ಬಡವರ ಹಸಿವನ್ನು ನೀಗಿಸುವ ಇಂದಿರಾ ಕ್ಯಾಂಟೀನ್ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಗದಗ ಜಿಲ್ಲೆಯ ರೋಣ ಪಟ್ಟಣದ ಹೃದಯ ಭಾಗ ಪಿಡಬ್ಲೂಡಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಿದ್ದು, ಆರ್ಥಿಕವಾಗಿ ಹಿಂದುಳಿದ ಜನರ ಹಸಿವನ್ನು ನಿಗಿಸಬೇಕಿತ್ತು. ಆದರೆ ಈ ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಉದ್ಘಾಟನೆಗೊಳ್ಳದೆ ಸುಮಾರು ಏಳೆಂಟು ತಿಂಗಳಿಂದ ನನೆಗುದಿಗೆ ಬಿದ್ದಿದೆ. ಇದರಿಂದ ಅನೈತಿಕ ಚಟುವಟಿಕೆಗಳ ಅಡ್ಡವಾಗಿ ಮಾರ್ಪಟ್ಟಿದೆ.
ಕೂಲಿ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ರೈತರಿಗೆ, ಆಟೋ ಚಾಲಕರಿಗೆ ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಬಡವರ ಹಸಿವನ್ನು ನೀಗಿಸುವ ಸಲುವಾಗಿ ಕಡಿಮೆ ಹಣದಲ್ಲಿ ಹೊಟ್ಟೆತುಂಬಾ ಊಟ ಮಾಡಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರು. ಆದರೆ ಇಲ್ಲೊಂದು ಇಂದಿರಾ ಕ್ಯಾಂಟೀನ್ ಅನೈತಿಕ ಚಟುವಟಿಕೆಗಳಿಂದ ಕೂಡಿದ್ದು, ಕುಡುಕರ ಅಡ್ಡವಾಗಿದೆ.
ರೋಣ ಪಟ್ಟಣಕ್ಕೆ ಸುತ್ತಮುತ್ತಲಿನ ಹಳ್ಳಿಗಳಿಂದ ಕೂಲಿ ಕಾರ್ಮಿಕರು, ರೈತರು, ಶಾಲೆ-ಕಾಲೇಜಿಗೆ ಬರುವ ವಿದ್ಯಾರ್ಥಿಗಳು, ಆಟೋ ಚಾಲಕರು ಹೀಗೆ ಬೇರೆ ಬೇರೆ ದುಡಿಯುವ ವರ್ಗದವರು ಬರುತ್ತಾರೆ. ಹತ್ತಿರದಲ್ಲಿಯೇ ಬಸ್ ನಿಲ್ದಾಣವಿದೆ. ಹೆಚ್ಚು ವಹಿವಾಟು ನಡೆಯುವ ಸ್ಥಳದಲ್ಲಿಯೇ ಈ ಇಂದಿರಾ ಕ್ಯಾಂಟೀನ್ ಇದೆ. ಹೀಗೆ ಪಟ್ಟಣಕ್ಕೆ ಬರುವ ಜನರ ಹಸಿವನ್ನು ನೀಗಿಸಬೇಕಿದ್ದ ಇಂದಿರಾ ಕ್ಯಾಂಟೀನ್ ಅನೈತಿಕ ಚಟುವಟಿಕೆ ತಾಣವಾಗಿದೆ. ಈ ಇಂದಿರಾ ಕ್ಯಾಂಟೀನನ್ನೇ ಸ್ಥಳೀಯರು ಶೌಚಾಲಯವನ್ನಾಗಿಯೂ ಮಾಡಿಕೊಂಡಿದ್ದಾರೆ. ಕ್ಯಾಂಟೀನ್ ಒಳಗಡೆ ಹೋದರೆ, ಮಲಮೂತ್ರ ವಿಸರ್ಜನೆಯಿಂದ ದುರ್ನಾತ ಬೀರುತ್ತದೆ.

ನಿತ್ಯವೂ ಕುಡುಕರು ಇಂದಿರಾ ಕ್ಯಾಂಟೀನ್‌ಗೆ ಬಂದು ಕುಡಿಯುವ ಕುಡುಕರು ಸಾರಾಯಿ ಬಾಟಲಿ, ಪ್ಯಾಕೆಟ್‌ಗಳು, ನೀರಿನ ಬಾಟಲಿ, ಪೌಚುಗಳನ್ನು ಕ್ಯಾಂಟೀನ್ ತುಂಬಾ ಬಿಸಾಕಿ ಹೋಗುತ್ತಾರೆ. ಗುಟಕಾ ತಿಂದು ಉಗುಳಿದ್ದರಿಂದ ಗಬ್ಬುನಾತ ಬೀರುತ್ತದೆ. ರಾತ್ರಿಯಾದರೆ, ಇಲ್ಲಿ ಬೇರೆ ಬೇರೆ ರೀತಿಯ ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ಇಂದಿರಾ ಕ್ಯಾಂಟೀನ್ ಸುತ್ತಮುತ್ತ ಕಸಕಡ್ಡಿಗಳಿಂದ ತುಂಬಿದೆ. ಗೇಟಿನ ಪಕ್ಕದಲ್ಲಿಯೇ ಸಾರಾಯಿ ಪಾಕೇಟ್‌ಗಳ ರಾಶಿ ಕಂಡುಬರುತ್ತದೆ.
ಶಾಸಕರ ಜನಸಂಪರ್ಕ ಕಚೇರಿ ಪಕ್ಕದಲ್ಲಿಯೇ ಇಂದಿರಾ ಕ್ಯಾಂಟೀನ್
ರೋಣ ಪಟ್ಟಣದ ಹೃದಯ ಭಾಗದಂತಿರುವ ಪಿಡಬ್ಲೂಡಿ ಆವರಣದಲ್ಲಿ ಪ್ರವಾಸಿ ಮಂದಿರ, ಪಿಡಬ್ಲೂಡಿ ಕಚೇರಿ ಅಷ್ಟೇ ಅಲ್ಲದೆ ಆಡಳಿರಾರೂಢಿಯಲ್ಲಿರುವ ಸರ್ಕಾರದ ಶಾಸಕರ ಜನಸಂಪರ್ಕ ಕೇಂದ್ರವು ಇದೆ. ಇಲ್ಲಿಗೆ ನಿತ್ಯ ನೂರಾರು ಜನರು ಬರುತ್ತಿದ್ದು, ಇಂದಿರಾ ಕ್ಯಾಂಟೀನ್ ಬಡವರ ಹಸಿವು ನೀಗಿಸದಂತಾಗಿದೆ.

ಮಾದಿಗ ದಂಡೋರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಂಜುನಾಥ ಬುರಡಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಶ್ರಮಿಕ ವರ್ಗದವರು ಕಡಿಮೆ ಹಣದಲ್ಲಿ ಹೊಟ್ಟೆತುಂಬಾ ಊಟ ಮಾಡಲೆಂದು ಸಿದ್ದರಾಮಯ್ಯನವರು ಇಂದಿರಾ ಕ್ಯಾಂಟೀನ್‌ನಂತಹ ಒಳ್ಳೆ ಯೋಜನೆ ಜಾರಿಗೊಳಿಸಿದ್ದಾರೆ. ಆದರೆ ರೋಣ ಪಟ್ಟಣದ ಇಂದಿರಾ ಕ್ಯಾಂಟೀನ್ ಪ್ರಯೋಜನಕ್ಕೆ ಬಾರದಾಗಿದೆ. ಇನ್ಮುಂದಾದರೂ ಕೂಡಲೇ ಇಂದಿರಾ ಕ್ಯಾಂಟೀನ್ ಆರಂಭಿಸಿ ಶ್ರಮಿಕ ವರ್ಗದವರ ಹಸಿವನ್ನು ನೀಗಿಸಬೇಕು” ಎಂದು ಒತ್ತಾಯಿಸಿದರು.
ದಲಿತ ಮುಖಂಡ ಹಣಮಂತ ಪೂಜಾರ್ ಮಾತನಾಡಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಬಡವರಿಗೆ, ಎಲ್ಲ ವರ್ಗದವರಿಗೆ ಊಟ ಸಿಗಲೆಂದು ಈ ಯೋಜನೆ ಆರಂಭಿಸಲಾಗಿದೆ. ಆದರೆ, ಇಲ್ಲಿಯ ಶಾಸಕರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂದಿರಾ ಕ್ಯಾಂಟೀನ್ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಕೂಡಲೇ ಇಂದಿರಾ ಕ್ಯಾಂಟೀನ್ ಆರಂಭಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಗುಬ್ಬಿ | ನಿಟ್ಟೂರು ಪುರ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ ಕೇಂದ್ರ ಸಚಿವ ವಿ.ಸೋಮಣ್ಣ
ರೋಣ ಪುರಸಭೆ ಚೀಫ್ ಅಫೀಸರ್ ರಮೇಶ್ ಹೊಸಮನಿ ಈ ದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿದ್ದು, “ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿಯನ್ನು ಏಜೆನ್ಸಿಗೆ ಕೊಟ್ಟಿದ್ದು, ತಡವಾಗುತ್ತಿರುವುದರ ಕುರಿತು ಮಾಹಿತಿ ಪಡೆದು, ಆದಷ್ಟು ಬೇಗ ಇಂದಿರಾ ಕ್ಯಾಂಟೀನ್ ಆರಂಭಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಸ್ಥಳೀಯ ಶಾಸಕರು, ಅಧಿಕಾರಿಗಳು ರೋಣ ಪಟ್ಟಣದ ಇಂದಿರಾ ಕ್ಯಾಂಟೀನ್‌ನಲ್ಲಿ ನಡೆಯಿತ್ತಿರುವ ಅನೈತಿಕ ಚಟುವಟಿಕೆಗಳನ್ನು ನಿಲ್ಲಿಸಿ, ಶ್ರಮಿಕ ವರ್ಗದವರ ಹಸಿವನ್ನು ನೀಗಿಸಲು ಶೀಘ್ರದಲ್ಲಿಯೇ ಇಂದಿರಾ ಕ್ಯಾಂಟೀನ್ ಆರಂಭಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.
ಜನರ ಸಮಸ್ಯೆ ಆಲಿಸುವ ಕೆಲಸ. ಈ ದಿನ ಕಾಮ ಸುದ್ದಿ ಜನಪರ ಸಿದ್ದಿಗಳಾಗಿ ಮೂಡಿ ಬಂದಿದೆ ಅದರಲ್ಲಿ ಇಂದಿರಾ ಕ್ಯಾಂಟೀನ್ ಬಡವರಿಗೆ ಹಸಿವ ನೀಗಿಸಲು ಮುಂದಾಗಬೇಕು ಇಲ್ಲಿ ಕುಡಕರ ಅಡ್ಡ ಆಗಿದೆ ಜನಪ್ರತಿನಿದಿಗಳು ಈ ಕೂಡಲೇ ಇದನ್ನು ಆರಂಬಿಸಬೇಕು ಎಂದು ಆಗ್ರಹ ಮಾಡುವೆ
ರೋಣ ನಗರದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟಿನ್ ಬೇಗ ಬಡವರ ಹಸಿವು ನೀಗಿಸಲಿ ಎಂದ್ದು ಹಾರೈಯಿಸುತ್ತ . ಈ ಸುದ್ದಿ ಈ ದಿನ ಡಾಟ್ ಕಾಮ್ ವಾಹಿನಿಯಲ್ಲಿ ಸಂಪೂರ್ಣ ಮೂಡಿಬಂದಿದೆ . ಪ್ರತಿ ಸಣ್ಣ ದೊಡ್ಡ ವಿಷಯವನ್ನು ಬಹಳ ಸ್ಪಷ್ಟ್ ವಾಗಿ ಬಿತ್ತರಿಸುವ ಈ ದಿನ ಡಾಟ್ ಕಾಮ್ ಗೆ ದನ್ಯವಾದಗಳು