ಆಯಾ ಜಿಲ್ಲೆಯ ಚರಿತ್ರೆ ಕಟ್ಟುವ ಕೆಲಸ ಆಗಬೇಕು ಎಂದು ಹಿರಿಯ ಸಾಹಿತಿ ಬಸವರಾಜ್ ಸೂಳಿಬಾವಿ ಅಭಿಪ್ರಾಯಿಸಿದರು.
ಗದಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಚಳುವಳಿ 50: ಅವಲೋಕನ ಮತ್ತು ಮುನ್ನೋಟ ಸಮಾವೇಶದ ಪೂರ್ವಭಾವಿಯಾಗಿ ನಡೆಸಲಾದ ಸಭೆಯಲ್ಲಿ ಅವರು ಮಾತನಾಡಿದರು.
“ಸಮಗ್ರವಾಗಿ ಆಯಾ ಜಿಲ್ಲೆಯಲ್ಲಿ ದಲಿತ ಚಳುವಳಿ ಕಟ್ಟಲು ಇಡೀ ಬದುಕನ್ನೇ ಕಳೆದವರ ದಾಖಲಾತಿ ಹಾಗೂ ಆಯಾ ಜಿಲ್ಲೆಯ ದಲಿತ ಚಳುವಳಿ ಚರಿತ್ರೆಯ ಅಧ್ಯಯನ ಜೊತೆಗೆ ದಲಿತ ಸಮುದಾಯಗಳ ಸಮಾಜೋ-ಆರ್ಥಿಕ ಸ್ಥಿತಿಗತಿ ಕಟ್ಟಿ ಕೊಡುವ ಕೆಲಸ ಆಗಬೇಕಿದೆ. ಈ ಚರಿತ್ರೆ ಕರ್ನಾಟಕದ ಆಯಾ ಜಿಲ್ಲೆಗಳ ಜಮೀನ್ದಾರಿ ಪಾಳೇಗಾರಿಕೆ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ದಬ್ಬಾಳಿಕೆಯ ಚರಿತ್ರೆಯಾಗಿ ನಿಲ್ಲಬೇಕಿದೆ. ಹಾಗೊಂದು ಐತಿಹಾಸಿಕವಾಗಿ ಚರಿತ್ರೆ ಕಟ್ಟುವ ಕೆಲಸಗಳಿಗೆ ದಲಿತ ಚಳುವಳಿ 50 ಸಮಾವೇಶ ಪ್ರೇರಕ ಶಕ್ತಿ ಆಗಲಿದೆ” ಎಂದು ಸಾಹಿತಿ ಬಸವರಾಜ್ ಸೂಳಿಬಾವಿ ಹೇಳಿದರು.
“ಇದು ಎಲ್ಲ ದಲಿತ ಸಮುದಾಯಗಳನ್ನು ಒಳಗೊಳಿಸುವಿಕೆಯ ಭಾಗ ಒಂದು ದಲಿತ ಶಕ್ತಿ ಉದಯಿಸಬೇಕು ಎನ್ನುವ ಸದಾಶಯದಲ್ಲಿ ಈ ಸಮಾವೇಶ ನಡೆಯಲಿದೆ. ಡಿ ಎಸ್ ಎಸ್ ಎಲ್ಲ ಘಟಕಗಳನ್ನು ಆಹ್ವಾನಿಸುತ್ತೇವೆ. ಇದು ಎಲ್ಲರೂ ಕೂಡಿ ಮಾಡುವ ಕೆಲಸ. ಭಾಗವಹಿಸುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಅದಕ್ಕಿಂತಲೂ ತಾತ್ವಿಕ ಸಿದ್ಧಾಂತ ಅಡಿಯಲ್ಲಿ ಎಲ್ಲರೂ ಒಗ್ಗೂಡುವ ಆಶಯಗಳನ್ನು ಈ ಸಮಾವೇಶ ಹೊಂದಿದೆ” ಎಂದ ಸೂಳಿಬಾವಿ, “ಈ ಸಮಾವೇಶಕ್ಕೆ ಹಿಂದಿನ ಚಳುವಳಿಯ ನಡೆದ ಬಂದ ದಾರಿಯ ಹಿನ್ನೋಟ ಮತ್ತು ಮುಂದೆ ಸಾಗಬೇಕಾದ ಚಳವಳಿಯ ಮುನ್ನೊಟದ ಕುರಿತು ಸ್ಪಷ್ಟತೆ ಇದೆ” ಎಂದರು.

ಕರ್ನಾಟಕದಲ್ಲಿ ಅಂಬೇಡ್ಕರ್ ಅವರು ಕರ್ನಾಟಕದಲ್ಲಿ ಯಾವ ಯಾವ ಸ್ಥಳಗಳಿಗೆ ಬಂದಿದ್ದರು, ಯಾಕೆ ಬಂದಿದ್ದರು, ಯಾವ ಸಂದರ್ಭದಲ್ಲಿ ಬಂದರು. ಜನ ಸಮುದಾಯದ ಜತೆ ಬೆರೆತಿದ್ದು, ಅದರ ಪರಿಣಾಮ, ಸಮುದಾಯದಲ್ಲಿ ಆದ ಬದಲಾವಣೆ, ಅವರ ನಡುವೆ ಆಗಿರುವ ಪತ್ರಗಳ ಹಂಚಿಕೆ ಕುರಿತು ಅಧ್ಯಯನ ನಡೆದು ಆ ಚರಿತ್ರೆಯನ್ನು ಕಟ್ಟಿಕೊಡುವ ಕೆಲಸ ಆದರೆ ಈ ಸಮಾವೇಶಕ್ಕೆ ಅರ್ಥ ಸಿಗುತ್ತದೆ ಎಂದು ಅಭಿಪ್ರಾಯಿಸಿದರು.
ಗದಗದಲ್ಲಿ ಕೂಡ ಅಂಬೇಡ್ಕರ್ ಬದುಕಿರುವ ಕಾಲದಲ್ಲಿಯೇ ಅವರ ಅಭಿಮಾನಿಗಳು ಇದ್ದರು. ಅವರ ನಡೆಸುವ ಚಳುವಳಿ ಚರ್ಚಿಸಲು ಸಭೆ ಸೇರುತ್ತಿದ್ದರು. ಅವರು ನಡೆಸುವ ಚಳಿವಳಿಗೆ ತಮ್ಮಿಂದ ಆದಷ್ಟು ಹಣಕಾಸಿನ ನೆರವು ನೀಡುತ್ತಿದ್ದರು. ಅದರಲ್ಲಿ ಮಹಿಳೆಯರು ದಲಿತೇತರು ಇದ್ದರು ಎಂಬುದನ್ನು ಅಂಬೇಡ್ಕರ್ ಅವರು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ ಮಾಹಿತಿ ಸಿಕ್ಕಿದೆ. ಆ ಚಾರಿತ್ರಿಕ ಸಂಗತಿಗಳನ್ನು ಸಂಶೋಧಿಸಿ ಬರೆಯಬೇಕಿದೆ. ಅಂಬೇಡ್ಕರ್ ಎಲ್ಲ ಪತ್ರ ವ್ಯವಹಾರಗಳನ್ನು ಐತಿಹಾಸಿಕ ದಾಖಲೆಯಾಗಿ ಕನ್ನಡಿಗರಿಗೆ ಕಟ್ಟಿಕೊಡುವ ಆಗಬೇಕು ಎಂದರು.
ಗದಗದಲ್ಲಿ ಬಸವಲಿಂಗಪ್ಪನವರು ಒಂದು ಪ್ರೌಢಶಾಲೆಯನ್ನು ಪ್ರಾರಂಭಿಸಿದ್ದರು. ನಾನಾ ಕಾರಣಗಳಿಂದ ಅದು ಈಗ ಮುಚ್ಚಿಕೊಂಡಿದೆ. ದಲಿತ ಸಂಘರ್ಷ ಸಮಿತಿ ಕಟ್ಟಿದ ಬಿ. ಕೃಷ್ಣಪ್ಪ ಅವರು ಕೊನೆಯುಸಿರೆಳೆದ ಗದಗ ನೆಲದಲ್ಲಿ ಅವರ ಹೆಸರಿನಲ್ಲಿ ಸ್ಮಾರಕ ಭವನ ಮಾಡಬೇಕು. ಇವೆರಡು ಸಂಗತಿಗಳು ಸಮಾವೇಶದ ನಿರ್ಣಯಗಳಲ್ಲಿ ಸೇರಿಸಬೇಕು. ಅವೆರಡು ನಿರ್ಣಯ ಜಾರಿಗೆ ತರಲು ಸರ್ಕಾರವನ್ನು ಈಗಿನಿಂದಲೇ ಒತ್ತಾಯಿಸಬೇಕು. ಅದಕ್ಕಾಗಿ ಸಂಬಂಧಪಟ್ಟವರನ್ನು ಭೇಟಿಯಾಗಿ ಒತ್ತಾಯಿಸಲು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಸಮಾವೇಶಕ್ಕೆ ಪೂರಕವಾದ ಸಂಗತಿಗಳ ಕುರಿತು ಸಭೆಯಲ್ಲಿ ಭಾಗವಹಿಸಿದವರು ಮಾತನಾಡಿದರು. ಮುಖ್ಯವಾಗಿ ಜಿಲ್ಲೆಯಲ್ಲಿ ಚಳುವಳಿ ಸಿದ್ದಾಂತ ಬದ್ದವಾಗಿ ಕಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ನೂರ ಜನ ಯುವಕರಿಗೆ ಅಧ್ಯಯನ ಶಿಬಿರ ಮಾಡಬೇಕು ಎನ್ನುವ ತೀರ್ಮಾನ ಈ ಸಭೆ ತಗೆದುಕೊಂಡಿತು.
ಈ ಸಭೆಯಲ್ಲಿ ಪಾಲ್ಗೊಂಡಿದ್ದ ದಲಿತ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷರಾದ ಅರ್ಜುನ ಗೊಳಸಂಗಿ ಅವರು ಸೂಕ್ತ ಸಲಹೆಗಳನ್ನು ನೀಡಿದರು. ಗದಗ ಜಿಲ್ಲೆಯ ದಲಿತ ಚಳುವಳಿಯ ಕಟ್ಟಲು ಒಂದು ಉಪಸಮಿತಿಯನ್ನು ರಚಿಸಲಾಯಿತು. ಸಭೆಯಲ್ಲಿ ಮುತ್ತು ಬಿಳಿಯಲಿ, ಆನಂದ ಶಿಂಗಾಡಿ, ರಮೇಶ ಕೋಳೂರು, ಅಶೋಕ ಕಟ್ಟಿಮನಿ ಅವರನ್ನೊಳಗೊಂಡು ಧಾರವಾಡ ಕೊಪ್ಪಳ, ಕುಷ್ಟಗಿ ಗದಗ ದಲಿತ ಮುಖಂಡರು ಉಪಸ್ಥಿತರಿದ್ದರು.
