ಫೈನಾನ್ಸ್ ಕಂಪನಿಯಲ್ಲಿ ಮಗ ಮಾಡಿದ್ದ ಸಾಲ ತೀರಿಸುವಂತೆ ಕಂಪನಿಯ ಸಿಬ್ಬಂದಿಗಳು ಸಾಲಗಾರನ ತಾಯಿಗೆ ಕಿರುಕುಳ ನೀಡಿದ್ದು, ಇಡೀ ದಿನ ಕಚೆರಿಯಲ್ಲಿ ಕೂಡಿ ಹಾಕಿ ಹಿಂಸಿಸಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಫೈನಾನ್ಸ್ ಕಂಪನಿಯ ಧೋರಣೆಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕಂಪನಿ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬಜಾಜ್ ಫೈನಾನ್ಸ್ ಕಂಪನಿಯಲ್ಲಿ ಗದಗ ನಗರದ ಡಂಬಳ ನಾಕಾ ನಿವಾಸಿ ಹೂವಯ್ಯ ಅವರು 2021ರಲ್ಲಿ 1.30 ಲಕ್ಷ ರೂ. ಸಾಲಪಡೆದಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಹೂವಯ್ಯ, ಪ್ರತಿ ತಿಂಗಳು ಸಮಯಕ್ಕ ಸರಿಯಾಗಿ ಮಾಸಿಕ ಕಂತನ್ನು (ಇಎಂಐ) ಪಾವತಿಸುತ್ತಿದ್ದರು. ಆದರೆ, ಕಳೆದ ಎರಡು ತಿಂಗಳಿನಿಂದ ಕಂತು ಪಾವತಿಸಿರಲಿಲ್ಲ ಎಂದು ತಿಳಿದುಬಂದಿದೆ.
ಎರಡು ತಿಂಗಳಿನಿಂದ ಹೂವಯ್ಯ ಇಎಂಐ ಪಾವತಿ ಮಾಡದ ಕಾರಣಕ್ಕೆ, ಡಿಸೆಂಬರ್ 26ರಂದು ಬೆಳ್ಳಂಬೆಳಗ್ಗೆ ಹೂವಯ್ಯ ಅವರ ಮನೆಗೆ ನುಗ್ಗಿದ ಗದಗ ಬಜಾಜ್ ಫೈನಾನ್ಸ್ ಕಂಪನಿಯ ಸಿಬ್ಬಂದಿಗಳು ಹೂವಯ್ಯ ಅವರ ತಾಯಿ ಗಂಗವ್ವ ಅವರನ್ನು ಕಚೇರಿಗೆ ಕರೆದೊಯ್ದು ಕೂಡಿ ಹಾಕಿದ್ದಾರೆ. ಇಡೀ ದಿನ ಕಚೇರಿಯಲ್ಲಿಯೇ ಕೂರಿಸಿಕೊಂಡು ಕಿರುಕುಳ ನೀಡಿದ್ದಾರೆ. ನನ್ನನ್ನು ಹೊರಗೆ ಬಿಡಿ, ಸಾಲ ಮಾಡಿಯಾದರೂ ಕಂತು ಕಟ್ಟುತ್ತೇನೆಂದು ಗಂಗವ್ವ ಕೇಳಿಕೊಂಡರೂ ಸಿಬ್ಬಂದಿಗಳು ಆಕೆಯನ್ನು ಹೊರಗೆ ಕಳಿಸಿಲ್ಲ ಎಂದು ಆರೋಪಿಸಲಾಗಿದೆ.
ಗಂಗವ್ವ ಅವರನ್ನು ಇಡೀ ದಿನ ಕಚೇರಿಯಲ್ಲಿ ಕೂಡಿಹಾಕೊಂಡಿದ್ದ ವಿಷಯ ತಿಳಿದ ಸ್ಥಳೀಯರು ಬಜಾಜ್ ಫೈನಾನ್ಸ್ ಕಂಪನಿಯ ಕಚೇರಿಗೆ ತೆರಳಿ, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಫೈನಾನ್ಸ್ ಕಂಪನಿಗಳು ಬಡ ಜನರಿಗೆ ಕಿರುಕುಳ ನೀಡುತ್ತಿವೆ. ಈ ಕಂಪನಿಗಳ ಮೇಲೆ ಪೊಲೀಸ್ ಇಲಾಖೆ ಕ್ರಮ ಕೈಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.