ದಲಿತ ಹಾಗೂ ಹಿಂದುಳಿದ ವರ್ಗದ ಅಧಿಕಾರಿಗಳನ್ನು ಟಾರ್ಗೆಟ್ ಮಾಡುವ ಜಿಪಂ ಸಿಇಓ ಜಿ.ಪ್ರಭು ಅವರ ಮೇಲೆ ನಿರಂತರವಾಗಿ ದಲಿತ ಮುಖಂಡರು ಜಿಲ್ಲೆಯಾದ್ಯಂತ ಸುದ್ದಿಗೋಷ್ಠಿ ನಡೆಸಿದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ರೀತಿ ಗಮನಿಸಿದರೆ ಮೇಲ್ನೋಟಕ್ಕೆ ಜಿಲ್ಲೆಯಲ್ಲಿ ಇಬ್ಬರು ಪ್ರಭಾವಿ ದಲಿತ ಸಚಿವರಿಗಿಂತ ಇವರೇ ಪ್ರಭಾವಿಗಳು ಅಂತ ಕಾಣುತ್ತಿದೆ ಎಂದು ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್ ವ್ಯಂಗ್ಯವಾಗಿ ಟೀಕೆ ಮಾಡಿದರು.
ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಜಾತೀಯತೆ ಮನೋಭಾವ ಬೆಳೆಸಿಕೊಂಡು ದುರುದ್ದೇಶದಿಂದ ಅಹಿಂದ ಅಧಿಕಾರಿಗಳು, ನೆೌಕರರನ್ನು ಗುರಿಯಾಗಿಸಿಕೊಂಡು ವಿನಾಕಾರಣ ನಿಂದಿಸುವುದು, ತೊಂದರೆ ಕೊಡುವುದು, ಬಲವಾದ ಕಾರಣ ಇಲ್ಲದಿದ್ದರೂ ಅಮಾನತು ಶಿಕ್ಷೆ ಕೊಡುವುದು ನಿರಂತರ ನಡೆಸಿದ್ದಾರೆ. ಈ ಬಗ್ಗೆ ದಲಿತ ಮುಖಂಡರು ನಿರಂತರ ಒತ್ತಾಯ ಮಾಡಿದರೂ ಜಿಲ್ಲೆಯ ಸಚಿವರು ಮೌನಕ್ಕೆ ಶರಣಾಗಿದ್ದಾರೆ. ಈ ವರ್ತನೆಯೇ ಗೊಂದಲಮಯವಾಗಿದೆ ಎಂದು ಪ್ರಶ್ನಿಸಿದರು.
ಸ್ವಜಾತಿ ವ್ಯಾಮೋಹಕ್ಕೆ ಶರಣಾದ ಸಿಇಓ ಸಾಹೇಬ್ರು ಕೊರಟಗೆರೆ ಪಿಡಿಓ ಒಬ್ಬರನ್ನು ಕಾನೂನುಬಾಹಿರವಾಗಿ ಮ್ಯಾನೇಜರ್ ಹುದ್ದೆಗೆ ನಿಯೋಜನೆ ಮಾಡಿಕೊಂಡು ಸ್ವಜಾತಿ ಪಿಡಿಒ ಕೈ ಕೆಳಗೆ ಜಿಲ್ಲೆಯ ಎಲ್ಲಾ ಹಿರಿಯ ಪಿಡಿಓಗಳು ಕೆಲಸ ಮಾಡುವಂತೆ ಮಾಡಿರುವುದು ಅವರ ದಲಿತ ವಿರೋಧಿ ಧೋರಣೆಗೆ ಹಿಡಿದ ಕೈಗನ್ನಡಿ ಆಗಿದೆ ಎಂದ ಅವರು ಈಗಾಗಲೇ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದಿಂದ ಸಿಇಓ ಧೋರಣೆ ವಿರುದ್ಧ ಪ್ರತಿಭಟನೆ ನಡೆದಿದ್ದು, ನಂತರ ವೈದ್ಯಾಧಿಕಾರಿಗಳು ಹೋರಾಟ ಮಾಡಿದ್ದರು. ಇಷ್ಟೆಲ್ಲಾ ದೂರುಗಳಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಅಮಾನತು ಮಾಡಿ ವರ್ಗಾವಣೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ಜೆಜೆಎಂ ಮತ್ತು ಇನ್ನಿತರ ಗುತ್ತಿಗೆದಾರರು ಕಮಿಷನ್ ಆರೋಪ ಮಾಡಿ ಪ್ರತಿಭಟನೆ ನಡೆಸಿದ್ದರು. ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಾನಸಿಕ ಹಿಂಸೆ ನೀಡಿದ ಬಗ್ಗೆ ಕೂಡ ಸಿಇಓ ವಿರುದ್ಧ ಪ್ರತಿಭಟನೆ ನಡೆದಿತ್ತು. ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ವತಿಯಿಂದ ಧರಣಿ ಸತ್ಯಾಗ್ರಹ ಕೂಡಾ ನಡೆದಿತ್ತು. ಹೀಗೆ ನಿರಂತರವಾಗಿ ಸಿಇಓ ಧೋರಣೆಗೆ ನಲುಗಿ ಹೋರಾಟ ನಡೆದರೂ ಕ್ರಮ ಎನ್ನುವುದು ಕೈಗೊಳ್ಳದಿರುವುದು ಬೇಸರ ತರಿಸಿದೆ ಎಂದರು.
ತುರುವೇಕೆರೆ ತಾಲ್ಲೂಕಿನ ದಸಂಸ ಸಂಚಾಲಕ ದಂಡಿನಶಿವರ ಶಿವಕುಮಾರ್ ಮಾತನಾಡಿ ಜಿಲ್ಲೆಯಲ್ಲಿ ಇಬ್ಬರು ದಲಿತ ಸಚಿವರಿದ್ದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಡೆಸುತ್ತಿರುವ ದಲಿತ ವಿರೋಧಿ ಧೋರಣೆ, ಅಸ್ಪೃಶ್ಯತಾ ಮನೋಭಾವ, ಉದ್ಧಟತನದ ಪರಮಾಧಿಕಾರ, ಸ್ವಜನ ಪಕ್ಷಪಾತದ ಮೂಲಕ ತಮ್ಮವರ ಓಲೈಕೆ ಮಾಡಿ ದಲಿತರನ್ನು ಟಾರ್ಗೆಟ್ ಮಾಡುತ್ತಿದ್ದರೂ ಕೂಡ ಇಂತಹ ಅಪ್ರಾಮಾಣಿಕ ಸಿ ಇ ಓ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿಸಲು ಜಿಲ್ಲೆಯ ಸಚಿವರಿಗೆ ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ದಲಿತ ಸಚಿವರಿಗೆ ದಲಿತರ ಹಿತ ಕಾಪಾಡುವ ನೈತಿಕತೆ ಇಲ್ಲದಾಗಿದೆಯೇ ಎನ್ನುವುದು ತಿಳಿಯುತ್ತಿಲ್ಲ. ಕೂಡಲೇ ದಲಿತ ವಿರೋಧಿ ಸಿಇಓ ಅವರನ್ನು ಅಮಾನತು ಮಾಡಿ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದಸಂಸ ಸಂಚಾಲಕ ಲಿಂಗದೇವರು ಮಾತನಾಡಿ ಸ್ವಜಾತಿ ವ್ಯಾಮೋಹಕ್ಕೆ ದಲಿತ ವಿರೋಧಿ ನೀತಿ ಪಾಲಿಸುತ್ತಿದ್ದಾರೆ. ಇವರ ಧೋರಣೆ ಬಗ್ಗೆ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ದಲಿತ ಸಂಘರ್ಷ ಸಮಿತಿ ಪತ್ರಿಕಾ ಹೇಳಿಕೆ ನೀಡಿ ಪ್ರತಿಭಟನೆ ಮಾಡಿದ್ದಾರೆ. ಆದರೂ ಕ್ರಮ ಕೈಗೊಂಡಿಲ್ಲ. ಸರ್ಕಾರ ಹಾಗೂ ಜಿಲ್ಲೆಯ ಪ್ರಭಾವಿ ಸಚಿವರು ಸಹ ಮೌನಕ್ಕೆ ಜಾರಿದ್ದಾರೆ. ಮುಂದುವರೆದು ದಲಿತ ಸಂಘಟನೆ ಜಿಲ್ಲಾ ಪಂಚಾಯಿತಿ ಮುಂದೆ ಹೋರಾಟ ನಡೆಸಲಿದೆ. ಈ ಮಧ್ಯೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯೋಗ ಈ ಉನ್ನತ ಅಧಿಕಾರಿ ವಿರುದ್ಧ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಪಂ ಸದಸ್ಯ ರೇಣುಕಾ ಪ್ರಸಾದ್, ದಸಂಸ ಗುಬ್ಬಿ ತಾಲ್ಲೂಕು ಸಂಚಾಲಕ ಕಡಬ ಶಂಕರ್, ಕುಂದರನಹಳ್ಳಿ ನಟರಾಜ್, ಸವಿತಾ ಸಮಾಜದ ಅಧ್ಯಕ್ಷ ಪಾಪಣ್ಣ, ಮೇದಾರರ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಯ್ಯ, ಮುನಿಯೂರು ರಂಗಸ್ವಾಮಿ, ಶಿವಪ್ಪ, ಗೋವಿಂದಪ್ಪ, ಮಂಜುನಾಥ್, ಶಿವಸ್ವಾಮಿ ಇತರರು ಇದ್ದರು.