- ಕಾವೇರಿ ನೀರು ತಮಿಳುನಾಡಿಗೆ ಬಿಡುಗಡೆ ಮಾಡುವ ಮೂಲಕ ರಾಜ್ಯ ಸರ್ಕಾರ ತಪ್ಪು ಮಾಡುತ್ತಿದೆ.
- ಕಾವೇರಿ, ಕೃಷ್ಣ, ಗೋದಾವರಿ, ತುಂಗಭದ್ರಾ ಹಾಗೂ ಕಾರಂಜಾ ನದಿಗಳ ನೀರು ರಕ್ಷಿಸಿ ರೈತರ ಹಿತ ಕಾಪಾಡಬೇಕು.
ಬೀದರ್ ಜಿಲ್ಲೆಯ ಬಸವಕಲ್ಯಾಣ ಹಾಗೂ ಹುಲಸೂರು ತಾಲ್ಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದ್ದು, ಸರ್ಕಾರ ಶೀಘ್ರವೇ ಬರ ಪರಿಹಾರ ಹಾಗೂ ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಒತ್ತಾಯಿಸಿದರು.
ಬಸವಕಲ್ಯಾಣ ನಗರದಲ್ಲಿ ತಾಲೂಕು ಘಟಕದ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ದಾರ್ ಶಾಂತಗೌಡ ಬಿರಾದರ್ ಅವರಿಗೆ ಸಲ್ಲಿಸಿ, ವಿವಿಧ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿದರು.
“ಕೇಂದ್ರ ಸರ್ಕಾರ ಕಬ್ಬಿನ ಎಫ್‌ಪಿಆರ್ ದರ ನಿಗದಿಪಡಿಸಿದ ನಂತರ ಜಿಲ್ಲೆಯ ಎಲ್ಲಾ ಕಾರ್ಖಾನೆಗಳು ರೈತರ ಸಭೆ ನಡೆಸಿ ಕಾರ್ಖಾನೆ ಪ್ರಾರಂಭಿಸಬೇಕು. ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಬೆಳೆ ರಕ್ಷಣೆಗೆ ಅರಣ್ಯ ಇಲಾಖೆ ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಉಪಾಯ ಹುಡುಕಬೇಕು” ಎಂದರು.
“ಕಾವೇರಿ, ಕೃಷ್ಣ, ಗೋದಾವರಿ, ತುಂಗಭದ್ರಾ ಹಾಗೂ ಕಾರಂಜಾ ನದಿ ಕರ್ನಾಟಕ ರಾಜ್ಯಕ್ಕೆ ಸೇರಿದ್ದು, ಅವುಗಳ ನೀರು ರಕ್ಷಣೆ ಜೊತೆಗೆ ರಾಜ್ಯಕ್ಕೆ ಆದ್ಯತೆ ನೀಡಬೇಕು, ಕಾವೇರಿ ನೀರು ತಮಿಳುನಾಡಿಗೆ ಬಿಡುಗಡೆ ಮಾಡುವ ಮೂಲಕ ರಾಜ್ಯ ಸರ್ಕಾರ ತಪ್ಪು ಮಾಡುತ್ತಿದೆ. ರಾಜ್ಯದ ನೆಲ, ಜಲ ರೈತರ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಿದ್ಯುತ್ ತಂತಿ ತಗುಲಿ ರೈತ ದಂಪತಿ ಸಾವು
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ರುದ್ರಯ್ಯ ಸ್ವಾಮಿ, ಉಪಾಧ್ಯಕ್ಷ ಸಂತೋಷ ಗುದುಗೆ, ಪ್ರಧಾನ ಕಾರ್ಯದರ್ಶಿ ಅಣವೀರ ಬಿರಾದರ್, ಬಸವರಾಜ ಬಂಡೆ, ರಾಜಕುಮಾರ ಹೊಳ್ಳೆ, ಮಹೇಶ ಬಂಡೆ, ಕಾಶಿನಾಥ, ಅನೀಲ ಮರಪಳ್ಳೆ ಸೇರಿದಂತೆ ಇತರರಿದ್ದರು.