ಸುಟ್ಟ ಗಾಯ, ಆಸಿಡ್ ದಾಳಿ, ವಿದ್ಯುತ್ ಅಪಘಾತಗಳಿಂದಾದ ಗಾಯಗಳನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಸರಿಪಡಿಸುವ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರವನ್ನು ಇದೇ ಮೇ 20ರಂದು ಬೆಂಗಳೂರಿನ ಮಲ್ಲೇಶ್ವರಂ 18ನೇ ಕ್ರಾಸ್‌ನಲ್ಲಿರುವ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ ಎಂದು ಫ್ರೆಂಡ್ಸ್ ವೆಲ್ಫೇರ್ ಆರ್ಗನೈಜೇಷನ್‌ನ ಅಧ್ಯಕ್ಷ ದೀಪೇಂದ್ರ ದೇವ್ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಟ್ಟ ಗಾಯಗಳಿಂದ ಸಾರ್ವಜನಿಕರೊಂದಿಗೆ ಬೆರೆಯಲು ಸಾಧ್ಯವಾಗದೆ ಅದೆಷ್ಟೋ ಜನ ಪರಿತಪಿಸುತ್ತಿದ್ದಾರೆ. ಇನ್ನು ಯಾವುದೋ ಕ್ಷುಲ್ಲುಕ ಕಾರಣಕ್ಕೆ ಆಸಿಡ್ ದಾಳಿಯಾಗಿ ಸುಂದರ ಮುಖ ವಿಕಾರವಾಗಿ ಸಾರ್ವಜನಿಕವಾಗಿ ಮುಖ ತೋರಿಸದೆ ನೊಂದವರು ಎಷ್ಟೋ ಮಂದಿ. ಇನ್ನು ವಿದ್ಯುತ್ ಆಘಾತ ಸೇರಿ ಇತರೆ ಸಮಸ್ಯೆಗಳಿಂದಲೂ ಮುಖ ಸೇರಿ ದೇಹದ ಯಾವುದೇ ಭಾಗದಲ್ಲಿ ಗಾಯಗಳಾಗಿ, ಇದರಿಂದ ಸಾರ್ವಜನಿಕರೊಂದಿಗೆ ಬೆರೆಯಲಾಗದೆ ಪರದಾಡುತ್ತಿರುವವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಸಲುವಾಗಿ ಶಿಬಿರ ಆಯೋಜಿಸಿರುವುದಾಗಿ ತಿಳಿಸಿದರು.
ಎಲ್ಲ ರೀತಿಯ ಸುಟ್ಟ ಗಾಯಗಳಿಗೂ ಪ್ಲಾಸ್ಟಿಕ್ ಸರ್ಜರಿ ಮಾಡಲಾಗುವುದು. ಸಮಾಜಕ್ಕೆ ಸೇವೆ ಮಾಡಬೇಕು ಎಂಬ ಉದ್ಧೇಶದಿಂದ ಉಚಿತವಾಗಿ ಈ ಪ್ಲಾಸ್ಟಿಕ್ ಸರ್ಜರಿ ಶಿಬಿರ ನಡೆಸಲಾಗುತ್ತಿದೆ. ಕಳೆದ 28 ವರ್ಷಗಳಿಂದ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಈ ಬಾರಿ 28ನೇ ವರ್ಷದ ಪ್ಲಾಸ್ಟಿಕ್ ಸರ್ಜರಿ ಶಿಬಿರ ನಡೆಯುತ್ತಿದೆ. ಈವರೆಗೆ ಸುಮಾರು 4500 ಮಂದಿ ರೋಗಿಗಳಿಗೆ ಉಚಿತವಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ ಎಂದು ಹೇಳಿದರು.
ಪ್ರತಿ ವರ್ಷವೂ ರಾಜ್ಯ ಹಾಗೂ ಹೊರರಾಜ್ಯಗಳಿಂದ ಶಿಬಿರದಲ್ಲಿ ಹಲವು ಮಂದಿ ಭಾಗವಹಿಸುತ್ತಿದ್ದು, ಎಲ್ಲವೂ ಉಚಿತವಾಗಿರಲಿದೆ. ಪ್ಲಾಸ್ಟಿಕ್ ಸರ್ಜರಿ, ಆಸ್ಪತ್ರೆ ವೆಚ್ಚ ಸೇರಿ ಎಲ್ಲವೂ ಉಚಿತವಾಗಿರಲಿದೆ. ಇನ್ನು ಹೊರಗೆ ಯಾರಾದರೂ ಇದೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಬೇಕಾದರೆ ಕನಿಷ್ಠ 2.5 ಲಕ್ಷದಿಂದ 5 ಲಕ್ಷದವರೆಗೆ ವೆಚ್ಚವಾಗಲಿದೆ. ಹಾಗಾಗಿ ಇಲ್ಲಿ ಸಂಪೂರ್ಣ ಉಚಿತವಾಗಿರುವ ಕಾರಣ ಆರ್ಥಿಕವಾಗಿ ಹಿಂದುಳಿದವರು ಶಿಬಿರದ ಸದುಪಯೋಗಪಡೆಯಬಹುದು ಎಂದು ಹೇಳಿದರು.
ಆಸಕ್ತರು ಮೊ.ಸಂಖ್ಯೆ: 9880307780, 9148741707 ಕರೆ ಮಾಡಿ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಕುಂತಲ್ ಶಾ, ಪಾಯಲ್ ಶಾ ಇದ್ದರು.