ಶಿವಮೊಗ್ಗ ವಿಮಾನ ನಿಲ್ದಾಣ ಆರಂಭವಾದ ಬಳಿಕ ಒಂದಿಲ್ಲೊಂದು ಸಮಸ್ಯೆಯ ಕಾರಣಕ್ಕೆ ಮತ್ತೆ-ಮತ್ತೆ ಸುದ್ದಿಯಾಗುತ್ತಲೇ ಇದೆ. ಇದೀಗ, ಶಿವಮೊಗ್ಗ ಏರ್‌ಪೋರ್ಟ್‌ನಿಂದ ಬೆಂಗಳೂರಿಗೆ ಹಾರಾಟ ನಡೆಸಬೇಕಿದ್ದ ವಿಮಾನವೊಂದು ತಾಂತ್ರಿಕ ತೊಂದರೆಯಿಂದಾಗಿ ರದ್ದಾಗಿದೆ. ಪರಿಣಾಮ ಬೆಂಗಳೂರಿಗೆ ಹೊರಟಿದ್ದ ಪ್ರಯಾಣಿಕರು ಪರದಾಡಿದ್ದಾರೆ.
ಬುಧವಾರ ಬೆಳಗ್ಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಇಂಡಿಗೋ ವಿಮಾನ ಹೊರಡಬೇಕಿತ್ತು. ವಿಮಾನದಲ್ಲಿ ಪ್ರಯಾಣಿಸಲು 60 ಮಂದಿ ಪ್ರಯಾಣಿಕರು ಟಿಕೆಟ್ ಪಡೆದಿದ್ದರು. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಕೊನೆ ಕ್ಷಣದಲ್ಲಿ ವಿಮಾನ ಹಾರಾಟ ರದ್ದಾಗಿದೆ.
ಬೆಂಗಳೂರಿನಿಂದ ಶಿವಮೊಗ್ಗಗೆ ತೆರಳಿದ್ದ ವಿಮಾನ ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ 11-05ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ, 15 ನಿಮಿಷ ತಡವಾಗಿ 11-20ಕ್ಕೆ ಲ್ಯಾಂಡ್ ಆಗಿದೆ. ಮತ್ತೆ, 11-30ಕ್ಕೆ ಶಿವಮೊಗ್ಗದಿಂದ ಮತ್ತೆ ಬೆಂಗಳೂರಿಗೆ ಹೊರಡಬೇಕಿದ್ದ ಅದೇ ವಿಮಾನ ತಾಂತ್ರಿಕ ಸಮಸ್ಯೆಯಿಂದಾಗಿ ರದ್ದಾಗಿದೆ.
ಇತ್ತೀಚೆಗೆ, ಅಕ್ಟೋಬರ್ 12ರಂದು ಇಂಡಿಯೋ ಕಂಪನಿಯದ್ದೇ ಆದ ವಿಮಾನವು ಬೆಂಗಳೂರಿನಿಂದ ಶಿವಮೊಗ್ಗಗೆ ತೆರಳಿತ್ತು. ಆಗಲೂ, ಹವಮಾನ ವೈಪರಿತ್ಯದ ಕಾರಣ ಲ್ಯಾಂಡ್ ಆಗಲು ಪರದಾಡಿತ್ತು. 20 ನಿಮಿಷ ಸುತ್ತಾಡಿ ಆ ಬಳಿಕ ಲ್ಯಾಂಡ್ ಆಗಿತ್ತು.
ಮಾತ್ರವಲ್ಲದೆ, ಅಕ್ಟೋಬರ್ 8ರಂದು ಬೆಂಗಳೂರಿನಿಂದ ಶಿವಮೊಗ್ಗಗೆ ತೆರಳಿದ್ದ ವಿಮಾನವೊಂದು ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಆಗದೇ ಬೆಂಗಳೂರಿಗೆ ವಾಪಸ್ ಆಗಿತ್ತು.