ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ಮಗಳು ಮತ್ತು ಅಳಿಯನನ್ನು ಭೀಕರವಾಗಿ ಹತ್ಯೆಗೈದಿದ್ದ ಮೃತ ಯುತಿಯ ನಾಲ್ವರು ಸಂಬಂಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ.
ಗದಗ ಜಿಲ್ಲೆಯ ಗಜೇಂದ್ರಗಢ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ 2019ರಲ್ಲಿ ಘಟನೆ ನಡೆದಿತ್ತು. ಪ್ರಬಲ ಜಾತಿಯ ಗಂಗವ್ವ ರಾಠೋಡ್ ಮತ್ತು ತಳಸಮುದಾಯದ ರಮೇಶ್ ಮಾದರ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅವರ ಪ್ರೀತಿಗೆ ಗಂಗವ್ವ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ, 2017ರಲ್ಲಿ ಊರು ತೊರೆದು ವಿವಾಹವಾಗಿದ್ದರು. ಬೆಂಗಳೂರಿನಲ್ಲಿ ನಡೆಸಿದ್ದರು.
ವಿವಾಹವಾದ 2 ವರ್ಷಗಳ ಬಳಿಕ, 2019ರಲ್ಲಿ ದಂಪತಿಗಳು ತಮ್ಮೂರಿಗೆ ಮರಳಿದ್ದರು. ಬೇರೊಂದು ಮನೆ ಮಾಡಿಕೊಂಡು ಜೀವನ ಆರಂಭಿಸಿದ್ದರು. 2019ರ ನವೆಂಬರ್ 6ರಂದು ಅವರ ಮನೆಗೆ ನುಗ್ಗಿದ ಗಂಗವ್ವ ಅವರ ಚಿಕ್ಕಪ್ಪ ಶಿವಪ್ಪ ರಾಠೋಡ್, ಪರಶುರಾಮ ರಾಠೋಡ್ ಮತ್ತು ಆಕೆಯ ತಮ್ಮಂದಿರಾದ ರವಿ, ರಮೇಶ್ ದಂಪತಿಗಳ ಮೃಗೀಯವಾಗಿ ಹಲ್ಲೆ ನಡೆಸಿದ್ದರು.
ಗಂಗವ್ವ-ರಮೇಶ್ ದಂಪತ್ತಿಗಳನ್ನು ಮನೆಯಿಂದ ಹೊರಗೆಳೆದು ತಂದು, ಕಟ್ಟಿಗೆಗಳು, ದೊಣ್ಣೆಗಳಿಂದ ಅಮಾನುಷವಾಗಿ ಥಳಿಸಿ, ಕಲ್ಲು ಎತ್ತಿಹಾಕಿ, ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆಗೈದಿದ್ದರು. ಗಂಗವ್ವ-ರಮೇಶ್ ಹತ್ಯೆ ಇಡೀ ಗದಗ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ಸೆಕ್ಷನ್ 427, 449, 302, 506(2) ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಡನೆಸಿದ್ದ ಗಜೇಂದ್ರಗಢ ಪೊಲೀಸರು 2020ರ ಜವವರಿ 18ರಂದು ಚಾರ್ಜ್‌ಶೀಟ್ ಸಲ್ಲಿಸದ್ದರು.
ಐದು ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆಸಿರುವ ಗದಗ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎಸ್ ಬಸವರಾಜ್ ಅವರು ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿದ್ದಾರೆ. ನಾಲ್ವರು ಅಪರಾಧಿಗಳಿಗೂ ಮರಣದಂಡನೆ ವಿಧಿಸಿ ತೀರ್ಪು ನೀಡಿದ್ದಾರೆ.