ಅಬಕಾರಿ ನೀತಿಗಳ ಉಲ್ಲಂಘನೆ ಅಡಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಅಕ್ರಮವಾಗಿ ಬಂಧಿಸಿರುವ ಕೇಂದ್ರ ಸರಕಾರದ ಧಮನಕಾರಿ ನೀತಿಯನ್ನು ವಿರೋಧಿಸಿ ರವಿವಾರ ಅಮ್ ಆದ್ಮಿ ಪಾರ್ಟಿ ವತಿಯಿಂದ ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಆಪ್ ಪದಾಧಿಕಾರಿಗಳು ಉಪವಾಸ ಸತ್ಯಾಗ್ರಹ ನಡೆಸಿದರು.
ಅಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ.ವಿಶ್ವನಾಥ್ ಮಾತನಾಡಿ, “ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ ಇಡೀ ದೇಶದಲ್ಲಿ ನಂಬರ್ ಒನ್ ಸಿಎಂ ಎನಿಸಿಕೊಂಡಿರುವ ಆಪ್ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸುವ ಮೂಲಕ ವಿರೋಧ ಪಕ್ಷಗಳ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನವನ್ನು ಕೇಂದ್ರದ ನರೇಂದ್ರ ಮೋದಿ ನೇತ್ರತ್ವದ ಬಿಜೆಪಿ ಸರಕಾರ ಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಫೇಕ್ ಸ್ಕ್ಯಾಮ್ ಹೆಸರಿನಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸಿ, ಜಾಮೀನು ಸಿಗದಂತೆ ತಂತ್ರ ರೂಪಿಸಿದ ಕೇಂದ್ರದ ಸರ್ವಾಧಿಕಾರಿ ಧೋರಣೆಯ ವಿರುದ್ದ ಇಂದು ಉಪವಾಸ ಸತ್ಯಾಗ್ರಹ ನಡೆಸುತಿದ್ದು, ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ” ಎಂದು ಎಚ್ಚರಿಸಿದರು.
ಎಎಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾತನಾಡಿ, “ಬಿಜೆಪಿ ಪಕ್ಷ ಅಭಿವೃದ್ಧಿ ವಿಚಾರ ಬಿಟ್ಟು ಜನರನ್ನು ಧಾರ್ಮಿಕ ಮೌಢ್ಯದೆಡೆಗೆ ತೆಗೆದುಕೊಂಡು ಹೋಗುತ್ತಿದೆ. ಹಣಕಾಸಿನ ಆರೋಪ ಹೊತ್ತ ಸುಮಾರು 26 ಕ್ಕೂ ಹೆಚ್ಚಿನ ಮುಖಂಡರು ಬಿಜೆಪಿ ಸೇರ್ಪಡೆ ಬಳಿಕ ಅವರ ಮೇಲಿನ ಇಡಿ, ಸಿಬಿಐ, ಐಟಿ ಕೇಸುಗಳನ್ನು ಖುಲಾಸೆ ಮಾಡಲಾಗಿದೆ” ಎಂದು ದೂರಿದರು.
“ರಾಮ ಮಂದಿರ, ಹಿಂದೂ-ಮುಸ್ಲಿಂ ಹೆಸರಿನಲ್ಲಿ ಒಡೆದಾಳುವ ನೀತಿ ಅನುಸರಿಸುತ್ತಿರುವ ಬಿಜೆಪಿ ಪಕ್ಷ ದೆಹಲಿಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿದ್ದ ಕೇಜ್ರಿವಾಲ್ ವಿರುದ್ದ ದಾಖಲೆ ಇಲ್ಲದೇ ಸುಳ್ಳು ಅವ್ಯವಹಾರ ಕೇಸಿನಲ್ಲಿ ಬಂಧಿಸಿರುವುದು ಖಂಡನೀಯ. ಕೂಡಲೇ ಸಿಎಂ ಕೇಜ್ರಿವಾಲ್ ಅವರನ್ನು ಬಿಡುಗಡೆಗೊಳಿಸಬೇಕು” ಎಂದು ಒತ್ತಾಯಿಸಿದರು.
ಎಎಪಿ ಜಿಲ್ಲಾಧ್ಯಕ್ಷ ಜಯರಾಮಯ್ಯ ಮಾತನಾಡಿ, “ಇಂದು ಇಡೀ ದೇಶದಾದ್ಯಂತ ಅರವಿಂದ ಕೇಜ್ರಿವಾಲ್ ಅವರ ಬಂಧನ ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಕೇಜ್ರಿವಾಲ್ ಅವರ ಬಂಧನ ಸಂವಿಧಾನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಬಿಜೆಪಿಯಿಂದ ದೇಶದಲ್ಲಿ ಆರಾಜಕತೆ ಸೃಷ್ಟಿಯಾಗಿದೆ. ಆರ್‌ಎಸ್‌ಎಸ್ ಸಿದ್ಧಾಂತದಂತೆ ಆಡಳಿತ ನಡೆಸುತ್ತಿರುವ ಬಿಜೆಪಿ ದೇಶ ವಿಭಜಿಸುವುದಾಗಿದೆ. ಇದರ ವಿರುದ್ದ ನಾವೆಲ್ಲರೂ ಒಗ್ಗೂಡಬೇಕಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಇಬ್ಬರು ಕಾರ್ಮಿಕ ಮಹಿಳೆಯರ ಹತ್ಯೆ
ಉಪವಾಸ ಸತ್ಯಾಗ್ರಹದಲ್ಲಿ ಆಪ್ ರಾಜ್ಯ ಜಂಟಿ ಕಾರ್ಯದರ್ಶಿ ಪ್ರೇಮಕುಮಾರ್, ಮಹಿಳಾ ಘಟಕ ಅಧ್ಯಕ್ಷೆ ರುಕ್ಸಾನಾ ಭಾನು, ನಗರ ಅಧ್ಯಕ್ಷ ಗೌಸ್ ಫೀರ್, ಗ್ರಾಮಾಂತರ ಅಧ್ಯಕ್ಷ ದಿನೇಶಕುಮಾರ್, ಮಧುಗಿರಿ ತಾಲೂಕು ಅಧ್ಯಕ್ಷ ಮುಜಾಮಿಲ್ ಪಾಷ, ಶಿರಾ ತಾಲೂಕು ಪ್ರಶಾಂತ ಸೇರಿದಂತೆ ಇತರರಿದ್ದರು.