ಗದಗ ಜನ ಸಾಮಾನ್ಯರ ಆಸಕ್ತಿ ಹಾಗೂ ಅಭಿರುಚಿಗೆ ಅನುಗುಣವಾಗಿ ಫಲ-ಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಫಲ-ಪುಷ್ಪ ಪ್ರದರ್ಶನ ನಗರದ ಆರೋಗ್ಯವನ್ನು ಎತ್ತಿ ತೋರಿಸುವಂತಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ್ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ವತಿಯಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಫಲ-ಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಫಲ-ಪುಷ್ಪ ಪ್ರದರ್ಶನ ಎನ್ನುವುದಕ್ಕಿಂತ ಕಲಾ ಪುಷ್ಪ ಪ್ರದರ್ಶನ ಎನ್ನುವಂತಿದೆ. ಇದೊಂದು ಶ್ರೇಷ್ಠ ಪ್ರದರ್ಶನವಾಗಿದೆ. ಸಾರ್ವಜನಿಕರಿಗೆ ವೀಕ್ಷಣೆಗೆ ಉಚಿತ ಅವಕಾಶವನ್ನು ಇಲಾಖೆಯಿಂದ ಮಾಡಲಾಗಿದ್ದು ಜನಸಾಮಾನ್ಯರು ಈ ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸಿ ಆಸ್ವಾದಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರ, ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರುಗಳಾದ ಶೈಲೇಂದ್ರ ಬಿರಾದಾರ, ಗೀರಿಶ ಹೊಸೂರ, ಗಣ್ಯರಾದ ಬಿ.ಬಿ.ಅಸೂಟಿ, ಅಶೋಕ ಮಂದಾಲಿ. ಎಸ್.ಎನ್.ಬಳ್ಳಾರಿ ಸೇರಿದಂತೆ ಇತರರು ಇದ್ದರು.
ಪ್ರದರ್ಶನದ ಆಕರ್ಷಣೆಗಳು
ಗುಲಾಬಿ ಹೂವುಗಳಿಂದ ಅಲಂಕೃತಗೊಂಡ ವೀರನಾರಾಯಣ ದೇವಸ್ಥಾನ, ಸಿರಿಧಾನ್ಯಗಳಲ್ಲಿ ಅರಳಿದ ಕನ್ನಡಾಂಬೆ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ, ಮರಳಿನಲ್ಲಿ ಸಾಂಸ್ಕೃತಿಕ ರಾಯಭಾರಿ ಬಸವಣ್ಣನ ಮೂರ್ತಿ, ಏಲಕ್ಕಿಯಲ್ಲಿ ಗಣೇಶನ ಮೂರ್ತಿ, ಹೂವುಗಳಲ್ಲಿ ಅಲಂಕೃತಗೊಂಡಿರುವ ಸೆಲ್ಫಿ ಪಾಯಿಂಟ್‍ಗಳು, ತಬಲಾ, ಪಿಯಾನೋ, ಕಲ್ಲಂಗಡಿ ಹಣ್ಣಿನಲ್ಲಿ ಕೆತ್ತನೆಗೊಂಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳು ನೋಡುಗರ ಗಮನ ಸೆಳೆದವು.
ಮತ್ತೊಂದೆಡೆ ಗದಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬೆಳೆದಿರುವ ತಾಳೆ, ಸೇವಂತಿಗೆ, ಚೆಂಡು ಹೂವು, ಲಿಂಬೆ, ಹೂಕೋಸು, ಟೊಮ್ಯಾಟೊ, ಹುಣಸೆ, ಪಪ್ಪಾಯಿ, ಕಪ್ಪು ದ್ರಾಕ್ಷಿ, ದ್ರಾಕ್ಷಿ, ಪೇರಲ, ಚಿಕ್ಕು, ಮಾವು, ನುಗ್ಗೆಕಾಯಿ, ಹೀರೇಕಾಯಿ, ಬಾಳೆ, ಯಾಲಕ್ಕಿ ಬಾಳೆ, ಈರುಳ್ಳಿ, ಚಕ್ಕೋತಾ, ಗೋಡಂಬಿ, ವಿಳ್ಯೆದೆಲೆ ಸೇರಿ ವಿವಿಧ ತರಕಾರಿ, ಹಣ್ಣುಗಳು, ಹೂವುಗಳು ಸಾರ್ವಜನಿಕರನ್ನು ಆಕರ್ಷಿಸಿದವು. ಅದರಲ್ಲೂ ನೋಡಲು ಹಾಗೂ ತಿಣ್ಣಲು ಅಪರೂಪವಾದ ರಾಮ ಫಲ, ಸೀತಾ ಫಲ, ಸ್ಟಾರ್ ಫ್ರುಟ್ಸ್ ಗಮನ ಸೆಳೆದವು.
ಫಲ-ಪುಷ್ಪ ಪ್ರದರ್ಶನದಲ್ಲಿ ಮೀನುಗಾರಿಕೆ ಇಲಾಖೆಯು ಕೂಡ ವಿವಿಧ ಬಗೆಯ ಮೀನುಗಳನ್ನು ಸಾರ್ವಜನಿಕರಿಗೆ ಪರಿಚಯಿಸಿದವು. ಆಸ್ಕರ್ ಫಿಶ್, ಟೈಗರ್ ಬರ್ಬ್, ಕಲರ್ ವಿಡೋವ್ ಟೆಟ್ರಾ, ಬ್ಲಾಕ್ ಮೋರ್ ಫಿಶ್, ಗಪ್ಪಿ ಫಿಶ್, ಬ್ಲಾಕ್ ಘೋಸ್ಟ್ ಫಿಶ್, ಗೋಲ್ಡ್ ಫಿಶ್, ಟೈಗರ್ ಶಾರ್ಕ್, ಅಂಜೆಲ್, ಫ್ಲಾವರ್ ಹಾರ್ನ್ ಫಿಶ್ ಗಳನ್ನು ನೋಡಿ ಕಣ್ತುಂಬಿಕೊಂಡರು.
ಪ್ರದರ್ಶನದಲ್ಲಿ ರಂಗೋಲಿಯಲ್ಲಿ ಗಾನಯೋಗಿ ಪುಟ್ಟರಾಜ ಗವಾಯಿಗಳು, ತೋಂಟದ ಸಿದ್ದಲಿಂಗ ಶ್ರೀಗಳು ಹಾಗೂ ಜ್ಞಾನಯೋಗಿ ಸಿದ್ದೇಶ್ವರ ಶ್ರೀ ಗಳ ಚಿತ್ತಾರಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದವು. ವಿಶ್ವನಾಥ ಎಸ್. ಯಲಬುರ್ಗಿಯವರು ಸಂಗ್ರಹಿಸಿ ಪೋಷಣೆ ಮಾಡಿ ಬೆಳೆಸಿದ ಬೊನ್ಸಾಯಿ ಮರಗಳ ಪ್ರದರ್ಶನ, ಪ್ರಸನ್ನ ಮೇವುಂಡಿ ಅವರ ವಿಶೇಷ ಅಲಂಕಾರಿಕ ಗಿಡಗಳು ಸಹ ಪ್ರದರ್ಶನಗೊಂಡವು.
ಸಹಕಾರಿ ಧುರೀಣ ಕೆ.ಎಚ್.ಪಾಟೀಲ: ಫಲ-ಪುಷ್ಪ ಪ್ರದರ್ಶನದಲ್ಲಿ ವಿವಿಧ ಹಣ್ಣುಗಳಿಂದ ಮಹನೀಯರ ಕಲಾಕೃತಿಗಳನ್ನು ರಚಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಸಹಕಾರಿ ಧುರೀಣ, ರಾಜಕೀಯ ಮುತ್ಸದ್ಧಿ ದಿ. ಕೆ.ಎಚ್.ಪಾಟೀಲ ಅವರ ಕಲಾಕೃತಿಯನ್ನು ಕಲ್ಲಂಗಡಿ ಹಣ್ಣಿನಲ್ಲಿ ರಚಿಸಿದ್ದು ಜನಸಾಮಾನ್ಯರ ಆಕರ್ಷಣೆಗೆ ಭಾಜನವಾಯಿತು.
ಇದರೊಟ್ಟಿಗೆ ಕರ್ನಾಟಕ ನಕ್ಷೆ, ಪುನೀತ್ ರಾಜಕುಮಾರ, ಪಂ. ಜವಹರಲಾಲ್ ನೆಹರೂ, ಸಿದ್ಧನಗೌಡ ಪಾಟೀಲ, ಅಂದಾನೆಪ್ಪ ದೊಡ್ಡಮೇಟಿ, ಹುಯಿಲಗೋಳ ನಾರಾಯಣರಾಯರು, ರವೀಂದ್ರನಾಥ ಟ್ಯಾಗೋರ ಅವರ ಕಲಾತ್ಮಕ ಚಿತ್ತಾರ ಆಕರ್ಷಣೀಯ ಎನಿಸಿದವು.