ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರಲ್ಲಿ ಅನುತ್ತೀರ್ಣ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ನರೇಗಲ್ ಪಟ್ಟಣದಲ್ಲಿ ಬುಧವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ರಾಕೇಶ್ ನಾಗೇಶಪ್ಪ ಮಣ್ಣೋಡ್ಡರ ನರೇಗಲ್ ಪಟ್ಟಣದ ಅನ್ನದಾನೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ.
ಕನ್ನಡ60, ಇಂಗ್ಲಿಷ್ 48 ವಿಷಯಗಳಲ್ಲಿ ಪಾಸಾಗಿದ್ದು, ಉಳಿದ ವಿಷಯಗಳಲ್ಲಿ ಫೇಲಾಗಿದ್ದಾನೆ.
ಫಲಿತಾಂಶ ಪ್ರಕಟವಾದ ದಿನದಿಂದ ಮನಸ್ಸಿಗೆ ತೆಗೆದುಕೊಂಡಿದ್ದ ವಿದ್ಯಾರ್ಥಿಯು ಅದನ್ನೇ ಹೆಚ್ಚಾಗಿ ವಿಚಾರ ಮಾಡುತ್ತಿದ್ದ. ಇದೇ ವಿಷಯಕ್ಕೆ ಮನನೊಂದು ನರೇಗಲ್ ಬಸ್ ನಿಲ್ದಾಣದ ಎದುರಿಗೆ ಇರುವ ಸರ್ಕಾರಿ ಶಾಲೆಯ ಆವರಣದಲ್ಲಿನ ಗಿಡಕ್ಕೆ ನೇಣು ಬಿಗಿದುಕೊಂಡಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ರಾಕೇಶ್ ಉತ್ತಮ ಕಬಡ್ಡಿ ಆಟಗಾರನಾಗಿದ್ದು, ಮುಕ್ತ ಹಾಗೂ ಕೆಜಿ ಕಬಡ್ಡಿ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲೆಡೆ ಹೆಸರು ಮಾಡಿದ್ದ. ಉತ್ತಮ ಆಟಗಾರ ಓದಿನ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು ನೋವಾಗಿದೆ ಎಂದು ಅವನ ಸಹಪಾಠಿಗಳು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಗ್ರಾಕೂಸ್ ಹೋರಾಟಕ್ಕೆ ಮಣಿದ ಗ್ರಾಪಂ; 3 ತಿಂಗಳಿಂದ ಕೂಲಿ ಕಾರ್ಮಿಕರನ್ನು ಸತಾಯಿಸಿದ್ದ ಆರೋಪ
ಮೃತ ವಿದ್ಯಾರ್ಥಿಯ ತಂದೆ ಮನೆ ಹಾಗೂ ಕಟ್ಟಡಗಳನ್ನು ಕಟ್ಟುವ ಕೆಲಸ ಮಾಡುತ್ತಾರೆ. ಅವರಿಗೆ ಇಬ್ಬರು ಗಂಡುಮಕ್ಕಳಿದ್ದು, ರಾಕೇಶ್ ಕಿರಿಯ ಮಗನಾಗಿದ್ದಾನೆ. ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.