“ಗ್ಯಾರಂಟಿ ಯೋಜನೆಗಳ ನಡುವೆಯೂ ರಾಜ್ಯ ಅಭಿವೃದ್ಧಿಯತ್ತ ಸಾಗುತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿವೃದ್ಧಿ ಆಡಳಿತಕ್ಕೆ ಹಿಡಿದ ಕೈಗನ್ನಡಿ” ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಗದಗ ಜಿಲ್ಲೆಯ ರೋಣ ತಾಲೂಕಿನ ಹಿರೇಮಣ್ಣೂರ ಗ್ರಾಮದಲ್ಲಿ ಶುಕ್ರವಾರ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಹಮ್ಮಿಕೊಂಡಿದ್ದ 25 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
“ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಶೇ. 99ರಷ್ಟು ಪ್ರಗತಿ ಕಂಡಿವೆ ಎಂದರು. ಹಿರೇಮಣ್ಣೂರ ಗ್ರಾಮದ ಮಹಿಳೆಯರಿಗಾಗಿ ಶೌಚಗೃಹ ನಿರ್ಮಿಸಿಕೊಡಲಾಗುವುದು. ಅದಕ್ಕೆ ಬೇಕಾದ ಜಾಗವನ್ನು ಗ್ರಾಮದ ಯಾರಾದರೊಬ್ಬರು ನೀಡಿದರೆ ನಾಳೆಯೇ ಅನುದಾನ ನೀಡಿ ಕೆಲಸ ಆರಂಭಿಸಲು ಬದ್ಧ” ಎಂದು ಭರವಸೆ ನೀಡಿದರು.
“ಜೆಜೆಎಂ ಕಾಮಗಾರಿಗಾಗಿ ಎಲ್ಲ ಗ್ರಾಮಗಳಲ್ಲಿನ ಸಿಸಿ ರಸ್ತೆ ಒಡೆದು ಪೈಪ್‌ಲೈನ್ ಮಾಡಿದ್ದಾರೆ. ಇದರಿಂದ ಈಗ ರಸ್ತೆಗಳು ಹಾಳಾಗಿವೆ. ಮತ್ತೆ ರಸ್ತೆಗಳನ್ನು ಮಾಡಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಆದರೆ, ಜೆಜೆಎಂ ಯೋಜನೆ ಉಪಯೋಗಕ್ಕೆ ಬಾರದಂತಾಗಿದೆ” ಎಂದು ದೂರಿದರು.
“ಬಾಚಲಾಪುರದಿಂದ ಕುರಹಟ್ಟಿವರೆಗೆ ಒಟ್ಟು 19 ಕಿ.ಮೀ. ರಸ್ತೆ ನಿರ್ವಣಕ್ಕೆ ಶೀಘ್ರ ಚಾಲನೆ ನೀಡಲಾಗುವುದು. ಇದರಿಂದ ನೇರವಾಗಿ ಹೊಳೆಆಲೂರು ತಲುಪಲು ಈ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗುತ್ತದೆ” ಎಂದರು.
ತಾಪಂ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿದರು. ಹಿರೇಮಣ್ಣೂರ ಗ್ರಾಮಸ್ಥರಿಂದ ಶಾಸಕ ಜಿ.ಎಸ್. ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಯೂಸೂಪ್ ಇಟಗಿ, ಬಸವರಾಜ ನವಲಗುಂದ, ರಾಮಣ್ಣ ಕುರಿ, ಶಿವಪ್ಪ ಪಟ್ಟೇದವರ, ಕೂಡ್ಲೆಪ್ಪ ಪ್ಯಾಟಿಗೌಡರ, ಶರಣಪ್ಪ ಕುರಿ, ಮಲ್ಲಿಕಾರ್ಜುನ ಗಾರಗಿ, ಮತ್ತಿತರರು ಇದ್ದರು