ಕೃಷಿ, ಸಮಗ್ರ ಕೃಷಿ, ತೋಟಗಾರಿಕೆ ಹಾಗೂ ಕೃಷಿ ಆಧಾರಿತ ಉದ್ಯೋಗಗಳನ್ನೇ ಅವಲಂಭಿಸಿರುವ ಕೊಡಿಗೇಹಳ್ಳಿ, ಕೆಂಚನಪುರ ಹಾಗೂ ಬಳ್ಳಗೆರೆ ಗ್ರಾಮಗಳಲ್ಲಿನ ರೈತರ ಜಮೀನುಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವುದನ್ನು ತಡೆ ಹಿಡಿದು ಕೃಷಿಯ ಸುಸ್ಥಿರ ಅಭಿವೃದ್ಧಿಗೆ ಸಹಕರಿಸಿ ಎಂದು ನೆಲಮಂಗಲ ತಾಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಹಾಗೂ ರೈತ ಹಿತ ರಕ್ಷಣಾ ಸಮಿತಿ ಮುಖಂಡರು ಸರಕಾರವನ್ನು ಆಗ್ರಹಿಸಿದ್ದಾರೆ.
ಕೊಡಿಗೇಹಳ್ಳಿ ಗ್ರಾಪಂ ಪಿಡಿಒಗೆ ಮನವಿ ಸಲ್ಲಿಸಿ ಬಳಿಕ ಮಾತನಾಡಿದ ಸಮಿತಿ ಸದಸ್ಯರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಕೊಡಿಗೇಹಳ್ಳಿ, ಕೆಂಚನಪುರ ಮತ್ತು ಬಳ್ಳಗೆರೆ ಗ್ರಾಮಗಳಲ್ಲಿ ‘ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು’ ಕೈಗಾರಿಕೆ ಸ್ಥಾಪನೆಯ ಉದ್ದೇಶದಿಂದ ಫಲವತ್ತಾದ ಕೃಷಿ, ತೋಟಗಾರಿಕೆ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದು, ಪ್ರಸ್ತುತ ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿರುವುದು ಖಂಡನೀಯ ಎಂದರು.
ಸದರಿ ಗ್ರಾಮಗಳ ಜಮೀನುಗಳು ಕೃಷಿಗೆ ಫಲವತ್ತಾಗಿದ್ದು ರೈತರು ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಕುರಿ, ಕೋಳಿ ಸಾಕಣೆಯಂತಹ ಕೃಷಿ ಆಧಾರಿತ ವಾಣಿಜ್ಯ ಚಟುವಟಿಕೆಗಳಿಂದ ಬದುಕನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೀಗಿರುವಾಗ ಕೃಷಿ ಯೋಗ್ಯ ಭೂಮಿಯ ಸ್ವಾಧೀನ ಪ್ರಕ್ರಿಯೆ ಸಲ್ಲದು ಎಂದು ಹೇಳಿದರು.

ನೆಲಮಂಗಲ, ದೊಡ್ಡಬಳ್ಳಾಪುರ, ಬೆಂಗಳೂರು ಹಾಗೂ ತುಮಕೂರು ನಗರಗಳ ಮಾರುಕಟ್ಟೆಗಳಿಗೆ ಇಲ್ಲಿನ ಕೃಷಿ ಉತ್ಪನ್ನಗಳು ಸರಬರಾಜಾಗುತ್ತಿವೆ. ಮಳೆಯ ಪ್ರಮಾಣ ಕೂಡ ಉತ್ತಮವಾಗಿದ್ದು ಇತ್ತೀಚೆಗೆ ಬಹುತೇಕ ರೈತರು ತಮ್ಮ ಜಮೀನುಗಳಲ್ಲಿದ್ದ ನೀಲಗಿರಿ ಮರಗಳನ್ನು ತೆಗೆಸಿರುವುದರಿಂದ ಅಂತರ್ಜಲದ ಮಟ್ಟ ಕೂಡ ಹೆಚ್ಚಾಗಿದೆ. ಇದರಿಂದ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರ ಸಂಖ್ಯೆ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.
ನೂರಾರು ಎಕರೆ ಪ್ರದೇಶದಲ್ಲಿ ರೈತರು ಅಡಿಕೆ, ತೆಂಗು, ಮಾವು, ಬಾಳೆ, ದಾಳಿಂಬೆ ಮತ್ತಿತರರ ಅನೇಕ ಹಣ್ಣು, ಹೂವು ಹಾಗೂ ವಿವಿಧ ರೀತಿಯ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ನಗರಕ್ಕೆ ಸಮೀಪವೇ ಕೃಷಿ, ತೋಟಗಾರಿಕೆ ಬೆಳೆಗಳು ಇರುವ ಅವಕಾಶದಿಂದ ನಗರ ವಾಸಿಗಳಿಗೆ ತಾಜಾ ಹಾಗೂ ಕಡಿಮೆ ದರದಲ್ಲಿ ಕೃಷಿ ಉತ್ಪನ್ನಗಳು ಸುಲಭವಾಗಿ ಲಭ್ಯವಾಗುತ್ತಿದೆ.
ಈ ಮೂರೂ ಗ್ರಾಮಗಳಿಗೆ ಸೇರಿದ ನಾಲ್ಕು ಕೆರೆಗಳು ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶ ವ್ಯಾಪ್ತಿ(1453 ಚ.ಕಿ.ಮೀ.)ಯಲ್ಲಿವೆ ಎಂಬುದು ‘EMPRI’ ಸಂಸ್ಥೆಯ ವರದಿಯಲ್ಲಿ ದಾಖಲಾಗಿದೆ. ದುರದೃಷ್ಟವೆಂದರೆ, ತಿಪ್ಪಗೊಂಡನಹಳ್ಳಿ ಕೆರೆಯು ಕೈಗಾರಿಕೆಗಳಲ್ಲಿ ಉತ್ಪಾದನೆಯಾಗುವ ‘ತ್ಯಾಜ್ಯ’ದಿಂದ ಕಲುಷಿತವಾಗಿದ್ದು, ಅದರ ನೀರು ಕುಡಿಯಲು ಅನರ್ಹ ಎಂಬುದು ತಿಳಿದ ವಿಷಯವೆ ಆಗಿದೆ. ಈ ದೃಷ್ಟಿಯಲ್ಲಿ, ಪರಿಸರ ತಜ್ಞರು, ವಿಜ್ಞಾನಿಗಳ ಅಭಿಪ್ರಾಯ ಪಡೆಯದೇ ಈ ಪ್ರದೇಶದಲ್ಲಿ ‘ನಗರೀಕರಣ’ ಮತ್ತು ‘ಕೈಗಾರಿಕೀಕರಣ’ವನ್ನು ವಿಸ್ತರಿಸುವುದರಿಂದ ಪರಿಸರ ಮಾಲಿನ್ಯದ ಕಹಿ ಅನುಭವಕ್ಕೆ ದಾರಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸದರಿ ಗ್ರಾಮಗಳಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಮುಂದಾದರೆ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅರಣ್ಯ ಸಂಪತ್ತು, ಕೆರೆ, ಕುಂಟೆಗಳಿಗೆ ಸರಿಪಡಿಸಲಾಗದಷ್ಟು ಹಾನಿ ಉಂಟಾಗುತ್ತದೆ. ಈ ನಿಟ್ಟಿನಲ್ಲಿ, ನಮ್ಮ ಗ್ರಾಮಗಳೂ ಸೇರಿದಂತೆ ಬೆಂಗಳೂರು ಹಾಗೂ ತುಮಕೂರು ನಗರಗಳ ಹೊರ ವಲಯ ವ್ಯಾಪ್ತಿಯಲ್ಲಿರುವ ಕೃಷಿ ಮತ್ತು ಅರಣ್ಯಗಳ ಹಸಿರು ಪರಿಸರವನ್ನು ಉಳಿಸಿ ಬೆಳೆಸಿದರೆ ಜನರ ಆರೋಗ್ಯದ ದೃಷ್ಟಿಯಲ್ಲಿ ಈ ಎರಡೂ ನಗರಗಳು ಜೀವಂತವಾಗಿರುತ್ತವೆ ಎಂಬುದು ನಮ್ಮ ಅಭಿಪ್ರಾಯ.
ಪರಿಸರ ನಾಶಕ್ಕೆ ಕಾರಣವಾಗುವ ಅಂಶಗಳು ಹಾಗೂ ಪರಿಣಾಮಗಳ ಬಗ್ಗೆ ಅರಿವಿಲ್ಲದ ಮುಗ್ಧ ರೈತರನ್ನು ‘ಪರಿಹಾರ’ದ ಹೆಸರಿನಲ್ಲಿ ದಾರಿ ತಪ್ಪಿಸುವ ಮೂಲಕ ಕೃಷಿಗೆ ಫಲವತ್ತಾದ ಜಮೀನುಗಳನ್ನು ಕೆ.ಐ.ಡಿ.ಬಿ.ಯು ಭೂಸ್ವಾಧೀನಕ್ಕೆ ಮುಂದಾಗುವುದು ಜನಹಿತವೆನಿಸುವುದಿಲ್ಲ.
ಕೈಗಾರಿಕೆಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಅಭಿಪ್ರಾಯವಿದ್ದರೆ ಜಮೀನು ಕಳೆದುಕೊಂಡ ರೈತರಿಗೆ ಸಿಗುವ ಪರಿಹಾರದ ಹಣ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದೂ ಅಷ್ಟೇ ಕಠೋರ ಸತ್ಯ. ಸದರಿ ಗ್ರಾಮಗಳ ಬಹುತೇಕ ರೈತರು ಅರ್ಧ ಎಕರೆಯಿಂದ 3-4 ಎಕರೆಗಳಷ್ಟೇ ಜಮೀನು ಹೊಂದಿದ್ದು, ಇಂತವರು ಒಮ್ಮೆ ಜಮೀನು ಕಳೆದುಕೊಂಡರೆ ಮತ್ತೊಮ್ಮೆ ಭೂಮಿಯನ್ನು ಖರೀದಿಸಿ ಕೃಷಿಯಲ್ಲಿ ಮುಂದುವರೆಯುವುದು ಅಸಾಧ್ಯದ ಸಂಗತಿ. ಜೊತೆಗೆ, ರೈತರು, ರೈತ ಮಹಿಳೆಯರು ನಿರುದ್ಯೋಗಿಗಳಾಗುತ್ತಾರೆ. ಪಿತ್ರಾರ್ಜಿತವಾಗಿ ಬಂದಿರುವ ಜಮೀನುಗಳನ್ನು ತಮ್ಮ ಮಕ್ಕಳಿಗೆ ವರ್ಗಾಯಿಸಲಾರದೇ ಮಾನಸಿಕವಾಗಿ ಕುಗ್ಗುತ್ತಾರೆ.
ನಗರೀಕರಣ ಹಾಗೂ ಕೈಗಾರಿಕೀಕರಣ ಹೆಚ್ಚುತ್ತಿದ್ದು, ಕೃಷಿ ಭೂಮಿ ಕಡಿಮೆಯಾಗುತ್ತಿದೆ. ನಗರಗಳ ಸಮೀಪವಿರುವ ಕೊಳಚೆ ನೀರಿನಲ್ಲಿ ತರಕಾರಿಗಳನ್ನು ಬೆಳೆದು ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ. ಇಂತಹ ತರಕಾರಿಗಳಲ್ಲಿ ಭಾರ ಲೋಹಗಳು ಹೆಚ್ಚುತ್ತಿದ್ದು ಜನರಿಗೆ ಮಾರಣಾಂತಿಕ ರೋಗಗಳು ಹೆಚ್ಚಾಗುತ್ತಿರುವುದನ್ನು ನೋಡುವುದಕ್ಕೆ ಸಾಕ್ಷಿಯಾಗಿದ್ದೇವೆ ಎನ್ನುವುದು ಅತ್ಯಂತ ಆತಂಕದ ವಿಚಾರ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಸಾರ್ವಜನಿಕ ಸಂಯಮವೂ, ಸುದ್ದಿ ಮಾಧ್ಯಮಗಳೂ
ಪ್ರಸಕ್ತ ತಲೆಮಾರಿನ ಬಹುತೇಕ ವಿದ್ಯಾವಂತರು ನಗರ ಜೀವನದಿಂದ ವಿಮುಖರಾಗುತ್ತಿದ್ದು, ಕೃಷಿ ಹಾಗೂ ಕೃಷಿ ಆಧಾರಿತ ಉದ್ಯೋಗಗಳಿಗಾಗಿ ಹಳ್ಳಿಗಳಿಗೆ ಹಿಂದಿರುಗುತ್ತಿದ್ದಾರೆ. ಯುವ ರೈತರ ಭವಿಷ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಕೃಷಿ ಫಲವತ್ತಾದ ಭೂಮಿಯ ಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.