ಕೆಎಎಸ್, ಐಎಎಸ್ ಮತ್ತು ಐಪಿಎಸ್ ಓದಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಜೊತೆಗೆ ಶೇ.50% ಶುಲ್ಕವನ್ನು ಗ್ರಾಮೀಣ ವಿದ್ಯಾ ಸಂಸ್ಥೆ ಮೂಲಕ ನೀಡಲಾಗುತ್ತದೆ. ಅತಿ ಬಡವರಿದ್ದರೆ ಪೂರ್ತಿ ಶುಲ್ಕವನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಪಂ ಮಾಜಿ ಸದಸ್ಯ ಹಾಗೂ ರೂರಲ್ ಡಿಗ್ರಿ ಕಾಲೇಜು ಕಾರ್ಯದರ್ಶಿ ಅ.ಮು ಲಕ್ಷ್ಮೀ ನಾರಾಯಣ್ ಭರವಸೆ ನೀಡಿದರು.
ಬೇತಮಂಗಲ ಪಟ್ಟಣದ ಗ್ರಾಮೀಣ ಪದವಿ ಪೂರ್ವ ಕಾಲೇಜಿನ ಪ್ರೆಶರ್ಸ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಗ್ರಾಮೀಣ ಭಾಗದ ಬಡವರಿಗೆ ಸೂಕ್ತ ವಿದ್ಯಾಭ್ಯಾಸ ದೊರೆಯಬೇಕು. ಉನ್ನತ ಸ್ಥಾನಮಾನ, ಅವಕಾಶ ದೊರೆಯಬೇಕೆಂಬ ಉದ್ದೇಶದಿಂದ ಪದವಿ ಕಾಲೇಜು ಆರಂಭಿಸಿದ್ದು, ಜತೆಗೆ ಕೆಎಎಸ್, ಐಪಿಎಸ್ ನಂತಹ ದೊಡ್ಡ ಓದು ಓದಲು ಹಣಕಾಸಿನ ಸಮಸ್ಯೆಯಿದ್ದರೆ, ಕೋಲಾರದ ಐಪಿಎಸ್ ಅಧಿಕಾರಿ ದೇವರಾಜ್ ಅವರ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯಲು ಕಾಲೇಜಿನ ಉಚಿತ ವಾಹನ ಮತ್ತು ಶೇ.50% ಶುಲ್ಕವನ್ನು ತಾವೇ ಭರಿಸಲಾಗುವುದು” ಎಂದು ಘೋಷಣೆ ಮಾಡಿದರು.
ವಿದ್ಯಾರ್ಥಿಗಳ ಈ ವಯಸ್ಸಿನಲ್ಲಿ ದುಶ್ಚಟ, ಪ್ರೀತಿ, ಇತರೆ ಕಡೆ ಗಮನ ಹರಿಯುವುದು ಸಹಜ. ಆದರೆ ಈ ವಯಸ್ಸಿನಲ್ಲಿ ಕೇವಲ ವಿದ್ಯೆಯ ಕಡೆ ಗಮನ ಕೊಟ್ಟು ಒಳ್ಳೆಯ ಫಲಿತಾಂಶ ಪಡೆದುಕೊಂಡಾಗ ತಮ್ಮ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಕೋಲಾರ | ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್ ಗಾಂಧಿ, ದೇವರಾಜ ಅರಸು ಜನ್ಮ ದಿನಾಚರಣೆ
ಪಿಯು ಕಾಲೇಜು ಪ್ರಾಂಶುಪಾಲ ಮಲ್ಲಿಕಾರ್ಜುನ್ ಮಾತನಾಢಿ, “ಪೋಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಅನೇಕ ಕನಸು ಕಟ್ಟಿಕೊಂಡಿರುತ್ತಾರೆ ಅವರ ಹುಸಿಗೊಳಿಸದೆ ಉತ್ತಮ ಜೀವನ ರೂಪಿಸಿಕೊಳ್ಳಿ” ಎಂದರು.
ಕಾರ್ಯಕ್ರಮದಲ್ಲಿ ರೂರಲ್ ಡಿಗ್ರಿ ಕಾಲೇಜು ಪ್ರಾಂಶುಪಾಲೆ ಶ್ರೀಮತಿ ವಿಜಯೇಂದ್ರ, ನಿರ್ದೇಶಕ ವಿಜಯೇಂದ್ರ, ಉಪನ್ಯಾಸಕ ಶ್ರವಣ್, ಗ್ರಾಮೀಣ ಪ್ರೌಡ ಶಾಲೆಯ ಮುಖ್ಯ ಶಿಕ್ಷಕಿ ಮಂಜುಳ, ಖಜಾಂಚಿ ಪ್ರಭಾಕರ್, ಭೋಧಕೇತರ ವರ್ಗ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.