ಜೋಗದಲ್ಲಿ ಪಂಚತಾರಾ ಹೋಟೆಲ್: ಅರಣ್ಯ ರಕ್ಷಣೆ ಬದಿಗೊತ್ತಿ ಲಾಭಕ್ಕೆ ಜೋತುಬಿದ್ದ ಸರ್ಕಾರ

Date:

Advertisements
ಜೋಗ ಅರಣ್ಯ ಪ್ರದೇಶವು ಶರಾವತಿ ಕಣಿವೆಯ ಭಾಗವಾಗಿದೆ. ಈಗಾಗಲೇ, ಜಲ ವಿದ್ಯುತ್, ಜಲಾಶಯ, ಹೆದ್ದಾರಿ, ರೈಲು ಮತ್ತಿತರ ಯೋಜನೆಗಳಿಂದ ಶರಾವತಿ ಕಣಿವೆ ಒತ್ತಡಕ್ಕೆ ಸಿಲುಕಿದೆ. ಈಗ, ಪಂಚತಾರಾ ಹೋಟೆಲ್‌ ಕೂಡ ಅದೇ ಕಣಿವೆಯಲ್ಲಿ ತಲೆ ಎತ್ತಲಿದೆ. ಜೋಗದಲ್ಲಿಯೇ ಹೋಟೆಲ್ ನಿರ್ಮಿಸಬೇಕೆಂಬ ಹುಂಬುತನವೇಕೆ? ಹೋಟೆಲ್ ಕಟ್ಟಲೇಬೇಕೆಂದಿದ್ದರೆ, ಹತ್ತಿರದಲ್ಲೇ ಇರುವ ತಾಳಗುಪ್ಪದಲ್ಲಿ ನಿರ್ಮಾಣ ಮಾಡಬಹುದಲ್ಲವೇ?

ಪ್ರವಾಸಿ ತಾಣಗಳಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ದಿ ಪಡಿಸುತ್ತೇವೆಂದು ಸರ್ಕಾರಗಳು ಆಗ್ಗಾಗ್ಗೆ ಹೇಳುತ್ತಲೇ ಇರುತ್ತವೆ. ಅದಕ್ಕಾಗಿ ಕೋಟ್ಯಂತರ ರೂಪಾಯಿ ಹಣವನ್ನೂ ಖರ್ಚು ಮಾಡುತ್ತವೆ. ಪ್ರೇಕ್ಷಣಾ ಸ್ಥಳಗಳನ್ನು ವ್ಯವಹಾರ, ಲಾಭದ ತಾಣಗಳಾಗಿ ಪರಿವರ್ತಿಸುತ್ತಿವೆ. ಇದೀಗ, ಈ ಸಾಲಿಗೆ ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತವೂ ಸೇರಿಕೊಂಡಿದೆ. ಜೋಗದ ಬಳಿ ಪಂಚತಾರಾ ಹೋಟೆಲ್‌ ಮತ್ತು ರೋಪ್‌ ವೇ ನಿರ್ಮಿಸಲು ಅರಣ್ಯ ಇಲಾಖೆ ಸಮ್ಮತಿ ನೀಡಿದ್ದು, ಜೋಗವನ್ನು ಭೋಗಕ್ಕೆ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ.

ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಜೋಗದಲ್ಲಿ ಕಟ್ಟಡ ನಿರ್ಮಾಣ, ವಾಣಿಜ್ಯೋದ್ಯಮ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳಿಗೆ ಅವಕಾಶವಿಲ್ಲ. ಆದಾಗ್ಯೂ, ರಾಜ್ಯ ಸರ್ಕಾರ ಜೋಗದಲ್ಲಿ ಪಂಚತಾರಾ ಹೋಟೆಲ್ ಕಟ್ಟಲೇಬೇಕೆಂಬ ಧಾವಂತಕ್ಕೆ ಬಿದ್ದಿದೆ. ಅರಣ್ಯ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸುವಲ್ಲಿ ಸಫಲವಾಗಿದೆ. ಭೂ ಪರಿವರ್ತನೆಯ ಬಗ್ಗೆ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನೋಡಲ್ ಅಧಿಕಾರಿ ಬ್ರಿಜೇಶ್ ಕುಮಾರ್ ಅವರು ಪತ್ರ ಬರೆದಿದ್ದಾರೆ. ಭೂ ಪರಿವರ್ತನೆ ಮತ್ತು ಹೋಟೆಲ್ ನಿರ್ಮಾಣದ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡಲು ಯಾವುದೇ ಅಭ್ಯಂತರವಿಲ್ಲ ಎಂದೂ ಹೇಳಿದ್ದಾರೆ.

ಪ್ರವಾಸೋದ್ಯಮ ಇಲಾಖೆಯ ಧಾವಂತಕ್ಕೆ ಅರಣ್ಯ ಇಲಾಖೆಗೆ ಸಮ್ಮತಿ ನೀಡಿದೆ. ಜೋಗದಲ್ಲಿ ಪಂಚತಾರಾ ಹೋಟೆಲ್‌ ಮತ್ತು ರೋಪ್‌ವೇ ನಿರ್ಮಿಸಲು ಯಾವುದೇ ತಕರಾರು ಇಲ್ಲವೆಂದು ಸಾಗರ ಮತ್ತು ಶಿರಸಿ ಡಿಸಿಎಫ್‌ಗಳು ವರದಿ ನೀಡಿದ್ದಾರೆ. ಉದ್ದೇಶಿತ ಸ್ಥಳವು ರಾಷ್ಟ್ರೀಯ ಉದ್ಯಾನ, ವನ್ಯಜೀವಿ ಧಾಮ, ಹುಲಿಸಂರಕ್ಷಿತ, ಆನೆ ಕಾರಿಡಾರ್‌ ಮತ್ತು ವನ್ಯಜೀವಿ ಸಂಚಾರದ ಕಾರಿಡಾರ್‌ ವ್ಯಾಪ್ತಿಯಲ್ಲಿ ಬರುವುದಿಲ್ಲ. 1980ರ ಅರಣ್ಯ ಸಂರಕ್ಷಣೆ ಮತ್ತು ಸಮೃದ್ಧಿ ನಿಯಮದ ಅಡಿ ಯಾವುದೇ ಉಲ್ಲಂಘನೆ ಆಗಿಲ್ಲ. ಅರಣ್ಯ, ವನ್ಯಜೀವಿ ಸಂಪತ್ತಿಗೆ ಯಾವುದೇ ತೊಂದರೆ ಆಗುವುದಿಲ್ಲವೆಂದು ಕ್ಲೀನ್ ಚಿಟ್ ಕೊಟ್ಟಿದ್ದಾರೆ.

Advertisements

ಇನ್ನು, ಕೇಂದ್ರದ ಸಮ್ಮತಿ ಮಾತ್ರವೇ ಬಾಕಿ ಉಳಿದಿದೆ. ರಾಜ್ಯ ಸರ್ಕಾರದ ಪ್ರಸ್ತಾವಕ್ಕೆ ಕೇಂದ್ರ ಸಮ್ಮತಿಸಿದರೆ, ಕೆಲವೇ ತಿಂಗಳುಗಳಲ್ಲಿ ಜೋಗದ ಅರಣ್ಯದಲ್ಲಿ ಫೈವ್ ಸ್ಟಾರ್ ಹೋಟೆಲ್ ತಲೆ ಎತ್ತಲಿದೆ. ಶ್ರೀಮಂತ ಪ್ರವಾಸಿಗರನ್ನು ಸೆಳೆಯಲಿದೆ.

ಅಂದಹಾಗೆ, 2014ರಲ್ಲಿಯೇ ಜೋಗದಲ್ಲಿ ಪಂಚತಾರಾ ಹೋಟೆಲ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿತ್ತು. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿತ್ತು. ಆದರೆ, ಅರಣ್ಯ ಸಂರಕ್ಷಣೆಯ ದೃಷ್ಟಿಯಲ್ಲಿ ಜೋಗ ಪ್ರದೇಶದಲ್ಲಿ ಹೋಟೆಲ್ ಮತ್ತು ರೆಸಾರ್ಟ್ ನಿರ್ಮಾಣ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಆ ಸಂದರ್ಭದಲ್ಲಿ ಮೋದಿ ಅವರು ಆಗಷ್ಟೇ ಪ್ರಧಾನಿಯಾಗಿದ್ದರು. ಜನರ ದೃಷ್ಟಿಯಲ್ಲಿ ತಾವು ಮಹಾನ್ ವ್ಯಕ್ತಿಯೆಂದು ಗುರುತಿಸಿಕೊಳ್ಳಬೇಕಾದ ಅಗತ್ಯವಿತ್ತು. ಅದಕ್ಕಾಗಿ, ಅರಣ್ಯ ರಕ್ಷಣೆಗಾಗಿ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.

ಆದರೆ, ಈಗ ಮೋದಿ ಬಯಸಿದ ಎಲ್ಲ ಹೆಸರು, ಬ್ರಾಂಡ್‌ಗಳು ಮೋದಿ ಬುಟ್ಟಿಗೆ ಬಂದು ಬಿದ್ದಿವೆ. ಈಗ ಅವರು ಏನೇ ಮಾಡಿದರೂ, ಅದನ್ನು ಭಕ್ತ ಪಡೆ ಸಮರ್ಥಿಸಿಕೊಳ್ಳುತ್ತದೆ. ಹೀಗಾಗಿಯೇ, ತಮ್ಮ ಸ್ನೇಹಿತರಿಗೆ ಅರಣ್ಯ ಭೂಮಿಯಲ್ಲಿ ಬೃಹತ್ ಗಣಿಗಾರಿಕೆ ಮಾಡಲು ಅನುಮತಿ ಕೊಡುತ್ತಿದ್ದಾರೆ. ಅಂತಹದ್ದರಲ್ಲಿ, ಜೋಗದಲ್ಲಿ ಹೋಟೆಲ್‌ ಕಟ್ಟಲು ಕೇಂದ್ರ ತಡೆದೀತೆ. ಸಾಧ್ಯವೇ ಇಲ್ಲ.

ರಾಜ್ಯ ಸರ್ಕಾರಕ್ಕಾಗಲೀ, ಕೇಂದ್ರ ಸರ್ಕಾರಕ್ಕಾಗಲೀ ಪರಿಸರ ರಕ್ಷಣೆ ಆದ್ಯತೆಯಾಗಿ ಉಳಿದಿಲ್ಲ. ಎಲ್ಲವನ್ನೂ ಬಂಡವಾಳಿಗರಿಗೆ ಮಾರುವುದು ಅಥವಾ ಅಭಿವೃದ್ಧಿ ಹೆಸರಿನಲ್ಲಿ ತಾವೇ ಖುದ್ದು ಅವುಗಳನ್ನು ಹಾಳುಗೆಡುವುದು ಸರ್ಕಾರಗಳ ಉದ್ದೇಶ. ಜೋಗದಲ್ಲಿ ಹೋಟೆಲ್ ಕಟ್ಟುವುದರಿಂದ ಸ್ಥಳೀಯರಿಗಿರಲಿ, ಸಾಮಾನ್ಯ ಪ್ರವಾಸಿಗರಿಗೂ ಯಾವುದೇ ಉಪಯೋಗವಿಲ್ಲ. ಐಷಾರಾಮಿ ಜೀವನ ನಡೆಸುವ ಮೂರು ಮತ್ತೊಂದು ಜನರಿಗಷ್ಟೇ ಅದರಿಂದ ಲಾಭ. ಬೆರಳೆಣಿಕೆಯಷ್ಟು ಮಂದಿಗಾಗಿ ಅರಣ್ಯವನ್ನೇ ಬಲಿಕೊಡಲು ರಾಜ್ಯ ಸರ್ಕಾರ ಮುಂದಾಗಿದೆ.

image 19 1

ಗಮನಾರ್ಹ ಸಂಗತಿ ಎಂದರೆ, ಜೋಗ ಅರಣ್ಯ ಪ್ರದೇಶವು ಶರಾವತಿ ಕಣಿವೆಯ ಭಾಗವಾಗಿದೆ. ಈಗಾಗಲೇ, ಜಲ ವಿದ್ಯುತ್, ಜಲಾಶಯ, ಹೆದ್ದಾರಿ, ರೈಲು ಮತ್ತಿತರ ಯೋಜನೆಗಳಿಂದ ಶರಾವತಿ ಕಣಿವೆ ಒತ್ತಡಕ್ಕೆ ಸಿಲುಕಿದೆ. ಈಗ, ಪಂಚತಾರಾ ಹೋಟೆಲ್‌ ಕೂಡ ಅದೇ ಕಣಿವೆಯಲ್ಲಿ ತಲೆ ಎತ್ತಲಿದೆ. ಜೋಗದಲ್ಲಿಯೇ ಹೋಟೆಲ್ ನಿರ್ಮಿಸಬೇಕೆಂಬ ಹುಂಬುತನವೇಕೆ? ಹೋಟೆಲ್ ಕಟ್ಟಲೇಬೇಕೆಂದಿದ್ದರೆ, ಹತ್ತಿರದಲ್ಲೇ ಇರುವ ತಾಳಗುಪ್ಪದಲ್ಲಿ ನಿರ್ಮಾಣ ಮಾಡಬಹುದಲ್ಲವೇ ಎಂದು ಸ್ಥಳೀಯರು, ಪರಿಸರವಾದಿಗಳು ಹೇಳುತ್ತಿದ್ದಾರೆ. ಆದರೂ, ಸರ್ಕಾರ ಶರಾವತಿಯ ದಂಡೆಯಲ್ಲಿಯೇ ಹೋಟೆಲ್ ಕಟ್ಟಬೇಕೆಂದು ಸತತ 10 ವರ್ಷಗಳಿಂದ ಪ್ರಯತ್ನಿಸುತ್ತಿದೆ. ಈಗ ಯಶಸ್ಸಿನ ಹಾದಿಯಲ್ಲಿದೆ.

ಈ ವರದಿ ಓದಿದ್ದೀರಾ?: ಪಣಜಿ ಸಿನಿಮೋತ್ಸವ | ಆಳುವ ಪಕ್ಷದ ಅಜೆಂಡಾಗಳನ್ನು ಬಿಂಬಿಸುವ ಸಿನಿಮಾಗಳಿಗೆ ಅವಕಾಶ!

ಜೋಗದ ತಲಕಳಲೆ ಗ್ರಾಮದ ಸರ್ವೇ ಸಂಖ್ಯೆ 151ರಲ್ಲಿರುವ 0.8536 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಪಂಚತಾರಾ ಹೋಟೆಲ್ ನಿರ್ಮಾಣಕ್ಕಾಗಿ ಭೂ ಪರಿವರ್ತನೆ ಮಾಡಿಕೊಡಲು ಅರಣ್ಯ ಇಲಾಖೆ ಸಮ್ಮತಿಸಿದೆ. 165 ಕೋಟಿ ರೂ. ವೆಚ್ಚದಲ್ಲಿ ಹೋಟೆಲ್ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆಯೂ ದೊರೆತಿದೆ. ಹೋಟೆಲ್ ಜೊತೆಗೆ ಕೆಫೆಟೇರಿಯ, ಮಕ್ಕಳ ಉದ್ಯಾನವನ, ಅಂಪಿಥಿಯೇಟರ್, ವಾಹನ ನಿಲ್ದಾಣ, ಜಲ ಕ್ರೀಡೆ, ಉದ್ಯಾನವನ, ಮಳಿಗೆಗಳ ಸಮುಚ್ಚಯ, ವೀಕ್ಷಣಾ ಗೋಪುರ, ಗಾಜೀಬೋ, ಹೈ ಮಾಸ್ಕ್ ಲೈಟಿಂಗ್, ಸಂಪರ್ಕ ರಸ್ತೆಗಳನ್ನೂ ಅಭಿವೃದ್ಧಿ ಪಡಿಸುವುದು ಪ್ರಸ್ತಾವನೆಯಲ್ಲಿದೆ.

ಇಷ್ಟೆಲ್ಲಾ ಐಷಾರಾಮಿ ಸೌಲಭ್ಯಗಳು ಯಾರಿಗಾಗಿ? ದೂರದ ಹಳ್ಳಿಗಳಿಂದ, ಪಟ್ಟಣಗಳಿಂದ ಬರುವ ಸಾಮಾನ್ಯ ಪ್ರವಾಸಿಗರಿಗಾಗಿಯೇ? ಖಂಡಿತಾ ಇಲ್ಲ. ಇದೆಲ್ಲವೂ ದೇಶದ ಸಿರಿವಂತರು ಹಾಗೂ ವಿದೇಶ ಪ್ರವಾಸಿಗರಿಗಾಗಿ ಮಾತ್ರ. ಕರ್ನಾಟಕವೂ ಸೇರಿದಂತೆ ಭಾರತದ ಬಹುಸಂಖ್ಯಾತರು ‘5 ಸ್ಟಾರ್’ ಹೋಟೆಲ್‌ಗಳು ಹೇಗಿವೆ ಎಂದೂ ನೋಡಿರಲು ಸಾಧ್ಯವಿಲ್ಲ. ಹೀಗಿರುವಾಗ, ಜೋಗದಲ್ಲಿ 5 ಸ್ಟಾರ್ ಹೋಟೆಲ್ ನಿರ್ಮಾಣವಾದರೆ, ಅದರ ಉಪಯೋಗ ಸಾಮಾನ್ಯರಿಗೆ ದೊರೆಯಲು ಸಾಧ್ಯವಿಲ್ಲ. ಆ ಹೋಟೆಲ್‌ನ ಕಾಂಪೌಂಡ್‌ ಒಳಗೂ ಬಹುಸಂಖ್ಯಾತ ಪ್ರವಾಸಿಗರು ಹೋಗಲು ಸಾಧ್ಯವಾಗುವುದಿಲ್ಲ. ಅದೆಲ್ಲವೂ, ಬೆರಳೆಣಿಕೆಯಷ್ಟು ಪ್ರಮಾಣದಲ್ಲಿ ಬರುವ ಶ್ರೀಮಂತ ಪ್ರವಾಸಿಗರ ಉಪಯೋಗಕ್ಕೆ ಮಾತ್ರ. ಶ್ರೀಮಂತ ಪ್ರವಾಸಿಗರಿಗಾಗಿ ಅರಣ್ಯ ನಾಶ ಮಾಡಲಾಗುತ್ತಿದೆ. ಅರಣ್ಯ ಸಂಪತ್ತಿಗೆ ಸಂಚಕಾರ ಎದುರಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಕೇಂದ್ರ ಸರಕಾರವು ಇತ್ತೀಚಿಗೆ ಜಾರಿಗೆ ತಂದಿರುವ ‘ಅರಣ್ಯ ಹಾಗೂ ವನ್ಯಜೀವಿ ಪ್ರದೇಶಗಳಲ್ಲಿ ಸುಸ್ಥಿರ ಪರಿಸರ-ಪ್ರವಾಸೋದ್ಯಮ ಮಾರ್ಗದರ್ಶಿ ಸೂತ್ರಗಳು-2021’ ಪ್ರಕಾರ, ಪರಿಸರ-ಪ್ರವಾಸೋದ್ಯಮ ಸೌಕರ್ಯ ಒದಗಿಸಲು ಅರಣ್ಯ ಭೂಮಿಯ ಮೇಲೆ ಯಾವುದೇ ಶಾಶ್ವತ ರಚನೆ/ಕಟ್ಟಡ ಕಟ್ಟುವಂತಿಲ್ಲ. ಅಲ್ಲದೆ, ಪರಿಸರ ಸೂಕ್ಷ್ಮ ವಲಯದಲ್ಲಿ ವಾಣಿಜ್ಯೋದ್ಯಮ ಉದ್ದೇಶಕ್ಕಾಗಿ ಹೋಟೆಲ್‌ಗಳನ್ನು ನಿರ್ಮಿಸಲು ಅವಕಾಶವಿಲ್ಲ. ಆದರೆ, ಈ ನಿಮಯಗಳಿಗೆ ಸ್ವತಃ ಕೇಂದ್ರ ಸರ್ಕಾರವೇ ಹಲವು ಸಂದರ್ಭಗಳಲ್ಲಿ ಸೊಪ್ಪು ಹಾಕುವುದಿಲ್ಲ ಎಂಬುದು ಗಮನಾರ್ಹ.

ಜೋಗದಲ್ಲಿ ಪಂಚತಾರಾ ಹೋಟೆಲ್ ಮತ್ತು ರೋಪ್‌-ವೇ ನಿರ್ಮಾಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಪರಿಸರವಾದಿ ಕಲ್ಕುಳಿ ವಿಠಲ್ ಹೆಗ್ಡೆ, ”ಸರ್ಕಾರಕ್ಕೆ ಪರಿಸರ ರಕ್ಷಣೆ ಆದ್ಯತೆಯಾಗಿ ಉಳಿದಿಲ್ಲ. ಪ್ರವಾಸೋದ್ಯಮದ ಹೆಸರಿನಲ್ಲಿ ಪರಿಸರಕ್ಕೆ ಹಾನಿ ಮಾಡುತ್ತಿದೆ. ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಜೋಗದ ಬಳಿ ಹೋಟೆಲ್ ಕಟ್ಟುವ ಅಗತ್ಯವಿಲ್ಲ. ಈಗಾಗಲೇ ಅಲ್ಲಿ ಪ್ರವಾಸೋದ್ಯಮದ ಹೋಟೆಲ್‌ ಇದೆ. ಆದರೆ, ವಿದೇಶಿ ಮತ್ತು ಶ್ರೀಮಂತ ಪ್ರವಾಸಿಗರಿಗಾಗಿ ಪಂಚತಾರಾ ಹೋಟೆಲ್ ನಿರ್ಮಾಣಕ್ಕೆ ಮುಂದಾಗಿದೆ. ಇದು ಪರಿಸರಕ್ಕೂ ಹಾನಿ, ಅಭಿವೃದ್ಧಿಗೂ ಕಂಟಕ” ಎಂದಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X