ಊರಲ್ಲಿ ಯಾರಾದ್ರೂ ಸತ್ತರೆ ಅವರನ್ನು ಹೂಳಲು, ಸುಡಲು ಸುಡುಗಾಡಿಗೆ ದಾರಿ ಇಲ್ಲ. ರೈತರಿಗೆ ಸುಡುಗಾಡು ದಾರಿ ಮೂಲಕ ತಮ್ಮ ಜಮೀನುಗಳಿಗೆ ಹೋಗಲು ದಾರಿ ಇಲ್ಲ. ಸ್ಮಶಾನಕ್ಕೆ, ಜಮೀನಿಗೆ ಹೋಗಲು ರೈತರು, ಗ್ರಾಮಸ್ಥರು ಪರದಾಡುತ್ತಿದ್ದಾರೆ – ಇದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರು ಗ್ರಾಮದ ಜನರ ಪರಿಸ್ಥಿತಿ.
ಗ್ರಾಮದ ರೈತರು ಜಮೀನಿಗೆ ಮತ್ತು ಸ್ಮಶಾನಕ್ಕೆ ಹೋಗಲು ಸರ್ವೇ ನಂಬರ್ 112 ಹಾಗೂ ಸರ್ವೇ ನಂಬರ್ 1ರಲ್ಲಿರುವ ಜಮೀನುಗಳ ನಡುವೆ ಇದ್ದ ದಾರಿಯನ್ನು ಬಳಸುತ್ತಿದ್ದರು. ಹಲವಾರು ವರ್ಷಗಳಿಂದ ಎಲ್ಲರಿಗೂ ದಾರಿ ಮುಕ್ತವಾಗಿತ್ತು. ಇದೇ ದಾರಿಯನ್ನು ಇಡೀ ಗ್ರಾಮದ ಜನರು ಬಳಸುತ್ತಿದ್ದರು.
ಆದರೆ, ಇತ್ತೀಚೆಗೆ, ಆ ಜಮೀನಿನ ಮಾಲೀಕರು 7 ಅಡಿ, 6 ಇಂಚು ಅಳೆಯ ದಾರಿ ಬಿಟ್ಟು, ಕಾಂಪೌಂಡ್ ಹಾಕಿಕೊಂಡಿದ್ದಾರೆ. ಈ ಕಿರಿದಾದ ದಾರಿಯಲ್ಲಿ ಗ್ರಾಮಸ್ಥರು ಮೃಹದೇಹವನ್ನು ಹೊತ್ತುಕೊಂಡು ಹೊಗಲು ಸಾಧ್ಯವಾಗುತ್ತಿಲ್ಲ. ರೈತರು ತಮ್ಮ ಎತ್ತಿನ ಗಾಡಿಗಳಲ್ಲಿ ಜಮೀನಿಗೆ ಹೋಗಲೂ ಸಾಗುತ್ತಿಲ್ಲ. ಸರಿಯಾದ ದಾರಿ ಇಲ್ಲದೆ, ಗ್ರಾಮದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ.
“ಸುಡುಗಾಡು ದಾರಿಯಲ್ಲಿ ಊರಿನ ಸಾಕಷ್ಟು ರೈತರ ಜಮೀನುಗಳಿವೆ. ಸುಮಾರು ವರ್ಷಗಳಿಂದ ರೈತರು ಇದೆ ದಾರಿಯಲ್ಲಿ ಜಮೀನುಗಳಿಗೆ ಹೋಗುತ್ತಿದ್ದರು. ಆದರೆ, ಹುಬ್ಬಳ್ಳಿಯವರು ಗ್ರಾಮದಲ್ಲಿ ಜಮೀನು ಖರೀದಿಸಿದ್ದಾರೆ. ತಮ್ಮ ಜಮೀನಿನಲ್ಲಿದ್ದ ದಾರಿಯನ್ನೂ ಸೇರಿಸಿ ಕಾಂಪೌಂಡ್ ಹಾಕಿಕೊಂಡಿದ್ದಾರೆ. ಗ್ರಾಮದ ರೈತರಿಗೆ ಹೊಲಗಳಿಗೆ ಹೋಗಲು, ಸುಡುಗಾಡು ಗಟ್ಟಿಗೆ ಹೋಗಲು ದಾರಿ ಬಿಡುತ್ತಿಲ್ಲ” ಎಂದು ಗ್ರಾಮದ ರೈತರು ಆರೋಪಿಸಿದ್ದಾರೆ.
“ಊರಲ್ಲಿ ಯಾರಾದರೂ ಸಾವನ್ನಪ್ಪಿದರೆ ಅವರನ್ನು ಹೂಳಲು ಗ್ರಾಮದ ಜನರು ಇದೇ ದಾರಿ ಮೂಲಕ ಸುಡುಗಾಡು ಗಟ್ಟಿಗೆ ಹೋಗುತ್ತಿದ್ದರು. ಆದರೆ, ಈಗ ದಾರಿ ಇಲ್ಲದೆ, ಸ್ಮಶಾನಕ್ಕೆ ಹೋಗುವುದೂ ಕಷ್ಟವಾಗಿದೆ. ಹಲವಾರು ಜಮೀನುಗಳನ್ನು ಬಳಸಿಕೊಂಡು ಸ್ಮಶಾನಕ್ಕೆ ಬರುವಂತಹ ಪರಿಸ್ಥಿತಿ ಎದುರಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥ ಅಮರಪ್ಪ ಗುಡುಗುಂಟಿ ಈದಿನ.ಕಾಮ್ ಜೊತೆ ಮಾತನಾಡಿ, “ಬಹಳ ಹಿಂದಿನಿಂದಲೂ ಸುಡಗಾಡ ದಾರಿಯಲ್ಲಿಯೇ ಹೊಲಗಳಿಗೆ ಹೋಗಿ ಬದುಕು ನಡಿಸುತ್ತಿದ್ದೆವು. ಯಾರೋ ಹುಬ್ಬಳ್ಳಿಯವರಂತೆ ಹೊಲ ಖರೀದಿಸಿ, ಕಾಂಪೌಂಡ್ ಹಾಕಿಕೊಂಡಿದ್ದಾರೆ. ಸುಡುಗಾಡ ಗಟ್ಟಿಗೆ ಮತ್ತು ಹೊಲಕ್ಕೆ ಹೋಗಲು ದಾರಿ ಬಿಡುತ್ತಿಲ್ಲ. ನಮಗೆ ದಾರಿ ಮಾಡಿಕೊಡಬೇಕೆಂದು ತಹಶೀಲ್ದಾರರಿಗೆ ಮನವಿ ಕೊಟ್ಟು ಸಾಕಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.
ರೈತ ಸಂಘದ ಅಧ್ಯಕ್ಷರಾದ ಸುರೇಶಪ್ಪ ಬಾಗಲದ ಮಾತನಾಡಿ, “ಗ್ರಾಮದ ರೈತರಿಗೆ ಹೊಲಗಳಿಗೆ ಹೋಗಲಿಕ್ಕೆ ಇದೇ ದಾರಿ ಬಳಸುತ್ತಿದ್ದರು. ಆದರೆ, ಈಗ ರೈತರು ಬೆಳೆದ ಫಸಲನ್ನು ಹೊಲದಿಂದ ಮನೆಗೆ ತರಲು ಆಗುತ್ತಿಲ್ಲ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಯನ್ನು ಬಗೆಹರಿಸಬೇಕು” ಎಂದು ಆಗ್ರಹಿಸಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿದ್ದ ಲಕ್ಷ್ಮೇಶ್ವರ ತಹಶೀಲ್ದಾರ್ ವಾಸುದೇವ ಸ್ವಾಮಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಮಾತನಾಡಿ, “ನಕಾಶೆಯಲ್ಲಿ ಇರುವಂತೆ ಗ್ರಾಮದ ಜನರಿಗೆ ದಾರಿಯನ್ನು ಒದಗಿಸುತ್ತೇವೆ. ಅಲ್ಲಿಯವರೆಗೆ ಇದೇ ದಾರಿಯನ್ನು ಉಪಯೋಗಿಸಬಹುದು” ಎಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ.