ಮನರೇಗಾ ಯೋಜನೆಯು ಬೇಸಿಗೆ ದಿನಗಳಲ್ಲಿ ದುಡಿಯುವ ಕೈಗಳಿಗೆ ಶಕ್ತಿ ತುಂಬಲು ನೆರವಾಗುತ್ತದೆ. ಹೀಗಾಗಿ ನಿಮ್ಮ ತಂಡದ ಸಂಪೂರ್ಣ ಜವಾಬ್ದಾರಿ ನೀವು ತೆಗೆದುಕೊಂಡು ಅವರ ಕೆಲಸ ತೆಗೆದುಕೊಳ್ಳವುದು ಹಾಗೂ ಅವರಿಗೆ ಸಂಪೂರ್ಣ ವೇತನ ಪಾವತಿಯಾಗುವವರೆಗೂ ಜವಾಬ್ದಾರಿ ಆಗಿರುತ್ತೀರಿ ಎಂದು ಕಾಯಕ ಬಂಧುಗಳಿಗೆ ಕುರುಡಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿಲ್ಪಾ ಕವಲೂರ ಹೇಳಿದರು.
ಗದಗ ಜಿಲ್ಲೆ ರೋಣ ತಾಲೂಕಿನ ಕುರುಡಗಿ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಹಮ್ಮಿಕೊಂಡಿದ್ದ ʼವಲಸೆ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಖಾತ್ರಿʼ ಅಭಿಯಾನ ಹಾಗೂ ಕಾಯಕ ಬಂಧುಗಳ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಬೇಸಿಗೆ ದಿನಗಳಲ್ಲಿ ನಮ್ಮ ಭಾಗದಲ್ಲಿ ಕೆಲಸ ಕಡಿಮೆ ಇರುತ್ತದೆ. ಆ ಸಂದರ್ಭದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಕೂಲಿ ನೀಡಲಾಗುತ್ತದೆ. ಏಪ್ರಿಲ್ 1 ರಿಂದ ಕುರುಡಗಿ ಗ್ರಾಮ ಪಂಚಾಯಿತಿಯಲ್ಲಿ ಸಾಮೂಹಿಕ ಕಾಮಗಾರಿ ಪ್ರಾರಂಭ ಮಾಡಲಾಗುತ್ತದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಖಾತ್ರಿಯ ಸಮುದಾಯ ಕೆಲಸಗಳಲ್ಲಿ ಪಾಲ್ಗೊಳ್ಳಬೇಕು” ಎಂದು ತಿಳಿಸಿದರು.
ಎನ್ಎಂಎಂಎಸ್ ಆ್ಯಪ್ ಬಗ್ಗೆ ಮಾಹಿತಿ ನೀಡಿ ಕಾಯಕ ಬಂಧುಗಳು ಎನ್ಎಂಎಂಎಸ್ ಆ್ಯಪ್‌ನ ಮೂಲಕ ಹಾಜರಾತಿ ಹಾಕಿ, ಕೆಲಸದಲ್ಲಿ ಯಾವುದೇ ರೀತಿಯ ವಿಳಂಬವಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
“ತಮ್ಮ ಕೂಲಿಕಾರರ ಆಧಾರ ಸಂಖ್ಯೆಗೆ ಬ್ಯಾಂಕ್ ಖಾತೆ ಸಂಖ್ಯೆ ಲಿಂಕ್ ಹಾಗೂ ಉದ್ಯೋಗ ಚೀಟಿ(ಎನ್‌ಸಿಪಿಐ) ಲಿಂಕ್ ಕಡ್ಡಾಯವಾಗಿ ಮಾಡಿಸಬೇಕು. ಕೆಲಸದ ಸ್ಥಳಗಳಲ್ಲಿ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ, ನೆರಳು, ಕುಡಿಯುವ ನೀರಿನ ವ್ಯವಸ್ಥೆಯನ್ನು ಗ್ರಾಮ ಪಂಚಾಯತಿಯಿಂದ ಮಾಡಲಾಗುತ್ತದೆ” ಎಂದರು.
“ಕೆಲಸದ ಸ್ಥಳಕ್ಕೆ ಮಕ್ಕಳನ್ನು ಕರೆತರಬಾರದು. ಅದಕ್ಕಾಗಿ ಆರು ತಿಂಗಳಿಂದ ಮೂರು ವರ್ಷದ ಮಕ್ಕಳಿಗೆ ನಮ್ಮ ಗ್ರಾಮ ಪಂಚಾಯತಿಯಿಂದ ಕೂಸಿನ ಮನೆ ಆರಂಭ ಮಾಡಿದ್ದು, ತಾವುಗಳು ತಮ್ಮ ಮಕ್ಕಳನ್ನು ಅಲ್ಲಿಯೇ ಬಿಟ್ಟು ಕೆಲಸಕ್ಕೆ ಹೋಗಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ ಲೋಕಸಭಾ ಕ್ಷೇತ್ರ | ಗಣಿ ನಾಡಿನಲ್ಲಿ ಯಾರ ಕೊರಳಿಗೆ ಈ ಬಾರಿ ವಿಜಯದ ಹಾರ?
ಐಇಸಿ ಸಂಯೋಜಕ ಮಂಜುನಾಥ ಮಾತನಾಡಿ, “ಕೆಲಸದ ಸ್ಥಳದಲ್ಲಿ ಕೂಲಿಕಾರರ ಹಾಜರಾತಿಯನ್ನು ಎರಡು ಹಂತದಲ್ಲಿ ಎನ್‌ಎಂಎಂಎಸ್ ಆ್ಯಪ್‌ನಲ್ಲಿ ಸೆರೆ ಹಿಡಿಯಬೇಕು. ಕೂಲಿಕಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಂತ್ರಿಕ ಸಹಾಯಕ ಗುರುಲಿಂಗಯ್ಯ ಹಿರೇಮಠ, ಬಿಎಫ್‌ಟಿ, ಪ್ರಕಾಶ ಅಂಬಕ್ಕಿ, ಜಿಕೆಎಂ ಯಶೋಧಾ ಅಮರಗೋಳ ಹಾಗೂ ಕಾಯಕ ಬಂಧುಗಳು, ಸ್ವಸಹಾಯ ಸಂಘದ ಸದಸ್ಯರು, ಮತ್ತು ಪಂಚಾಯಿತಿ ಸಿಬ್ಬಂದಿಗಳು ಇದ್ದರು.
