ಕಾಲೇಜಿನ ಬಡ್ತಿ ಪಡೆಯಲು ಮಾಜಿ ಶಾಸಕರ ಪತ್ನಿಯೊಬ್ಬರು ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ್ದು, ಇದೀಗ ಸಿಕ್ಕಿಬಿದ್ದಿದ್ದಾರೆ. ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ಮಾಜಿ ಶಾಸಕ ಡಾ. ಕೆ ಶ್ರೀನಿವಾಸಮೂರ್ತಿ ಅವರ ಪತ್ನಿ ಡಾ. ಸುಜಾ ಕೆ ಶ್ರೀಧರ್ ಅವರು ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಸಿಕ್ಕಿಬಿದ್ದಿದ್ದಾರೆ.
ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಪಡೆಯಲು ಡಾ. ಸುಜಾ ಅವರು ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅದೇ ಕಾಲೇಜಿನ ಮತ್ತೋರ್ವ ಉಪನ್ಯಾಸಕಿ ಡಾ. ಜಿ.ಎನ್ ಶಕುಂತಲಾ ಅವರಿಗೆ ಬಡ್ತಿ ದೊರೆತಿತ್ತು. ಆದರೆ, ನೆಲಮಂಗಲ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಡಾ. ಕೆ ಶ್ರೀನಿವಾಸಮೂರ್ತಿ ಅವರು ತಮ್ಮ ಪ್ರಭಾವ ಬಳಸಿ, ಶಕುಂತಲಾ ಅವರಿಗೆ ದೊರೆತಿದ್ದ ಬಡ್ತಿಯನ್ನು ತಪ್ಪಿಸಿ, ತಮ್ಮ ಪತ್ನಿಗೆ ಬಡ್ತಿ ಕೊಡಿಸಿದ್ದಾರೆ ಎಂದೂ ಆರೋಪಿಸಲಾಗಿದೆ.
ಬಡ್ತಿಯಿಂದ ವಂಚಿತರಾದ ಡಾ. ಶಕುಂತಲಾ ಅವರು ತಮಗೆ ನ್ಯಾಯ ಕೊಡಿಸಬೇಕೆಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಅಧೀಕ್ಷಕ ಎಚ್.ಡಿ.ಆನಂದ್ ಕುಮಾರ್ ಅವರಿಗೆ ದೂರು ನೀಡಿದ್ದರು. ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ್ದ ಡಾ. ಸುಜಾ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದರು.
ಮಾಜಿ ಶಾಸಕ ಶ್ರೀನಿವಾಸಮೂರ್ತಿ ಅವರು ದ್ರಾವಿಡ ಸಮುದಾಯಕ್ಕೆ ಸೇರಿದವರು. ಆದರೆ, ಅವರ ಪತ್ನಿ ಡಾ. ಸುಜಾ ಅವರು ಕೇರಳದ ಎಳವ ಜಾತಿಗೆ ಸೇರಿದವರು. ಮಗಳಿಗೆ ತಂದೆಯ ಜಾತಿ ಮಾತ್ರ ಅನ್ವಯಿಸುತ್ತದೆ. ಆದರೆ, ಅವರು ತಮ್ಮ ಪತಿಯ ದ್ರಾವಿಡ ಜಾತಿ (ಎಸ್‌ಸಿ) ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರಕರಣ ಸಂಬಂಧ ಸುಳ್ಳು ಜಾತಿ ಪ್ರಮಾಣಪತ್ರ ನೀಡಲು ಶಿಫಾರಸ್ಸು ಮಾಡಿದ ಕಂದಾಯ ನೀರೀಕ್ಷಕ, ಗ್ರಾಮ ಲೆಕ್ಕಿಗ ಹಾಗೂ ನೆಲಮಂಗಲ ತಹಶೀಲ್ದಾರ್ ವಿರುದ್ಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.