“ಮಕ್ಕಳಲ್ಲಿ ಪರಿಸರ ಕುರಿತು ಅರಿವು ಮೂಡಿಸದಿದ್ದರೆ ಭವಿಷ್ಯದಲ್ಲಿ ಉತ್ತಮ ಪರಿಸರ ನಿರೀಕ್ಷಿಸಲು ಸಾಧ್ಯವಿಲ್ಲ. ಹಸಿರು ನಮ್ಮೆಲ್ಲರ ಉಸಿರಾಗಬೇಕು. ಶಾಲೆ, ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಅವಕಾಶವಿರುವಲ್ಲೆಲ್ಲ ಸರಿಗಳನ್ನು ನೆಟ್ಟು ಪೋಷಿಸಿ ಬೆಳೆಸಬೇಕು ಎಂದು” ಕ್ಷೇತ್ರಶಿಕ್ಷಣಾಧಿಕಾರಿ ಎಫ್.ಎಂ. ಫಡ್ನೇಸಿ ಹೇಳಿದರು.
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮೇನಹಳ್ಳಿಯ ಸರ್, ಜಗದೀಶಚಂದ್ರ ಭೋಸ್ ಇಕೋಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ‘ಪರಿಸರ ವಚನ ವಾಚನಗೋಷ್ಟಿ’ಯನ್ನು ಉದ್ಘಾಟಿಸಿ ಮಾತನಾಡಿದರು.
“ಪರಿಸರ ಪ್ರೇಮಿ ಸಿ.ಎಸ್ ಅರಸನಾಳ ಅವರ ರಚನೆಯ ‘ಹಸಿರಿಲ್ಲದೆ ಉಸಿರಿಲ್ಲ’ ಪರಿಸರ ವಚನಗಳ ಕೃತಿಯಿಂದ ಆಯ್ದ ವಚನಗಳನ್ನು ವಾಚಿಸುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಜಾಗೃತಗೊಳಿಸುತ್ತಿರುವುದು ಸ್ತುತ್ಯಾರ್ಹ ಕಾರ್ಯವಾಗಿದ್ದು ಮಕ್ಕಳು ವಚನಗಳಲ್ಲಿ ಪ್ರಸ್ತಾಪಿಸಿದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆಚರಣೆಯಲ್ಲಿತರಬೇಕು” ಎಂದರು.
ಮುಖ್ಯ ಅತಿಥಿಗಳಾಗಿ ವಚನಕಾರ ಸಿ.ಎಸ್. ಅರಸನಾಳ ಮಾತನಾಡಿ, “ಕಪ್ಪತಗುಡ್ಡ ನಮ್ಮ ಅತ್ಯತ್ತಮ ಪರಿಸರ ತಾಣ. ಈ ತಾಣವನ್ನು ರಕ್ಷಿಸುವತ್ತ ಸದಾ ಜಾಗೃತಿವಹಿಸುವುದು ಅಗತ್ಯ” ಎಂದರು.
“ಈ ವರ್ಷದ ಜಾಗತಿಕ ಘೋಷವಾಕ್ಯದಂತೆ ಸಾಕಷ್ಟು ಅರಣ್ಯ ಬೆಳೆಸಬೇಕು ಹಾಗೂ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಜಾಗೃತಿವಹಿಸಿ ಬಳಕೆಯನ್ನು ಕಡಿಮೆ ಮಾಡಬೇಕು” ಎಂದರು.
ಪ್ಲಾಸ್ಟಿಕ್ ಬಳಕೆಯಿಂದ ಆಗುವ ಅವಗಡಗಳ ಕುರಿತು, ಬಿಸಿಯಾದ ಆಹಾರವನ್ನು ಪ್ಲಾಸ್ಟಿಕ್ ನಲ್ಲಿ ಹಾಕಿ ಬಳಸದಿರುವ, ಪ್ಲಾಸ್ಟಿಕ್ ಸುಡದಿರುವ ಕುರಿತು ಹಲವು ದೃಷ್ಟಾಂತಗಳೊಂದಿಗೆ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರು.
ಪ್ಲಾಸ್ಟಿಕ್ಚೀಲಗಳ ಬದಲು ಬಟ್ಟೆ ಚೀಲ ಬಳಸುವುದು, ಹೊಟೆಲ್ ನಿಂದ ಪಾರ್ಸಲ್ ತರುವಾಗ ಮನೆಯಿಂದ ಡಬ್ಬ ಒಯ್ಯುವ ಕುರಿತು ಸಲಹೆ ನೀಡಿದರು. ತಾವು ಪರಿಸರದ ಕುರಿತು ಬರೆದ ವಚನಗಳನ್ನು ವಾಚಿಸಿ, ಮಕ್ಕಳು ವಾಚಿಸಿದುದರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಇನ್ನೋರ್ವ ಅತಿಥಿ ಕ್ಷೇತ್ರಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ ಮಾತನಾಡಿ, “ಮಕ್ಕಳು ಪರಿಸರದ ಕತೆ, ಕವಿತೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ನಾಡಿನ ಹೆಸರಾಂತ ಕವಿಗಳೆಲ್ಲ ಪ್ರಕೃತಿ ಪರಿಸರದ ಕುರಿತು ಕಾವ್ಯ ಕಟ್ಟಿದ್ದಾರೆ, ಕಥೆ ಬರೆದಿದ್ದಾರೆ. ಇಂತ ಸಾಹಿತ್ಯ ಓದಿನೊಂದಿಗೆ ಪರಿಸರ ಸ್ನೇಹಿಯಾಗಿ ಬೆಳೆಯುವಂತೆ ಶಾಲೆಯಲ್ಲಿ ಮಕ್ಕಳಿಗೆ ಮುಕ್ತ ವಾತಾವರಣ ಕಲ್ಪಿಸಿಕೊಟ್ಟಿರುವುದು ಮಕ್ಕಲಿಗೆ ಸ್ವಯಂ ಕಲಿಕೆಗೆ ದಾರಿಮಾಡಿಕೊಡುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ; 5 ವರ್ಷದ ಬಾಲಕ ಸೇರಿ ಇಬ್ಬರ ಸಾವು
ವಿದ್ಯಾರ್ಥಿಗಳಾದ ಶ್ರೇಯಾ, ವಿಜಯಾ, ಶಶಿಧರ, ಮಮತಾ, ಅಮೃತಾ, ಯಲ್ಲಮ್ಮ, ಭರತ, ಸುಧಾ, ನಂದಿತಾ, ಶೃತಿ, ಕಾವೆರಿ, ಕುಮಾರಸ್ವಾಮಿ, ಕೊಟ್ರೆಶ್ ಮೊದಲಾದವರು ಸಿ.ಎಸ್. ಅರಸನಾಳ ಅವರ ಪರಿಸರದ ವಚನಗಳನ್ನು ವಾಚಿಸಿದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಮಹೇಶ ಬಾಗಳಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಮುಖ್ಯೋಪಾಧ್ಯಾಯ ಡಾ. ನಿಂಗು ಸೊಲಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ.ಎಚ್. ಹಲವಾಗಲಿ, ಶಿವಲೀಲಾ ಅಬ್ಬಿಗೇರಿ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಪಿ.ಆರ್. ಗಾಡದ ಸ್ವಾಗತಿಸಿದರು. ಪಿ.ಎಂ.ಲಾಂಡೆ ಕಾರ್ಯಕ್ರಮ ನಿರೂಪಿಸಿದರು. ಎಂ.ಆರ್. ಗುಗ್ಗರಿ ವಂದಿಸಿದರು.
