ಗದಗದ ಮುನ್ಸಿಪಲ್ ಪ್ರೌಢಶಾಲೆ ಶತಮಾನಗಳನ್ನು ಕಂಡ ಶಾಲೆ. ಆದರೆ, ಸದ್ಯ ಶಾಲೆಯ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ನಗರಸಭೆ ಪಕ್ಕದಲ್ಲಿಯೇ ಇದ್ದರೂ, ಅವರು ಈ ಶಾಲೆ ಕಡೆ ತಿರುಗಿ ನೋಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ದಶಕದ ಹಿಂದೆ ಮುನ್ಸಿಪಲ್ ಶಾಲೆ ತುಂಬಾ ಹೆಸರು ಮಾಡಿದ ಶಾಲೆಯಾಗಿತ್ತು. ಆದರೆ, ಈಗ ಈ ಶಾಲೆಗೆ ಬರಲು ಮಕ್ಕಳು ಹಿಂದೇಟು ಹಾಕುತ್ತಿದ್ದಾರೆ. ಶಾಲೆಯಲ್ಲಿ ಮೂಲಸೌಕರ್ಯ ಇಲ್ಲ. ಹದಗೆಟ್ಟ ಕಟ್ಟಡ, ಶಿಕ್ಷಕರ ಕೊರತೆ ಇದ್ದು ಶಾಲೆ ಸಮಸ್ಯೆಗಳ ಆಗರವಾಗಿದೆ.
ದಶಕದ ಹಿಂದೆ ತುಂಬಿ ತುಳುಕುತ್ತಿದ್ದ ಶಾಲೆ, ಈಗ ಮಕ್ಕಳಿಲ್ಲದೇ ಬಿಕೋ ಎನ್ನುತ್ತಿದೆ. ಶತಮಾನ ಕಂಡ ಶಾಲೆಯ ಮೇಲ್ಛಾವಣಿ ಹಾರಿ ಹೋಗಿದೆ. ಯಾವಾಗ ಕುಸಿದು ಬೀಳುತ್ತೋ ಅನ್ನೋ ಸ್ಥಿತಿ ತಲುಪಿದೆ. ಇಂಥ ಹದಗೆಟ್ಟ ಕಟ್ಟಡದಲ್ಲೇ ಬಡ ಮಕ್ಕಳು ಶಿಕ್ಷಣ ಕಲಿಯುತ್ತಿದ್ದಾರೆ. ಶಾಲೆಯ ಮೇಲ್ಚಾವಣಿ ಗಾಳಿ, ಮಳೆ ರಭಸಕ್ಕೆ ಹಾರಿಹೋಗಿ ವರುಷಗಳೇ ಉರುಳಿವೆ. ಇವುಗಳನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ವಿದ್ಯಾರ್ಥಿಗಳು ಭಯದಲ್ಲೇ ಪಾಠ ಕೇಳುವಂತಹ ಸ್ಥಿತಿ ಇದೆ.
‘ಮಳೆ ಬಂದರೆ ನಮಗೆ ಪಾಠ ಕೇಳಲು ತುಂಬಾ ತೊಂದರೆ. ನಮ್ಮ ಡ್ರಾಯಿಂಗ್ ಕೊಠಡಿ ಸಂಪೂರ್ಣವಾಗಿ ಹಾಳಾಗಿದೆ. ಕೂಡಲೇ ಸಂಬಂಧಪಟ್ಟವರು ಕಟ್ಟಡವನ್ನು ಸರಿಪಡಿಸಿ ನಮ್ಮ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.
ಪ್ರೌಢಶಾಲೆಗೆ ವಿಶಾಲವಾದ ಮೈದಾನವಿದ್ದರೂ ಅದು ಕುಡುಕರ ಅಡ್ಡೆಯಾಗಿ ಬದಲಾಗಿದೆ. ಇಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಸ್ವಚ್ಛಂದವಾಗಿದ್ದ ಮೈದಾನದಲ್ಲಿ ವಾಯು ವಿಹಾರಕ್ಕೆಂದು ಸಾರ್ವಜನಿಕರು ಆಗಮಿಸುತ್ತಿದ್ದರು. ಸಾಯಂಕಾಲ ವಾಯು ವಿಹಾರಕ್ಕೆ ಬರುವ ಸಾರ್ವಜನಿಕರಿಗೆ ಇತ್ತೀಚಿನ ದಿನಗಳಲ್ಲಿ ಕುಡುಕರ ದರ್ಶನವಾಗುತ್ತಿದ್ದರಿಂದ ವಾಯು ವಿಹಾರಿಗಳ ಸಂಖ್ಯೆಯು ಕಡಿಮೆಯಾಗಿದೆ. ವಿಶಾಲವಾದ ಮೈದಾನದ ಸುತ್ತಲೂ ಗಿಡ-ಗಂಟೆಗಳು ಬೆಳೆದಿವೆ.
‘ನಾವು ಹಲವು ಬಾರಿ ಮನವಿಯನ್ನು ಸಲ್ಲಿಸಿದ್ದೇವೆ. ವ್ಯವಸ್ಥೆ ಸರಿಪಡಿಸುವ ಭರವಸೆಯನ್ನು ಮುನ್ಸಿಪಲ್ ಕಮಿಟಿ ಅಧ್ಯಕ್ಷರು ನೀಡಿದ್ದಾರೆ. ಈ ಹಿಂದಿನ ಅಧ್ಯಕ್ಷರು ದುರಸ್ತಿಗೊಳಿಸುವ ಭರವಸೆ ನೀಡಿದ್ದರು. ಈಗ ಅಧ್ಯಕ್ಷರು ಬದಲಾಗಿದ್ದಾರೆ. ಅವರಿಗೂ ಕೂಡ ಇಲ್ಲಿನ ವ್ಯವಸ್ಥೆಯ ಬಗ್ಗೆ ಮನವರಿಕೆ ಮಾಡಿದ್ದೇವೆ. ಅತೀ ಶೀಘ್ರದಲ್ಲಿ ಮುನ್ಸಿಪಲ್ ಪ್ರೌಢಶಾಲೆಯ ವ್ಯವಸ್ಥೆಯನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ. ಕಾದು ನೋಡಬೇಕು’ ಎಂದು ಶಾಲೆಯ ಪ್ರಾಚಾರ್ಯ ಎಸ್.ಎಸ್. ಕುಲಕರ್ಣಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
‘ವಾರಕ್ಕೊಮ್ಮೆ ಶಾಲೆಯ ಕಸ ಗುಡಿಸಲಾತ್ತದೆ. ಅದು ಕೂಡ ವಿದ್ಯಾರ್ಥಿಗಳೇ ಕಸ ಗುಡಿಸಬೇಕು. ಇಲ್ಲದಿದ್ದರೆ ಅಡುಗೆ ಸಹಾಯಕರು ಗುಡಿಸಬೇಕು. ಇಂತಹ ಪರಿಸ್ಥಿತಿ ಶತಮಾನೋತ್ಸವ ಕಂಡ ಶಾಲೆಗೆ ಬಂದಿದ್ದು ದುರ್ದೈವದ ಸಂಗತಿ. ಸ್ಥಳೀಯ ಶಾಸಕರು, ಸಚಿವ ಎಚ್.ಕೆ. ಪಾಟೀಲ್ ಈ ಶಾಲೆಗೆ ಕಾಯಕಲ್ಪ ನೀಡಿ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು’ ಎನ್ನುತ್ತಾರೆ ಮಕ್ಕಳ ಪೋಷಕರು.