ಇತ್ತೀಚಿನ ವರ್ಷದಲ್ಲೇ ಅತಿ ಗಂಭೀರವಾಗಿ ಕಾಡಿರುವ ಮೀನಿನ ಕ್ಷಾಮದಿಂದಾಗಿ ಮೀನುಗಾರರು ಹಾಗೂ ಮೀನುಗಾರಿಕೆಯನ್ನು ನಂಬಿರುವ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.
ಮೀನುಗಾರಿಕೆ ನಡೆಸುವ ನೂರಾರು ದೊಡ್ಡ ಬೋಟುಗಳು ಲಂಗರು ಹಾಕಿವೆ. ಮೀನುಗಾರಿಕೆಗೆ ತೆರಳುವ ಬೋಟುಗಳು ಮೀನಿಲ್ಲದೆ ವಾಪಸ್ ಬರುತ್ತಿವೆ. ಬೋಟು ಮಾಲೀಕರು ಬ್ಯಾಂಕ್ ಸಾಲ ಸಂದಾಯ ಮಾಡಲು ಪರದಾಡುತ್ತಿದ್ದರೆ, ಇನ್ನೊಂದೆಡೆ ಮೀನುಗಾರಿಕಾ ವೃತ್ತಿಯಲ್ಲಿರುವ ಒರಿಸ್ಸಾ, ತಮಿಳುನಾಡು ಮೂಲದ ವಲಸೆ ಕಾರ್ಮಿಕರು ಕೆಲಸವಿಲ್ಲದೆ ಬರಿಗೈಯಲ್ಲಿ ತಮ್ಮ ರಾಜ್ಯಗಳಿಗೆ ಹಿಂದಿರುಗುತ್ತಿದ್ದಾರೆ.
“ಮಂಗಳೂರಿನ ಮೀನುಗಾರಿಕಾ ಕಾರ್ಮಿಕರ ಆರ್ಥಿಕ ಪರಿಸ್ಥಿತಿ ತೀರಾ ಶೋಚನೀಯವಾಗಿದೆ.
ಮೀನುಗಾರಿಕೆಯಿಂದ ಬರುವ ಆದಾಯವನ್ನು ನಂಬಿಕೊಂಡು ಸ್ವ ಸಹಾಯ ಸಂಘಗಳ ಮೂಲಕ ಕಿರು ಸಾಲ ಪಡೆದ ಕುಟುಂಬಗಳು ಮತ್ಸ್ಯ ಕ್ಷಾಮದಿಂದಾಗಿ ಸಾಲ ಮರುಪಾವತಿ ಮಾಡಲಾಗದೆ ಕಂಗಾಲಾಗಿದ್ದಾರೆ. ಸ್ವ ಸಹಾಯ ಸಂಘಗಳು ಸಾಲ ವಸೂಲಾತಿಗಾಗಿ ತಮ್ಮ ಪ್ರತಿನಿಧಿಗಳ ಮೂಲಕ ಒತ್ತಡ ಹಾಕುವುದು ಮಾತ್ರವಲ್ಲ ಮಾನಸಿಕ ಕಿರುಕುಳ ನೀಡಿ ದೌರ್ಜನ್ಯ ನಡೆಸಿರುವುದಲ್ಲದೆ ಕೆಲವು ಮಹಿಳೆಯರು ಆತ್ಮಹತ್ಯೆಗೂ ಮುಂದಾಗಿರುವ ಘಟನೆಗಳೂ ನಡೆದಿವೆ” ಎಂದು ಡಿವೈಎಫ್ಐ ಹೇಳಿದೆ.
ಬುಧವಾರ ಮಂಗಳೂರಿನ ಕಸಬಾ ಬೆಂಗರೆಯಲ್ಲಿ ಸಾಲ ಸಂತ್ರಸ್ತ ಮೀನುಗಾರ ಕುಟುಂಬಗಳನ್ನು ಭೇಟಿ ಮಾಡಿ ಸಭೆ ನಡೆಸಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್ ಮಾತನಾಡಿ, ಕೂಡಲೇ ಜಿಲ್ಲಾಧಿಕಾರಿ ಮದ್ಯಪ್ರವೇಶ ಮಾಡಬೇಕೆಂದು ಆಗ್ರಹಿಸಿದರು.
“ಮೀನಿನ ಕ್ಷಾಮವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿ ಮೀನುಗಾರ ಕುಟುಂಬಗಳು ಸ್ವಸಹಾಯ ಸಂಘಗಳಿಂದ ಪಡೆದಿರುವ ಸಾಲಮನ್ನಾ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು. ಸಾಲ ವಸೂಲಾತಿಯ ಹೆಸರಿನಲ್ಲಿ ಕಿರುಕುಳ ನೀಡುವ ಹಣಕಾಸು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಜರಗಿಸಬೇಕು” ಎಂದು ಇಮ್ತಿಯಾಜ್ ಒತ್ತಾಯಿಸಿದರು.
“ಕಿರುಕುಳ ನೀಡುವ ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳಲು ಜಿಲ್ಲಾಡಳಿತ ವಿಫಲವಾದರೆ ಪ್ರತಿಭಟನೆ ನಡೆಸಬೇಕಾಗುತ್ತದೆ” ಎಂದು ಇಮ್ತಿಯಾಜ್ ಎಚ್ಚರಿಕೆ ನೀಡಿದರು.
ಡಿವೈಎಫ್ಐ ನಗರಾಧ್ಯಕ್ಷ ಜಗದೀಶ್ ಬಜಾಲ್ ಮಾತನಾಡಿ, “ಸ್ವ ಸಹಾಯ ಸಂಘಗಳ ಮೂಲಕ ಸಾಲ ನೀಡಿರುವ ಹಣಕಾಸು ಸಂಸ್ಥೆಗಳು ರಿಸರ್ವ್ ಬ್ಯಾಂಕಿನ ನಿರ್ದೇಶನಗಳನ್ನು ಉಲ್ಲಂಘನೆ ಮಾಡಿದೆ. ಸಾಲಗಾರ ಸಂತ್ರಸ್ತರಿಗೆ ಸರಿಯಾದ ಮಾಹಿತಿ ನೀಡದೆ ವಂಚನೆ ಮಾಡುತ್ತಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಹಿಂದೆ ಹಲವು ಕೋಟೆಗಳು ಉರುಳಿವೆ, ಮಹಾರಾಷ್ಟ್ರದಲ್ಲೇ ಹಿಂದುತ್ವದ ಕೋಟೆ ಉಳಿದಿಲ್ಲ: ಬಿ ಕೆ ಹರಿಪ್ರಸಾದ್
ಸಾಲ ಸಂತ್ರಸ್ತರ ಪರವಾಗಿ ರೇಷ್ಮಾ, ಸುಹಾನ, ಸೌದ, ರಝಿಯಾ ಮಾತನಾಡಿದರು. ಇದೇ ವೇಳೆ ಡಿವೈಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ತಯ್ಯುಬ್ ಬೆಂಗ್ರೆ, ಸಿಪಿಎಂ ಬೆಂಗರೆ ಕಾರ್ಯದರ್ಶಿ ಎ ಬಿ ನೌಷಾದ್, ಗ್ರಾಮ ಸಮಿತಿ ಅಧ್ಯಕ್ಷ ಹನೀಫ್ ಬೆಂಗ್ರೆ, ಮುಖಂಡ ಜಮ್ಶೀರ್ ಬೆಂಗ್ರೆ ಇದ್ದರು.
