ಯಾವ ದೇಶದಲ್ಲಿ ಮೌಢ್ಯ ಸಂಪ್ರದಾಯಗಳ ಆಚರಣೆ ಇರುತ್ತವೆಯೋ, ಅಂತಹ ದೇಶಗಳ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ. ಜಯದೇವಿ ಗಾಯಕವಾಡ ಹೇಳಿದರು.
ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕ ಹಾಗೂ ಗದಗ ನಗರದ ಡಾ. ಎಂ ಎಂ ಕಲಬುರ್ಗಿ ಸಂಶೋಧನ ಕೇಂದ್ರ ಸಹಯೋಗದೊಂದಿಗೆ ತೋಂಟದಾರ್ಯ ಮಠದಲ್ಲಿ ಹಮ್ಮಿಕೊಂಡಿದ್ದ ದಸಾಪ ಪಯಣ 30ನೇ ವರ್ಷದ ಪ್ರಯುಕ್ತ ಪುಸ್ತಕ ಬಿಡುಗಡೆ ಹಾಗೂ ಕಾವ್ಯಯಾನ-1 ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
“ಮೌಢ್ಯ ಸಂಪ್ರದಾಯಗಳನ್ನು ಕಡೆಗಣಿಸಿ, ವಿಜ್ಞಾನವನ್ನು ಅನುಸರಿಸಿದರೆ ಮಾತ್ರ ದೇಶ ಮುಂದುವರೆಯುತ್ತದೆ. ಯಾವ ದೇಶಗಳಲ್ಲಿ ಮೌಢ್ಯಾಚರಣೆ ಆಚರಿಸಲಾಗುತ್ತಿಯೋ ಆ ದೇಶಗಳು ಮುಂದುವರೆಯಲು ಸಾಧ್ಯವಿಲ್ಲ. ಸಮಾಜ ಎದುರಿಸುತ್ತಿರುವ ತಳಮಳಗಳ ಕುರಿತು ಸಾಹಿತ್ಯ ಹುಟ್ಟಬೇಕು. ಬೇಂದ್ರೆ, ಕುವೆಂಪು ಸೇರಿದಂತೆ ಇನ್ನೂ ಅನೇಕರು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದರು. ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳು ಇಂದಿನ ಯುವಕರ ಮೇಲೆ ಪ್ರಭಾವಿಸಬೇಕಿದೆ. 12ನೇ ಶತಮಾನದಲ್ಲಿ ಸಾಹಿತ್ಯ ಮತ್ತು ಚಳವಳಿ ಒಂದೇಯಾಗಿ ಜಾರಿಯಲ್ಲಿದ್ದವು” ಎಂದರು.
ವಿಮರ್ಶಕ ಡಾ. ಎಚ್ ಬಿ ಕೋಲ್ಕಾರ ಮಾತನಾಡಿ, “ಪ್ರಗತಿಶೀಲ ಸಂದರ್ಭದಲ್ಲಿ ವಾಸ್ತವವನ್ನು ತಲೆಬರಹಗಳಲ್ಲಿ ಕಟ್ಟಿರುವುದನ್ನು ನೋಡಿದ್ದೇವೆ. ಹಾಗೆ ಕವಿಯ “ಇರುಳ ಬಾಗಿಲಿಗೆ ಕಣ್ಣದೀಪ” ಕವನ ಸಂಕಲನ ಇದೆ. ಇಲ್ಲಿ ಬದುಕಿನ ಶೈಲಿಗೆ, ತೀವ್ರತೆ ಕೊಡುವಲ್ಲಿ ಕವಿ ಅರಿವಿನಿಂದ ಪದಗಳಲ್ಲಿ ಕಟ್ಟುತ್ತಾನೆ. ಆದ್ಯಾತ್ಮಿಕ ಬದುಕನ್ನು ಲೌಕಿಕವಾಗಿ ಕವಿತೆಗಳಲ್ಲಿ ಕವಿ ಹೇಳುತ್ತಾನೆ. “ಎದೆಯಾಗಿನ ಮಾತು” ಕೃತಿಯು ಪ್ರೀತಿ ಪ್ರೇಮ, ವಿರಹಗಳೇ ಶಾಹಿರಿಗಳಾಗಿವೆ. ಓದುತ್ತಾ ಹೋದಂತೆ ಮನಸ್ಸಿಗೆ ಉಲ್ಲಾಸ ನೀಡುತ್ತವೆ” ಎಂದರು.
ಇದನ್ನು ಓದಿದ್ದೀರಾ? ಗದಗ | ಗೋವಿಂದ ಪೈ ಜಯಂತಿ ಸರ್ಕಾರದಿಂದ ಆಚರಿಸಲು ಮನೋಹರ್ ಮೆರವಾಡೆ ಒತ್ತಾಯ
ದಲಿತ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ ಡಾ. ಅರ್ಜುನ ಗೋಳಸಂಗಿ ಅವರು ಅಧ್ಯಕ್ಷಿಯ ಮಾತುಗಳನ್ನಾಡಿದರು. ಡಾ. ಗವಿಸಿದ್ದಪ್ಪ ಪಾಟೀಲ, ಎಂ ಸಿ ಕಟ್ಟಿಮನಿ, ಕೃತಿಕರರಾದ ಡಾ. ಸದಾಶಿವ ದೊಡಮನಿ ಹಾಗೂ ಮರುಳುಸಿದ್ಧಪ್ಪ ದೊಡಮನಿ ಗೌರವ ಉಪಸ್ಥಿತರಿದ್ದರು.