ಬಾಗೇಪಲ್ಲಿ ತಾಲೂಕಿನಲ್ಲಿ ಸರಿಯಾಗಿ ಮಳೆ ಬಾರದ ಹಿನ್ನೆಲೆಯಲ್ಲಿ ರೈತರಿಗೆ ಸಂಕಷ್ಟ ಎದುರಾಗಿದ್ದು, ಸರ್ಕಾರ ಕೂಡಲೇ ತಾಲೂಕಿನ ಬರಪೀಡಿತ ಎಂದು ಘೋಷಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ತಾಲೂಕಿನ ಪಾತಪಾಳ್ಯ ಹೋಬಳಿಯ ಬಿಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಉಗ್ರಾಣಂಪಲ್ಲಿ ಗ್ರಾಮದಲ್ಲಿ ಪ್ರಗತಿಪರ ಹಾಗೂ ರೈತ ಹಾಗೂ ಮುಖಂಡರಾದಂತಹ ನರಸಿಂಹರೆಡ್ಡಿಯವರು ಮಳೆಯಾಶ್ರಿತವಾಗಿ ಸುಮಾರು 5 ಎಕರೆಯಲ್ಲಿ ಮೆಕ್ಕೆಜೋಳದ ಬೆಳೆಯನ್ನು ಹಾಕಿರುತ್ತಾರೆ. ಆದರೆ ಸಕಾಲದಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಬಹುತೇಕ ನಷ್ಟವನ್ನು ಅನುಭವಿಸುತ್ತಿದ್ದು, ಸಾಲದ ಸುಳಿಗೆ ಸಿಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಸರಕಾರಗಳು ಈ ರೀತಿಯ ಬೆಳೆ ನಷ್ಟವಾಗಿರುವ ಕಡೆ ಸೂಕ್ತ ರೀತಿಯಲ್ಲಿ ಸಮೀಕ್ಷೆ ನಡೆಸಿ ಬರಪೀಡಿತ ಪ್ರದೇಶವನ್ನಾಗಿ ಬಾಗೇಪಲ್ಲಿ ತಾಲೂಕನ್ನು ಘೋಷಿಸಲು ಆಗ್ರಹಿಸಿದ್ದಾರೆ.
ಅಷ್ಟೇ ಅಲ್ಲದೆ, ರೈತರ ಸಾಲ ಮನ್ನಾ ಮಾಡಿ, ಸಾಲ ನೀಡುವುದನ್ನು ಮುಂದುವರಿಸಬೇಕು ಮತ್ತು ರೈತರಿಗೆ ನಷ್ಟ ಪರಿಹಾರಗಳು ಶೀಘ್ರವಾಗಿ ದೊರೆಯುವಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತೆನೆಕಟ್ಟದ ಜೋಳ
ತಾಲೂಕಿನ ಬಹುತೇಕ ಮಳೆಯಾಶ್ರಿತ ಮೆಕ್ಕೆ ಜೋಳದ ಬೆಳೆಯು ತೆನೆ ಕಟ್ಟುವ ವೇಳೆ ಮಳೆ ಬಾರದ ಹಿನ್ನೆಲೆಯಲ್ಲಿ ತೆನೆ ಬಿಡದೆ, ಬೆಳೆ ಕಮರಿ ಹೋಗಿದೆ.
ಇದರಿಂದಾಗಿ ರೈತನು ಬೆಳೆ ನಿರ್ವಹಣೆಯ ಖರ್ಚು ಸಿಗದಂತಾಗಿ ಕಂಗಾಲಾಗಿದ್ದಾರೆ. ಹಾಗೆಯೇ ಶೇಂಗಾ ಬೆಳೆಯೂ ಕಾಯಿ ಬಲಿಯುವಾಗ ಮಳೆ ಬಾರದೆ, ಬೆಳೆ ನಷ್ಟವಾಗಿದೆ. ಇದರಿಂದಾಗಿ ತಾಲೂಕಿನ ಗೂಳೂರು, ಪಾತಪಾಳ್ಯ, ಕಸಬಾ ಸೇರಿದಂತೆ ಬಹುತೇಕ ಎಲ್ಲ ಹೋಬಳಿಗಳಲ್ಲೂ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ.
