ಹುಣಸೆ ಮರದಿಂದ ಬೀಳುತ್ತಿದ್ದ ಕಸದ ವಿಚಾರಕ್ಕೆ ಗಲಾಟೆ ನಡೆದು ವ್ಯಕ್ತಿಯೊಬ್ಬನನ್ನು ಕೊಂದಿದ್ದ ಮಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆ ವಿಧಿಸಿ ಶಿವಮೊಗ್ಗ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಚೌರಡೇರಕೇರಿಯಲ್ಲಿ 2017ರಲ್ಲಿ ಗೋಣಿ ಮೂರ್ತಪ್ಪ(46) ಎಂಬಾತನನ್ನು ಕೊಲೆ ಮಾಡಲಾಗಿತ್ತು. ಮೂರ್ತಪ್ಪ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಐವರನ್ನು ಬಂಧಿಸಿದ್ದರು.
ಕೊಲೆ ಪ್ರಕರಣದ ವಿಚಾರಣೆ ನಡೆಸಿರುವ ಜಿಲ್ಲಾ ಸೆಷನ್ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್.ಪಲ್ಲವಿ ಅವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಪ್ರಕರಣದಲ್ಲಿ ಆರೋಪಿಗಳಾಗಿದ್ದ ಅವಿನಾಶ ಅಲಿಯಾಸ್ ಅವಿ (25), ಪ್ರಶಾಂತ್ ಅಲಿಯಾಸ್ ಗುಂಡ(26), ಪ್ರದೀಪ್ (28) ಹಾಗೂ ಗೌತಮ್ ಅಲಿಯಾಸ್ ಗುತ್ಯಪ್ಪಗೆ (28) ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅವರಲ್ಲಿ ಮೂವರಿಗೆ ತಲಾ 90,000 ರೂ. ದಂಡ ವಿಧಿಸಲಾಗಿದ್ದು, ಗುತ್ಯಪ್ಪಗೆ 80,000 ರೂ. ದಂಡ ವಿಧಿಸಲಾಗಿದೆ.
ಅಲ್ಲದೆ, ಅಪರಾಧಿಗಳಿಗೆ ಸಹಾಯ ಮಾಡಿದ್ದ ಅಕ್ಷಯ್(24) ಎಂಬಾತನಿಗೆ 3 ವರ್ಷ ಜೈಲು ಮತ್ತು 10,000 ರೂ. ದಂಡ ವಿಧಿಸಲಾಗಿದೆ.