ಬಳ್ಳಾರಿ ಲೋಕಸಭಾ ಕ್ಷೇತ್ರ | ಗಣಿ ನಾಡಿನಲ್ಲಿ ಯಾರ ಕೊರಳಿಗೆ ಈ ಬಾರಿ ವಿಜಯದ ಹಾರ?

Date:

1999ರಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಿಜೆಪಿಯ ಸುಷ್ಮಾ ಸ್ವರಾಜ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದನ್ನು ಮರೆಯುವಂತಿಲ್ಲ. ಈ ಇಬ್ಬರ ಸ್ಪರ್ಧೆಯಿಂದಾಗಿ 1999ರ ಲೋಕಸಭಾ ಚುನಾವಣೆಯ ವೇಳೆ ಬಳ್ಳಾರಿ ಲೋಕಸಭಾ ಕ್ಷೇತ್ರವು ದೇಶಾದ್ಯಂತ ಸುದ್ದಿಯಾಗಿತ್ತು. ‘ಭಾರತದ ಮಗಳು V/s ಫಾರಿನ್‌ ಸೊಸೆ’ ನಡುವಿನ ಸ್ಪರ್ಧೆ ಎಂದೇ ಬಿಂಬಿತವಾಗಿತ್ತು.

 

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಳ್ಳಾರಿ ಲೋಕಸಭಾ ಕ್ಷೇತ್ರ ಬಹಳ ವಿಶಿಷ್ಟ ಕಾರಣಕ್ಕಾಗಿ ಗುರುತಿಸಿಕೊಂಡಿದೆ. ಸದ್ಯ ಬಳ್ಳಾರಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಕಂಪ್ಲಿ, ಬಳ್ಳಾರಿ, ಸಂಡೂರು, ಕೂಡ್ಲಿಗಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ನಗರ ಸೇರಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿವೆ.

ಇವುಗಳಲ್ಲಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಾಗಿ ಕಂಪ್ಲಿ, ಬಳ್ಳಾರಿ, ಸಂಡೂರು ಹಾಗೂ ಕೂಡ್ಲಿಗಿ ಕ್ಷೇತ್ರಗಳಿವೆ. ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾಗಿ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ಕ್ಷೇತ್ರಗಳಿದ್ದರೆ, ಸಾಮಾನ್ಯ ಮೀಸಲು ಕ್ಷೇತ್ರವಾಗಿ ವಿಜಯನಗರ ಹಾಗೂ ಬಳ್ಳಾರಿ ನಗರ ಕ್ಷೇತ್ರವಿದೆ. ವಿಶೇಷ ಏನೆಂದರೆ 31ನೇ ಜಿಲ್ಲೆಯಾಗಿರುವ ವಿಜಯನಗರ ಜಿಲ್ಲೆ ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ ಇದೆ.

2020ರಲ್ಲಿ ಬಳ್ಳಾರಿ ಜಿಲ್ಲೆಯಿಂದ ಆರು ತಾಲೂಕುಗಳನ್ನು ಬೇರ್ಪಡಿಸಿ, ವಿಜಯನಗರ ಜಿಲ್ಲೆ ಎಂಬ ಹೆಸರಿನಲ್ಲಿ ಒಂದುಗೂಡಿಸಲಾಯಿತು. ಕರ್ನಾಟಕದ ಆಗಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು 18ನೇ ನವೆಂಬರ್ 2020ರಂದು ವಿಜಯನಗರ ಜಿಲ್ಲೆಯ ರಚನೆಗೆ ಅನುಮೋದನೆ ನೀಡಿ ಅಧಿಸೂಚನೆ ಹೊರಡಿಸಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವಿಜಯನಗರ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರ ಹಾಗೂ ಬಳ್ಳಾರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ‘ಬಳ್ಳಾರಿ ಲೋಕಸಭಾ ಕ್ಷೇತ್ರ’ದ ವ್ಯಾಪ್ತಿಯಲ್ಲಿದೆ.

ಅಂದಾಜು ಮತದಾರರ ವಿವರ:

ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಂದಾಜು ಒಟ್ಟು 18,65,341 ಮತದಾರರು ಇದ್ದಾರೆ. ಇವರಲ್ಲಿ 9,20,022 ಪುರುಷ ಮತದಾರರು, 9,45,053 ಮಹಿಳೆ ಮತದಾರರು ಹಾಗೂ 266 ಇತರೆ ಅಲ್ಪಸಂಖ್ಯಾತ ಲಿಂಗತ್ವ ಮತದಾರರು ಕೂಡ ಇದ್ದಾರೆ.

ಇನ್ನು ವಿಧಾನಸಭಾ ಕ್ಷೇತ್ರವಾರು ಗಮನಿಸಿದರೆ, ಹೂವಿನ ಹಡಗಲಿಯಲ್ಲಿ 98,232 ಪುರುಷ ಮತದಾರರು, 96,714 ಮಹಿಳೆ ಮತದಾರರು, 13 ಇತರೆ ಸೇರಿ ಅಂದಾಜು ಒಟ್ಟು 1,94,959 ಮತದಾರರಿದ್ದಾರೆ. ಹಗರಿಬೊಮ್ಮನಹಳ್ಳಿಯಲ್ಲಿ 1,16,933 ಪುರುಷ ಮತದಾರರು, 1,18,592 ಮಹಿಳೆ ಮತದಾರರು, 22 ಇತರೆ, ಒಟ್ಟು 2,35,547 ಮಂದಿ ಮತದಾರರಿದ್ದಾರೆ. ವಿಜಯನಗರದಲ್ಲಿ 1,24,655 ಪುರುಷ, 1,32,416 ಮಹಿಳೆ, 77 ಇತರೆ, ಒಟ್ಟು 2,57,148 ಮತದಾರರಿದ್ದಾರೆ. ಕಂಪ್ಲಿಯಲ್ಲಿ 1,09,490 ಪುರುಷ, 1,12,295 ಮಹಿಳೆ, 35 ಇತರೆ, ಒಟ್ಟು 2,21,820 ಮತದಾರರಿದ್ದಾರೆ.

ಬಳ್ಳಾರಿ ವಿಧಾನಸಭಾ ಕ್ಷೇತ್ರದಲ್ಲಿ 1,20,046 ಪುರುಷ, 1,27,417 ಮಹಿಳೆ, 50 ಇತರೆ, ಒಟ್ಟು 2,47,513 ಮತದಾರರಿದ್ದರೆ, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 1,30,315 ಪುರುಷ, 1,39,045 ಮಹಿಳೆ, 33 ಇತರೆ, ಒಟ್ಟು 2,69,393 ಮತದಾರರಿದ್ದಾರೆ.

ಸಂಡೂರು ಕ್ಷೇತ್ರದಲ್ಲಿ 1,14,928 ಪುರುಷ, 1,15,309 ಮಹಿಳೆ, 25 ಇತರೆ, ಒಟ್ಟು 2,30,262 ಮತದಾರರು. ಕೂಡ್ಲಿಗಿಯಲ್ಲಿ 1,05,423 ಪುರುಷ, 1,03,265 ಮಹಿಳೆ, 11 ಇತರೆ, ಒಟ್ಟು 2,08,699 ಮತದಾರರಿದ್ದಾರೆ.

ಬಳ್ಳಾರಿ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರದಲ್ಲಿ 53,169 ಯುವ ಮತದಾರರು, 24,841 ವಿಶೇಷಚೇತನ ಮತದಾರರು ಮತ್ತು 13,285 ಜನ 85 ವರ್ಷ ಮೇಲ್ಪಟ್ಟ ವಯಸ್ಕ ಮತದಾರರರಿದ್ದಾರೆ.

ರಾಜಕೀಯ ಇತಿಹಾಸ ಏನು?

ಬಿರು ಬಿಸಿಲಿನ ಕ್ಷೇತ್ರವಾಗಿರುವ ಬಳ್ಳಾರಿ ಕರ್ನಾಟಕದ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲೊಂದಾಗಿ ಗುರುತಿಸಿಕೊಂಡಿದೆ. ಐತಿಹಾಸಿಕವಾಗಿ ಬಳ್ಳಾರಿಯು ಶಾತವಾಹನ, ಕಲ್ಯಾಣ ಚಾಲುಕ್ಯರು, ಕದಂಬರು, ಸೇವುಣರು ಮತ್ತು ಹೊಯ್ಸಳರ ನಿಯಂತ್ರಣದಲ್ಲಿತ್ತು. ವಿಜಯನಗರ ಸಾಮ್ರಾಜ್ಯ ಬಳ್ಳಾರಿ ಜಿಲ್ಲೆಯಲ್ಲೇ ರಾಜಧಾನಿಯನ್ನು ಹೊಂದಿದ್ದರಿಂದ, ಆ ಸಮಯದಲ್ಲಿ ಈ ಜಿಲ್ಲೆ ಪ್ರಾಮುಖ್ಯತೆಗೆ ಬಂದಿತ್ತು. ಬ್ರಿಟೀಷರ ಕಾಲದಲ್ಲಿ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಬಳ್ಳಾರಿ ಜಿಲ್ಲೆ 1953ರಲ್ಲಿ ಮೈಸೂರು ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತ್ತು.

ಸ್ವಾತಂತ್ರ್ಯ ನಂತರ 1952ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಟೇಕೂರು ಸುಬ್ರಮಣ್ಯಂ ಅವರು ಮೊದಲ ಬಾರಿಗೆ ಗೆಲುವು ಸಾಧಿಸಿದ್ದರು. ಮೈಸೂರು ರಾಜ್ಯದಲ್ಲಿ 1957, 1962ರಲ್ಲೂ ಸುಬ್ರಮಣ್ಯಂ ಅವರಿಗೆ ಜಯ ಲಭಿಸಿತ್ತು. ಕರ್ನಾಟಕ ರಾಜ್ಯವಾದ ಬಳಿಕ 1977ರಲ್ಲಿ ಕಾಂಗ್ರೆಸ್ಸಿನ ಕೆ.ಎಸ್. ವೀರಭದ್ರಪ್ಪ ಅವರು ಜಯ ಸಾಧಿಸಿದ್ದರು.

1999ರಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಿಜೆಪಿಯ ಸುಷ್ಮಾ ಸ್ವರಾಜ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದನ್ನು ಮರೆಯುವಂತಿಲ್ಲ. ಈ ಇಬ್ಬರ ಸ್ಪರ್ಧೆಯಿಂದಾಗಿ 1999ರ ಲೋಕಸಭಾ ಚುನಾವಣೆಯ ವೇಳೆ ಬಳ್ಳಾರಿ ಲೋಕಸಭಾ ಕ್ಷೇತ್ರವು ದೇಶಾದ್ಯಂತ ಸುದ್ದಿಯಾಗಿತ್ತು. ‘ಭಾರತದ ಮಗಳು V/s ಫಾರಿನ್‌ನ ಸೊಸೆ’ ನಡುವಿನ ಸ್ಪರ್ಧೆ ಎಂದೇ ಬಿಂಬಿತವಾಗಿತ್ತು.

ಹೇಗಾದರೂ ಮಾಡಿ ಸೋನಿಯಾ ಗಾಂಧಿಯವರನ್ನು ಸೋಲಿಸಲೇಬೇಕೆಂಬ ಹಠದಲ್ಲಿದ್ದ ಬಿಜೆಪಿಯ ಸುಷ್ಮಾ ಸ್ವರಾಜ್, ಕೆಲವೇ ದಿನಗಳಲ್ಲಿ ಕನ್ನಡವನ್ನೂ ಕೂಡ ಕಲಿತು, ಕನ್ನಡದಲ್ಲೇ ಚುನಾವಣಾ ಭಾಷಣ ಮಾಡುವ ಮೂಲಕ ಸುದ್ದಿಯಾಗಿದ್ದರು. ಆದರೂ ಸುಮಾರು 50 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು. ತಾನು ಸೋತರೂ ಕೂಡ, ನಾನು ಬಳ್ಳಾರಿಯ ಮನೆ ಮಗಳೆಂದು ಹೇಳಿಕೊಂಡಿದ್ದ ಸುಷ್ಮಾ ಸ್ವರಾಜ್, ಪ್ರತಿ ವರ್ಷದ ವರಮಹಾಲಕ್ಷ್ಮೀ ಪೂಜೆಗೆ ಬರುವುದಾಗಿ ಘೋಷಿಸಿ, ಅದರಂತೆಯೇ ನಡೆದುಕೊಂಡಿದ್ದರು. 2019ರಲ್ಲಿ ಸುಷ್ಮಾ ಸ್ವರಾಜ್ ನಿಧನರಾಗಿದ್ದಾರೆ.

ಕ್ಷೇತ್ರದಲ್ಲಿ ಮೊದಲ ಬಾರಿಗೆ 2000ದಲ್ಲಿ ಉಪ ಚುನಾವಣೆ ಎದುರಾಗಿತ್ತು. 1999ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಬಳ್ಳಾರಿ ಮತ್ತು ಉತ್ತರ ಪ್ರದೇಶದ ಅಮೇಥಿಯಿಂದ ಸ್ಪರ್ಧಿಸಿ ಎರಡೂ ಕಡೆ ಗೆದ್ದಿದ್ದರು. ನಂತರ ಸೋನಿಯಾ ಬಳ್ಳಾರಿ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪ ಚುನಾವಣೆ ಎದುರಾಗಿತ್ತು. ಆಗ ಕಾಂಗ್ರೆಸ್‌ನ ಕೋಳೂರು ಬಸವನಗೌಡ ಗೆದ್ದಿದ್ದರು.

2004ರವರೆಗೆ ಬಳ್ಳಾರಿ ಜಿಲ್ಲೆ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಆದರೆ 2004ರ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್ ಅವರ ಮಾನಸ ಪುತ್ರರಾದ ರೆಡ್ಡಿ ಸಹೋದರರು ಜಿಲ್ಲೆಯಲ್ಲಿ ಪ್ರಬಲರಾಗಿದ್ದರಿಂದ, ಬಿಜೆಪಿಗೆ 2004ರಲ್ಲಿ ಮೊಟ್ಟ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಜಿ ಕರುಣಾಕರ ರೆಡ್ಡಿ ಅವರಿಗೆ ಜಯ ಲಭಿಸಿತ್ತು. ಆ ಮೂಲಕ ಬಳ್ಳಾರಿಯು ಬಿಜೆಪಿ ತೆಕ್ಕೆಗೆ ಜಾರಿತ್ತು.

2004ರಲ್ಲಿ ಸಂಸದರಾಗಿದ್ದ ಜಿ.ಕರುಣಾಕರ ರೆಡ್ಡಿ ಕೂಡ ಅವಧಿಗೆ ಮುಂಚೆಯೇ ರಾಜೀನಾಮೆ ಸಲ್ಲಿಸಿ 2008ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಹರಪನಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆಗ ಉಪಚುನಾವಣೆ ನಡೆದಿರಲಿಲ್ಲ. ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿಯೇ ಶ್ರೀರಾಮುಲು ಸಂಸದರ ಸ್ಥಾನಕ್ಕೆ ಮಾರ್ಚ್‌ನಲ್ಲಿ ರಾಜೀನಾಮೆ ನೀಡಿದ್ದರಿಂದ ಕ್ಷೇತ್ರದಲ್ಲಿ ಎರಡನೇ ಉಪಚುನಾವಣೆ ನಡೆಯಿತು.

ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ, ಸಹೋದರರಾದ ಸೋಮಶೇಖರ್ ರೆಡ್ಡಿ ಮತ್ತು ಕರುಣಾಕರ್ ರೆಡ್ಡಿ ಹಾಗೂ ನಿಕಟವರ್ತಿ ಬಿ ಶ್ರೀರಾಮುಲು ಜೊತೆಗೂಡಿ ಪಕ್ಷವನ್ನು ಮತ್ತು ತಮ್ಮ ವರ್ಚಸ್ಸನ್ನೂ ಬಲಪಡಿಸಿಕೊಂಡಿದ್ದರು. ಇದು 2008ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಒಂಭತ್ತು ಸ್ಥಾನಗಳ ಪೈಕಿ ಬಿಜೆಪಿ ಎಂಟು ಸ್ಥಾನಗಳಲ್ಲಿ ಗೆಲ್ಲಲು ಸಹಾಯ ಮಾಡಿತು. ಗಣಿಗಾರಿಕೆಯು ಎಗ್ಗು-ತಗ್ಗಿಲ್ಲದೆ ನಡೆಯಲಾರಂಭಿಸಿತು.

ಬಿಜೆಪಿಗೆ 2004ರಲ್ಲಿ ಮೊಟ್ಟ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಜಿ ಕರುಣಾಕರ ರೆಡ್ಡಿ ಅವರಿಗೆ ಜಯ ಲಭಿಸಿದ ಬಳಿಕ, 2009ರಲ್ಲಿ ಬಿಜೆಪಿಯ ಜೆ ಶಾಂತಾ ಸಂಸದೆಯಾಗಿ ಆಯ್ಕೆಯಾದರು. 2014ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ ಬಿ ಶ್ರೀರಾಮುಲು ಅವರು ಸಂಸದರಾದರು.

ರಾಜ ಮನೆತನದ ಎಂವೈ ಘೋರ್ಪಡೆ, ಸೋನಿಯಾ ಗಾಂಧಿ, ಮಾಜಿ ಸಚಿವೆ ಬಸವರಾಜೇಶ್ವರಿ ಅವರಂಥ ಕಾಂಗ್ರೆಸ್ ಮುಖಂಡರನ್ನು ಆರಿಸಿ ಗಳಿಸಿದ ಈ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂಬ ಮಾತನ್ನು ಗಣಿಧಣಿಗಳ ಕುಟುಂಬ ಅಳಿಸಿ ಹಾಕಿತ್ತು. ಬಳ್ಳಾರಿ ಕೋಟೆ ಮೇಲೆ ಕೇಸರಿ ಬಾವುಟ ಹಾರಾಟ ಕಂಡಿತ್ತು. 2004, 2009 ಮತ್ತು 2014ರ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲಲು ಆಗಿರಲಿಲ್ಲ. ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲುತ್ತಿದ್ದ ಕಾಂಗ್ರೆಸ್ ಕಡಿಮೆ ಮತಗಳ ಅಂತರದಲ್ಲೇ ಸೋತಿತ್ತು.

2018ರಲ್ಲಿ ಪರಿಸ್ಥಿತಿ ಬದಲಾಗಿ, ಕಾಂಗ್ರೆಸ್ ಮತ್ತೊಮ್ಮೆ ತನ್ನ ಹಿಡಿತ ಸಾಧಿಸಿತ್ತು. ತಳವೂರಿದ್ದ ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ವಿಫಲವಾಯಿತು. 2018ರಲ್ಲಿ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿ ಎಸ್ ಉಗ್ರಪ್ಪ ಅವರು ಶೇ 59.99ರಷ್ಟು ಮತ (6,28,365 ಮತಗಳು) ಗಳಿಸಿ ಬಿಜೆಪಿಯ ಜೆ ಶಾಂತಾ ಅವರನ್ನು ಶೇ 36.78 ಮತ ಗಳಿಕೆ(3,85,204) ಸೋಲಿಸಿದ್ದರು.

2019ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ವೈ ದೇವೇಂದ್ರಪ್ಪ, ಕಾಂಗ್ರೆಸ್‌ನ ವಿ ಎಸ್ ಉಗ್ರಪ್ಪ ವಿರುದ್ಧ ಗೆಲುವು ಕಂಡಿದ್ದರು. ಆದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿಯ ಎಲ್ಲ ಐದು ಸ್ಥಾನಗಳನ್ನು ಮತ್ತು ಹೊಸದಾಗಿ ರಚನೆಯಾದ ವಿಜಯನಗರ ಜಿಲ್ಲೆಯಲ್ಲಿ ಎರಡು ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಬಿಜೆಪಿ ಹೂವಿನ ಹಡಗಲಿ ಒಂದು ಸ್ಥಾನಕ್ಕಷ್ಟೇ ಸೀಮಿತವಾಗಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಸ್ಪರ್ಧಿಸಿದ್ದ ಗಾಲಿ ಜನಾರ್ದನ ರೆಡ್ಡಿ ಮಾತ್ರ ಗೆದ್ದಿದ್ದರು. ಬಳ್ಳಾರಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಿದ್ದರಿಂದ ಗಂಗಾವತಿಯಿಂದ ಜನಾರ್ದನ ರೆಡ್ಡಿ ಸ್ಪರ್ಧಿಸಿದ್ದರು.

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಈಗಾಗಲೇ ತಮ್ಮ ಅಭ್ಯರ್ಥಿಯಾಗಿ ಬಿ.ಶ್ರೀರಾಮುಲು ಅವರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್‌ನ ಈ. ತುಕಾರಾಂ ಅವರಿಗೆ ಟಿಕೆಟ್ ದೊರೆಯುವ ಮಾಹಿತಿ ದೊರೆತರೂ ಕೂಡ, ಅದು ಇನ್ನೂ ಅಧಿಕೃತಗೊಂಡಿಲ್ಲ. ಈ ಬಾರಿ ಸಮಬಲದ ಪೈಪೋಟಿಯ ಸ್ಪರ್ಧೆ ಏರ್ಪಡಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಯಾರು ಬಳ್ಳಾರಿಯ ಮುಂದಿನ ಸಂಸದರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಅದಕ್ಕಾಗಿ ಜೂ.4ರವರೆಗೆ ಕಾಯಬೇಕಿದೆ.

ಜಾತಿವಾರು ಲೆಕ್ಕಾಚಾರ

ವಾಲ್ಮೀಕಿ ನಾಯಕ ಜನಾಂಗ, ಕುರುಬರು ಇಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ. ಮಿಕ್ಕಂತೆ ಲಿಂಗಾಯತ, ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರರು ಸಮಾನ ಅವಕಾಶವನ್ನು ಹೊಂದಿದ್ದಾರೆ.

ಕ್ಷೇತ್ರಗಳ ಸಮಸ್ಯೆ: ಬಳ್ಳಾರಿ ಕ್ಷೇತ್ರದ ಬಹುತೇಕ ಕಡೆಗಳಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿದೆ. ಆದರೆ, ಗಣಿ ಮತ್ತು ಕೃಷಿ ಕೂಲಿ ಕಾರ್ಮಿಕರ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಮರಳು ಗಣಿಗಾರಿಕೆ, ಅಕ್ರಮ ಮದ್ಯ ಮಾರಾಟ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ತುಂಗ ಭದ್ರಾ ನದಿ ಹರಿದರೂ ಕ್ಷೇತ್ರದ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ. ವಿಶ್ವಖ್ಯಾತ ಸಿದ್ಧ ಉಡುಪು ಕೇಂದ್ರಕ್ಕೆ ಸಿಗದ ಮನ್ನಣೆ, ಶಾಶ್ವತವಾದ ವಿಮಾನ ನಿಲ್ದಾಣಕ್ಕಾಗಿ ಬೇಡಿಕೆ ಇನ್ನೂ ಈಡೇರಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಂತಾಮಣಿ | ಎರಡು ವರ್ಷಗಳ ಪ್ರೀತಿಗೆ ಪೋಷಕರ ವಿರೋಧ; ಕೃಷಿ ಹೊಂಡಕ್ಕೆ ಹಾರಿ ಪ್ರೇಮಿಗಳು ಆತ್ಮಹತ್ಯೆ

ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯು...

ಈ ದಿನ.ಕಾಮ್ ವರದಿ ಫಲಶೃತಿ | ಕೊನೆಗೂ ಶತಾಯುಷಿ ಅಜ್ಜಿಯ ಖಾತೆಗೆ ಜಮೆಯಾಯ್ತು ವೃದ್ದಾಪ್ಯ ವೇತನ

ಭಾಲ್ಕಿ ತಾಲೂಕಿನ ಕಪಲಾಪುರ ಗ್ರಾಮದ ಲಕ್ಷ್ಮೀಬಾಯಿ ಮಹಾಪುರೆ ಎಂಬ 110 ವರ್ಷದ...

ಕೊಡಗು | ಜನರ ಸಮಸ್ಯೆಗಳನ್ನು ಕಾರ್ಯಾಂಗದ ಮೂಲಕ‌ ಪರಿಹರಿಸುವುದು ಶಾಸಕಾಂಗದ ಕರ್ತವ್ಯ: ಶಾಸಕ ಡಾ ಮಂತರ್ ಗೌಡ

"ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ಕೆಲಸಗಳನ್ನು ಕಾರ್ಯಾಂಗದ ಮೂಲಕ ಪರಿಹರಿಸುವುದು ಶಾಸಕಾಂಗದ ಕರ್ತವ್ಯ" ...