವರಿಂದ ಹಣ ಪಡೆದು ಹೋರಾಟವನ್ನು ಮಾಡಿದ್ದಾರೆ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ಅವರು ರೈತರಾದರೆ ಬಂದು ವಿದುರಾಶ್ವತಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಜನರನ್ನು ರೊಚ್ಚಿಗೆಬ್ಬಿಸುವ ಮಾತುಗಳನ್ನಾಡಿದ್ದಾರೆ. ಈ ಮೂಲಕ ನಗರಸಭೆ ಸದಸ್ಯರು ನಾಲಿಗೆಯನ್ನು ಹರಿಬಿಟ್ಟಿರುವುದು ಅಕ್ಷಮ್ಯ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.
ರೈತನಾಗಲು ಇರುವ ಮಾನದಂಡವಾದರೂ ಏನು?. ಈ ಹೇಳಿಕೆಯನ್ನು ವಾಪಾಸ್ ಪಡೆಯಬೇಕು ಹಾಗೂ ವಾಟದಹೊಸಹಳ್ಳಿ ರೈತರಿಗೆ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಅವರ ಮನೆ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು. ವಾಟದಹೊಸಹಳ್ಳಿಯ ಗ್ರಾಮ ಪಂಚಾಯತ್ ಆವರಣದಿಂದ ನಗರಸಭೆವರೆಗೆ ಜಾಥಾ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ರೈತ ಮುಖಂಡ ಹರ್ಷವರ್ಧನ್ ರೆಡ್ಡಿ ಮಾತನಾಡಿ, ಶಾಸಕರು ಮತ್ತು ಸದಸ್ಯರು ಎತ್ತಿನ ಹೊಳೆ ನೀರನ್ನು ವಾಟದಹೊಸಹಳ್ಳಿ ಕೆರೆಗೆ ಹರಿಸಿ, ಇಲ್ಲಿನ ನೀರನ್ನು ತೆಗೆದುಕೊಂಡು ಹೋಗುವುದಾಗಿ ಹೇಳುತ್ತಿದ್ದಾರೆ. ಆದರೆ ವಾಟದಹೊಸಹಳ್ಳಿ ಕೆರೆಯು ನೀರಿನ ಶೇಖರಣಾ ಸಾಮರ್ಥ್ಯ ಕಳೆದುಕೊಂಡಿದೆ ಎಂದು ಸಣ್ಣ ನೀರಾವರಿ ಇಲಾಖೆಯವರೇ ತಿಳಿಸುತ್ತಿದ್ದಾರೆ. ಎತ್ತಿನ ಹೊಳೆ ನೀರು ಈವರೆಗೂ ಒಂದು ಕೆರೆಗೂ ಹರಿದಿಲ್ಲ ಮತ್ತು ಈಗ ಈ ಯೋಜನೆ ಬೇರೆ ಬೇರೆ ಜಿಲ್ಲೆಗಳಿಗೂ ವ್ಯಾಪಿಸಿದೆ. ಇದು ನಗರಸಭೆ ಚುನಾವಣೆಗೆ ನಡೆಯುತ್ತಿರುವ ಗಿಮಿಕ್ ಅಷ್ಟೇ ಎಂದು ಕುಟುಕಿದರು.
ಇದರಿಂದ ವಾಟದಹೊಸಹಳ್ಳಿ ಮತ್ತು ನಗರ ಭಾಗದ ಜನತೆಗೆ ಮಾಡುತ್ತಿರುವ ಮೋಸವಾಗಿದೆ. ನಗರ ಭಾಗದಲ್ಲಿರುವ ಕೆರೆಗಳನ್ನು ಮೇಲ್ದರ್ಜೆಗೇರಿಸಿ ಪರ್ಯಾಯ ಯೋಜನೆಯನ್ನು ರೂಪಿಸಿಕೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ರೈತ ಅಮರನಾರಾಯಣ ರೆಡ್ಡಿ ಮಾತನಾಡಿ, ನಗರ ಭಾಗದಲ್ಲಿರುವ ಮರಳೂರು, ಗೊಟಕನಾಪುರ, ಕಲ್ಲೂಡಿ, ಕೆರೆಗಳನ್ನು ಮೇಲ್ದರ್ಜೆಗೇರಿಸಿ, ಮಳೆ ಬಂದಾಗ ಉತ್ತರ ಪಿನಾಕಿನಿ ನದಿ ನೀರನ್ನು ತುಂಬಿಸಿಕೊಂಡು, ನಗರಭಾಗದಲ್ಲಿ ಕುಡಿಯಲು ಬಳಸಬಹುದು ಎಂದರು.
ರೈತ ಮಧು ಸೂರ್ಯನಾರಾಯಣ ರೆಡ್ಡಿ ಮಾತನಾಡಿ, ನಗರದಲ್ಲಿನ ಕೆರೆಗಳಲ್ಲಿ ನೀರನ್ನು ಸಂಗ್ರಹಿಸಿದರೆ, ನಗರಕ್ಕೆ ಬೇಕಾಗುವುದಕ್ಕಿಂತ ಹೆಚ್ಚಿನ ನೀರನ್ನು ಸಂಗ್ರಹಣೆ ಮಾಡಬಹುದು. ಆದರೆ ಶಾಸಕರು ಎತ್ತಿನಹೊಳೆ ನೀರು ಬರುವ ಮುನ್ನವೇ ಟೆಂಡರ್ ಪ್ರಕ್ರಿಯೆ ಮುಗಿಸಿ ಪೈಪ್ ಲೈನ್ ಅಳವಡಿಸಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಶಾಸಕರು ನಗರದ ಭಾಗದ ಜನರ ಮನವಿಯನ್ನು ಮಾತ್ರ ಸ್ವೀಕರಿಸಿದ್ದಾರೆ. ಗ್ರಾಮೀಣ ಭಾಗದ ಜನರ ಮನವಿಯನ್ನು ಸ್ವೀಕರಿಸದೆ ತಾರತಮ್ಯ ಮಾಡುತ್ತಿದ್ದಾರೆ. ಈ ಯೋಜನೆಗೆ ಎಲ್ಲಾ ಪಂಚಾಯಿತಿಗಳ ವಿರೋಧವಿದೆ. ಇಲ್ಲಿಗೆ ಈ ಯೋಜನೆಯನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಂಡಪಲ್ಲಿ ಮೂರ್ತಿ, ನಾಗರಾಜು, ಚಿನ್ನಪ್ಪ, ಗಂಗಾಧರ್, ಕೃಷ್ಣಮೂರ್ತಿ, ಪ್ರಭಾಕರ್ ರೆಡ್ಡಿ, ರಾಜು, ವಿ ಎಂ ಸಿ ಮಂಜುನಾಥ್, ಕೆಂಪ ರಂಗಪ್ಪ, ಶಂಕರ್ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.