ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಜನ್ಮದಿನದ ಅಂಗವಾಗಿ ಬೆಂಗಳೂರಿನ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದಿಂದ ಅದ್ದೂರಿಯಾಗಿ ರೈತರ ರಥಯಾತ್ರೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾ. ಸಂತೋಷ್ ಹೆಗಡೆ ನೆರವೇರಿಸಿದರು. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 170ಕ್ಕೂ ಹೆಚ್ಚು ರೈತರು, ಹಾಲು ಉತ್ಪಾದಕರು, ರೈತ ಮಹಿಳೆಯರು ಹಾಗೂ ಕಲಾವಿದರಿಗೆ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪ್ರದಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಶಿವಮೊಗ್ಗದ ಶ್ರೀ ಪಲ್ಲಕ್ಕಿ ನಾರಾಯಣ ಸ್ವಾಮೀಜಿ ಹಾಗೂ ತಳ್ಳಿಹಾಳ ಸಂಸ್ಥಾನ, ಕೋಡಿಮಠ ಕಾಲಜ್ಞಾನ ಬ್ರಹ್ಮ ಸದ್ಗುರು ಶ್ರೀ ಶರಣಬಸವ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಮಂಜುನಾಥ ಬಾಬು, ಸಮಾಜ ಸೇವಕಿ ಅನು ಅಮ್ಮ, ಉಷಾ ಜಮದಗ್ಮಿ, ಶಾಸಕರಾದ ಕೆಂಚನೂರ್ ಶಂಕರ್, ರಾಜಣ್ಣ, ಬಾಗಲಕೋಟೆ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಮಹಾಂತೇಶ ಹಟ್ಟಿ, ಜೇನು ಕೃಷಿಕ ಶಿರಸಿಯ ಮಧುಕೇಶ್ವರ ಹೆಗ್ಡೆ, ಕುಂದಾಪುರ ದಿನಕರ ಶೆಟ್ಟಿ, ಸಮಾಜ ಸೇವಕಿ ಡಾ. ಪುಷ್ಪ ಹಿರೇಮಠ್, ಶೈಲೇಂದ್ರ ನಾಜರೆ, ಅಶೋಕ್, ಮಹೇಂದ್ರ ಜೈನ್, ಸಂಘದ ಅಧ್ಯಕ್ಷ ಎಂ ಪ್ರಕಾಶ್ ತಿಮ್ಲಾಪುರ, ರಾಜ್ಯ, ಜಿಲ್ಲೆ, ಹೋಬಳಿ ಮಟ್ಟದ ಪದಾಧಿಕಾರಿಗಳು, ಮಹಿಳಾ ಘಟಕದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಬೆಂಗಳೂರು | ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಿ : ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್
ರಾಜ್ಯ ಕಾರ್ಯಾಧ್ಯಕ್ಷ ಎಂ. ಬಸವರಾಜ್ ಪ್ರಾಸ್ತಾವಿಕ ಭಾಷಣ ಮಾಡಿದರು. ಚಲನಚಿತ್ರ ನಿರ್ದೇಶಕ ಸುನಿಲ್ ಕುಂಬಾರ್ ಮತ್ತು ರೂಪ ಅವರ ಪೂರ್ವ ಯೋಜನೆಯಂತೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಅನು ಅಮ್ಮ ತಮ್ಮ ಭಾಷಣದಲ್ಲಿ “ರೈತ ಬೆಳೆದರೆ ಮಾತ್ರ ದೇಶ ಬೆಳೆಯುತ್ತದೆ. ರೈತನನ್ನು ಕಡೆಗಣಿಸಿದರೆ ಬಡತನ ನಿಶ್ಚಿತ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.