ನದಿಯಲ್ಲಿ ಈಜಲು ತೆರಳಿದ್ದ ಸುರತ್ಕಲ್‌ನ ಶಾಲೆಯೊಂದರ ನಾಲ್ವರು ವಿದ್ಯಾರ್ಥಿಗಳು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಂಗಳವಾರ ಸಂಜೆ ಘಟನೆ ನಡೆದಿದೆ.
ಶಾಲೆಯಲ್ಲಿ ಪರೀಕ್ಷೆ ಮುಗಿಸಿದ ಬಳಿಕ ವಿದ್ಯಾರ್ಥಿಗಳು ಮನೆಗೆ ತೆರಳದೆ, ಪೋಷಕರಿಗೆ ಮಾಹಿತಿಯನ್ನೂ ನೀಡದೆ, ಹಳೆಯಂಗಡಿಯ ಕೊಪ್ಪಳ ರೈಲ್ವೇ ಸೇತುವೆಯ ಬಳಿ ನದಿಗೆ ಈಜಲು ಹೋಗಿದ್ದರು. ಈ ವೇಳೆ ನಾಲ್ವರೂ ಮೃತಪಟ್ಟಿದ್ದಾರೆ.
ಸುರತ್ಕಲ್ ಅಗರಮೇಲ್ ನಿವಾಸಿ ಚಂದ್ರಕಾಂತ ಎಂಬವರ ಪುತ್ರ ಯಶ್ಚಿತ್ (15), ಹಳೆಯಂಗಡಿ ತೋಕೂರು ನಿವಾಸಿ ವಸಂತ ಎಂಬವರ ಪುತ್ರ ರಾಘವೇಂದ್ರ (15), ಸುರತ್ಕಲ್ ಗುಡ್ಡೆಕೊಪ್ಲ ನಿವಾಸಿ ವಿಶ್ವನಾಥ ಎಂಬವರ ಪುತ್ರ ನಿರೂಪ್ (15), ಚಿತ್ರಾಪುರ ನಿವಾಸಿ ದೇವದಾಸ್ ಎಂಬವರ ಪುತ್ರ ಅನ್ವಿತ್ (15) ಮೃತಪಟ್ಟ ವಿದ್ಯಾರ್ಥಿಗಳು.
ನಾಲ್ವರೂ ಎಸ್‌ಎಸ್‌ಎಲ್‌ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮಂಗಳವಾರ ನಡೆದ ಇಂಗ್ಲಿಷ್ ಪೂರ್ವ ಸಿದ್ದತಾ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಮನೆಗೆ ಹಿಂದಿರುಗಿರಲಿಲ್ಲ. ಮಕ್ಕಳು ಬಾರದ್ದರಿಂದ ಪೋಷಕರು ಮಂಗಳವಾರ ರಾತ್ರಿ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸಿದ ಪೊಲೀಸರು ವಿವಿಧೆಡೆ ಸಿಸಿ ಟಿವಿ ಪರಿಶೀಲಿಸಿದ್ದಾರೆ. ಈ ವೇಳೆ, ವಿದ್ಯಾರ್ಥಿಗಳು ಸುರತ್ಕಲ್ ಬಸ್ ನಿಲ್ದಾಣದಿಂದ ಬಸ್ ಹತ್ತಿ ಹಳೆಯಂಗಡಿಯಲ್ಲಿ ಇಳಿದು ಮುಂದಕ್ಕೆ ತೆರಳಿದ್ದಾರೆ ಎಂಬುದು ಗೊತ್ತಾಗಿದೆ. ಬಳಿಕ, ವಿದ್ಯಾರ್ಥಿಯೋರ್ವನ ಬಳಿಯಿದ್ದ ಮೊಬೈಲ್ ನ ಟವರ್ ಲೊಕೇಷನ್ ಆಧಾರದಲ್ಲಿ ಅವರು ನದಿ ತೀರಕ್ಕೆ ಹೋಗಿದ್ದಾರೆಂದು ಪೊಲೀಸರು ಕಂಡುಕೊಂಡಿದ್ದಾರೆ.
ನದಿ ಬಳಿ ಪರಿಶೀಲನೆ ನಡೆಸಿದಾಗ, ವಿದ್ಯಾರ್ಥಿಗಳ ಬ್ಯಾಗ್, ಚಪ್ಪಲಿಗಳು ಪತ್ತೆಯಾಗಿವೆ. ನಂತರ, ನದಿಯಲ್ಲಿ ಶೋಧ ನಡೆಸಿದ್ದು, ವಿದ್ಯಾರ್ಥಿಗಳ ಮೃತದೇಹಗಳು ಪತ್ತೆಯಾಗಿವೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.