ಗದಗ ಜಿಲ್ಲೆಯ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ರಸ್ತೆಯ ಎರಡು ಬದಿಯಲ್ಲಿ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ಏರ್ಪಡಿಸಲಾಗಿದ್ದ ಸಸಿ ನೆಡುವ ಸಪ್ತಾಹ ಮತ್ತು ವನ ಮಹೋತ್ಸವಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷ ಲಕ್ಷ್ಮಣ ಕಂಬಳಿ ಚಾಲನೆ ನೀಡಿದರು.
ಚಾಲನೆ ನೀಡಿ ಮಾತನಾಡಿದ ಅವರು, “ಅರಣ್ಯವನ್ನು ಹೆಚ್ಚಿಸುವ ಸಲುವಾಗಿ ಪ್ರತಿ ಮನೆಯ ಮುಂದೆ ನಾಲ್ಕು ಸಸಿಗಳನ್ನು ಪೋಷಿಸುವ ಧ್ಯೇಯವನ್ನು ಪ್ರತಿಯೊಬ್ಬರು ಹೊಂದಬೇಕು. ಮರಗಿಡಗಳು ಸಮೃದ್ಧವಾಗಿದ್ದಲ್ಲಿ ಹೆಚ್ಚು ಮಳೆಯಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಮರಗಳನ್ನು ಹೆಚ್ಚಾಗಿ ಬೆಳೆಸಬೇಕು” ಎಂದರು.
ನರಗುಂದ ಉಪವಲಯ ಅರಣ್ಯಾಧಿಕಾರಿ ಸತೀಶಕುಮಾರ ಮಲ್ಲಾಪೂರ ಮಾತನಾಡಿ, “ಗಿಡ ನೆಡುವ ಕಾಯಕವು 1947ರಿಂದ ಚಾಲನೆಗೊಂಡಿದೆ. 1950ರಿಂದ ಪ್ರತೀ ವರ್ಷ ಸಸಿ ನೆಡುವ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಗಿಡ-ಮರಗಳನ್ನು ಕಡಿಯದೇ ಪೋಷಣೆ ಮಾಡಬೇಕು” ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ಮಾತನಾಡಿ, “ಯುವಕರು ‘ನನ್ನ ಗಿಡ, ನನ್ನ ಹೆಮ್ಮೆ’ ಎನ್ನುವ ನಿಟ್ಟಿನಲ್ಲಿ ಸಸಿಗಳನ್ನು ನೆಟ್ಟು ಮರಗಳನ್ನು ಬೆಳೆಸುವ ಜವಬ್ದಾರಿ ತೆಗೆದುಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶೈನಾಜ್ ಮುಜಾವರ್, ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಕುಂಬಾರ, ಅರಣ್ಯ ರಕ್ಷಕ ಈರಪ್ಪ ಸುಂಕದ, ಅರಣ್ಯ ವಿಕ್ಷಕ ರಮೇಶ ಕುಂಬಾರ ಹಾಗೂ ನರೇಗಾ ಕೂಲಿಕಾರರು ಉಪಸ್ಥಿತರಿದ್ದರು.