‘ಸುಹಾಸ್ ಶೆಟ್ಟಿ ಹತ್ಯೆಯಾದ ಅದೇ ರೀತಿಯಲ್ಲಿ ಮುಸ್ಲಿಮರ ಹತ್ಯೆ ಮಾಡುತ್ತೇವೆ ‘ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಭಜರಂಗದಳದ ಮುಖಂಡ, ರೌಡಿಶೀಟರ್ ಭರತ್ ಕುಮ್ಡೇಲು ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಕೋಮುದ್ವೇಷದ ಭಾಷಣ ಮಾಡಿ ಶಾಂತಿ ಮತ್ತು ನೆಮ್ಮದಿಯನ್ನು ಕದಡಿದ ಆರೋಪದಡಿಯಲ್ಲಿ ಭರತ್ ಕುಮ್ಡೇಲು ಎಂಬಾತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುತ್ತೂರು ತಾಲೂಕಿನ ಕಸ್ಬಾ ಗ್ರಾಮದ ಬೈಪಾಸ್‌ನಲ್ಲಿರುವ ಜೈನ ಭವನದಲ್ಲಿ ಗುರುವಾರ ಸಂಜೆ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಪುತ್ತೂರು ಪ್ರಖಂಡದ ವತಿಯಿಂದ ಹತ್ಯೆಯಾದ ರೌಡಿಶೀಟರ್ ಸುಹಾಸ್ ಶೆಟ್ಟಿಗೆ ನುಡಿನಮನ ಸಭೆ ನಡೆಸಲಾಗಿತ್ತು.
ಇದನ್ನು ಓದಿದ್ದೀರಾ? ಗುಲಬರ್ಗಾ ವಿವಿ ಕರ್ಮಕಾಂಡ-1: ಅಂಕಗಳನ್ನೇ ತಿದ್ದಿದ ಭೂಪರು; ಭಾರೀ ಅಕ್ರಮ ಬಯಲು
ಈ ಸಭೆಯಲ್ಲಿ ಭಾಗವಹಿಸಿದ್ದ ಭರತ್ ಕುಮ್ಡೇಲು ಕೋಮುದ್ವೇಷವನ್ನು ಉಂಟುಮಾಡುವಂತಹ ಭಾಷಣವನ್ನು ಮಾಡಿದ್ದು, ‘ಸುಹಾಸ್ ಶೆಟ್ಟಿ ಹತ್ಯೆಯಾದ ಅದೇ ರೀತಿಯಲ್ಲಿ ಮುಸ್ಲಿಮರ ಹತ್ಯೆ ಮಾಡುತ್ತೇವೆ ‘ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ ಬೆನ್ನಲ್ಲೇ ಪುತ್ತೂರು ನಗರ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಆರೋಪಿಯ ಮಾತುಗಳಿಂದ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟಾಗುವಂತಹ ಸಾಧ್ಯತೆಗಳಿವೆ ಎಂದು ಆರೋಪಿಸಿ ಪುತ್ತೂರು ನಗರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.
ಆರೋಪಿ ಭರತ್ ಕುಮ್ಡೇಲು ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ ಕ್ರ 35/2025 ಕಲಂ-196,353(2) BNS 2023. ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಈತ ಅಡ್ಡೂರಿನ ಕಲಾಯಿಯ ರಿಕ್ಷಾ ಚಾಲಕನಾಗಿದ್ದ ಅಶ್ರಫ್ ಕಲಾಯಿ ಎಂಬುವವರ ಹತ್ಯೆಯಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.