ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿ ಮಂಗಳವಾರ ಸಂಜೆ ನದಿಗೆ ಹಾರಿದ್ದ ತಾಲೂಕಿನ ಮಕ್ಕುಂಪುರ ಗ್ರಾಮದ ನಾಲ್ವರ ಮೃತದೇಹಗಳು ಪತ್ತೆಯಾಗಿದ್ದು, ಗುರುವಾರ ಸಾಮೂಹಿಕ ಅಂತ್ಯಕ್ರಿಯೆ ಮಾಡಲಾಯಿತು.
ಬಾಲಕ ವೇದಾಂತ್ ಮೃತದೇಹ ಬುಧವಾರ ಸಂಜೆ ಪತ್ತೆಯಾಗಿತ್ತು. ಮಕ್ಕಳನ್ನು ನದಿಗೆ ತಳ್ಳಿ ತಾನೂ ನದಿಗೆ ಹಾರಿದ್ದ ಮಂಜುನಾಥ ಅರಕೇರಿ, ಅವರ ಮಕ್ಕಳಾದ ಧನ್ಯಾ ಹಾಗೂ ಪವನ್ ಅವರ ಮೃತದೇಹಗಳು ಗುರುವಾರ ಪತ್ತೆಯಾದವು. ಪಟ್ಟಣದ ಅಗ್ನಿ ಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳೀಯ ಮೀನುಗಾರರ ನೆರವಿನಿಂದ ಎರಡು ದಿನ ಶೋಧ ಕಾರ್ಯ ನಡೆಸಿದ್ದರು.
ಎಲ್ಲರ ಮೃತದೇಹಗಳನ್ನು ಮುಂಡರಗಿ ಸಾರ್ವಜನಿಕ ಆಸ್ಪತ್ರೆಗೆ ತಂದು ಶವ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಮೃತದೇಹಗಳು ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮಕ್ಕಳ ಮೃತದೇಹ ಕಂಡು ಗ್ರಾಮಸ್ಥರು ಮರುಗಿದರು.
ಇದನ್ನು ಓದಿದ್ದೀರಾ? ರಾಯಚೂರು | ಮುಖ್ಯ ಶಿಕ್ಷಕಿಯಿಂದ ದುರ್ವರ್ತನೆ ಆರೋಪ: ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಏನಿದು ಘಟನೆ?
ಕೌಟುಂಬಿಕ ಕಲಹದಿಂದ ಬೇಸತ್ತ ಮುಂಡರಗಿ ತಾಲೂಕಿನ ಮಕ್ತುಪೂರ ಗ್ರಾಮದ ನಿವಾಸಿ ಮಂಜುನಾಥ ಅರಕೇರಿ ತನ್ನ ಮೂವರು ಮಕ್ಕಳೊಂದಿಗೆ ಕಳೆದ ಮಂಗಳವಾರ ಗದಗ ಜಿಲ್ಲೆಯ ಕೊರ್ಲಹಳ್ಳಿ ಬಳಿಯಲ್ಲಿ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮಂಜುನಾಥ ಅವರು ಮೊದಲು ತನ್ನ ಮೂವರು ಮಕ್ಕಳನ್ನು ನದಿಗೆ ಎಸೆದು ಬಳಿಕ ತಾನೂ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೂರು ವರ್ಷದ ವೇದಾಂತ, ನಾಲ್ಕು ವರ್ಷದ ಪವನ್ ಹಾಗೂ ಆರು ವರ್ಷದ ಧನ್ಯಾ ನದಿ ಪಾಲಾದ ದುರ್ದೈವಿ ಮಕ್ಕಳು.
ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣವೆಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮುಂಡರಗಿ ಪೊಲೀಸರು ಪ್ರಕರನ ದಾಖಲಿಸಿಕೊಂಡಿದ್ದಾರೆ.
