ಸಮಾಜದಲ್ಲಿ ಅಸಮಾನತೆ, ಜಾತೀಯತೆ ತುಂಬಿಕೊಂಡು ಮನುಷ್ಯರನ್ನು ಮನುಷ್ಯರಂತೆ ಕಾಣುತ್ತಿಲ್ಲ. ಸಂವಿಧಾನವನ್ನು ರಕ್ಷಿಸಿ, ಅದರ ಆಶಯಗಳಂತೆ ಬದುಕಬೇಕು. ಹಾಗೆ ಸಮಾಜದ ಬದಲಾವಣೆಯೂ ಆಗಬೇಕು ಎಂದು ಹೋರಾಟಗಾರ ಕೇಶವ ಕಟ್ಟಿಮನಿ ಹೇಳಿದರು.
ಗದಗ ಪಟ್ಟಣದಲ್ಲಿ ರಾಷ್ಟ್ರೀಯ ಜಾತ್ಯತೀತ ಸಂಘ ಕಾಲೇಜೊಂದರಲ್ಲಿ ʼಜಾತ್ಯತೀತ ಸಮಾಜದ ಬದಲಾವಣೆʼ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
“ನಮ್ಮ ಸುತ್ತಮುತ್ತಲಿರುವ ಮನುಷ್ಯರನ್ನು ಮಾನವೀಯ ನೆಲೆಯಲ್ಲಿ ನೋಡಬೇಕು. ನಮ್ಮೊಡನೆ ಇರುವ ಪ್ರಾಣಿಗಳೂ ಕೂಡ ಮಾನವೀಯ ಗುಣಗಳನ್ನು ಒಳಗೊಂಡಿರುತ್ತವೆ. ಆದರೆ ಮನುಷ್ಯರು ಮಾನವೀಯತೆ ಕಳೆದುಕೊಂಡು ಅನಾಗರಿಕರಂತೆ ವರ್ತಿಸುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಎನ್‌ಎಸ್‌ಎಸ್ ಮುಖಂಡ ಶ್ರೇಯಶ್ ಮೂಲಿಮನಿ ಮಾತನಾಡಿ, “ಜಾತಿ, ಧರ್ಮಗಳ ಬಂಧನ ತೊರೆದು ಭೇದವಿಲ್ಲದೆ ನಾವೆಲ್ಲರೂ ಮನುಷ್ಯರಾಗಬೇಕು. ದೇಶವೆಂದರೆ ಮಣ್ಣಲ್ಲ, ಗಡಿಯಲ್ಲ, ಭೂಮಿಯಲ್ಲ, ದೇವರಲ್ಲ, ದೇವತೆಯೂ ಅಲ್ಲ, ಗುಡಿಯಲ್ಲ, ಚರ್ಚಲ್ಲ, ಮಸೀದಿಯಲ್ಲ. ದೇಶವೆಂದರೆ ಇಲ್ಲಿ ವಾಸಿಸುವ ಜನ. ಜಾತಿ, ಧರ್ಮಗಳ ಬಂಧನ ಕಳಚಿ ಜಾತ್ಯತೀತದೆಡೆಗೆ ಹೆಜ್ಜೆ ಹಾಕೋಣ, ನಾವೆಲ್ಲರೂ ಕೂಡಿ ಸಂವಿಧಾನ ರಕ್ಷಣೆಯ ಜವಾಬ್ದಾರಿ ಹೊರೋಣ” ಎಂದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಬ್ಲೇಡ್ ಕಂಪೆನಿಗಳ ಮೋಸದ ಜಾಲಕ್ಕೆ ಬಲಿಯಾಗದಂತೆ ಡಿವೈಎಫ್‌ಐ ಸಲಹೆ
“ಸಮತೆ, ಸಮಾನತೆ, ಸಮಸಮಾಜ, ಭ್ರಾತೃತ್ವ ದೇಶ ಕಟ್ಟಲು ನಮ್ಮ ಮುಂದಿನ ಪೀಳಿಗೆ ಧರ್ಮದ್ವೇಷದ ದಳ್ಳುರಿಗೆ ಬಲಿಯಾಗದಂತೆ ತಡೆಯುವುದು ರಾಷ್ಟ್ರೀಯ ಜಾತ್ಯತೀತ ಸಂಘದ ಧ್ಯೇಯ” ಎಂದು ಶ್ರೇಯಶ್ ಮೂಲಿಮನಿ ಹೇಳಿದರು.
ಸಭೆಯಲ್ಲಿ ಎಂ ಡಿ ಮಾದರ, ಆರ್ ಬಿ ಹುಚ್ಚನ್ನವರ, ಡಿ ಎಂ ಡಂಕದ, ವಿ ಟಿ ಮೂಲಿಮನಿ, ಶಿವರಾಜ್ ಕೋಟಿ ಮತ್ತಿತರರು ಇದ್ದರು.