12 ವರ್ಷಗಳ ಹಿಂದೆ ಎಎಸ್‌ಐ ಬಾಲಕೃಷ್ಣ ಪಾಲೇಕರ್ ಮೇಲೆ ಹಲ್ಲೆ ಹಾಗೂ ಎರಡು ಚೆಕ್‌ಬೌನ್ಸ್ ಪ್ರಕರಣಗಳಲ್ಲಿ ಮಾಜಿ ಶಾಸಕ ವಿ.ಎಸ್ ಪಾಟೀಲ್ ಅವರ ಪುತ್ರ ಬಾಪು ಗೌಡ ಪಾಟೀಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಉಪ ಕಾರಾಗೃಹದಲ್ಲಿ ಇರಿಸಲಾಗಿದೆ.
2011ರಲ್ಲಿ ಬಾಪುಗೌಡಗೆ ಸೇರಿದ ವಾಹನವನ್ನು ಪೊಲೀಸರು ಹಿಡಿದಿದ್ದರು. ಪ್ರಕರಣ ಸಂಬಂಧ ಮುಂಡಗೋಡದ ಅರಣ್ಯ ಇಲಾಖೆಯ ಐಬಿಯಲ್ಲಿ ಆಧಿಕಾರ ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ವೇಳೆ, ಎಎಸ್‌ಐ ಬಾಲಕೃಷ್ಣ ಅವರ ಮೇಲೆ ಬಾಪುಗೌಡ ಮತ್ತು ಆತನ 15 ಮಂದಿ ಸಹಚರರು ಕುಡಿತ ಅಮಲಿನಲ್ಲಿ ಹಲ್ಲೆ ನಡೆಸಿದ್ದರು. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
ಆರೋಪಿಗಳ ವಿರುದ್ಧ ಎಐಎಸ್ ಬಾಲಕೃಷ್ಣ ಅವರು ನ್ಯಾಯಾಲಯದಲ್ಲಿ ಬಾಪುಗೌಡ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಮತ್ತು ಹಲ್ಲೆ ಪ್ರಕರಣ ದಾಖಲಿಸಿದ್ದರು. ಅಲ್ಲದೆ, ಬಾಪುಗೌಡ ವಿರುದ್ಧ ಇಬ್ಬರು ಖಾಸಗಿ ವ್ಯಕ್ತಿಗಳು ಚೆಕ್ ಬೌನ್ಸ್ ಪ್ರಕರಣವನ್ನೂ ದಾಖಲಿಸಿದ್ದರು. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 353, 141, 143, 147, 323, 353, 504, 506, 149ಅಡಿ ಪ್ರಕರಣ ದಾಖಲಾಗಿದೆ.
ಈ ಎಲ್ಲ ಪ್ರಕರಣಗಳಲ್ಲೂ ಮುಂಡಗೋಡ ಜೆಎಂಎಫ್‌ಸಿ ನ್ಯಾಯಾಲಯ ವಾರೆಂಟ್ ಹೊರಡಿಸಿತ್ತು. ಆದರೆ, ಆತ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಆತನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಬಾಪುಗೌಡನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದ್ದು, ಶಿರಸಿ ಠಾಣೆಗೆ ಕಳಿಸಿದೆ.