ಗದಗ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಚಿಕ್ಕೇನ ಕೊಪ್ಪದ ಚನ್ನವೀರ ಶರಣರ 29ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆ ನಡೆದಿದೆ. ಗ್ರಾಮದ ಮುಸ್ಲಿಂ ಸಮುದಾಯದ ಗುರುಹಿರಿಯರು ಸಹೋದರ, ಸಹೋದರಿಯರು ಮಠದ ಜಾತ್ರೆಗೆ ಆಗಮಿಸಿದ ಭಕ್ತರ ಪ್ರಸಾದಕ್ಕೆ ಸಾವಿರಾರು ರೊಟ್ಟಿಯನ್ನು ನೀಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸುರೇಶ ವಾಯ್ ಚಲವಾದಿ ತಿಳಿಸಿದ್ದಾರೆ.
ಗದಗ ನಗರದಲ್ಲಿ ಪತ್ರಿಕಾ ಪ್ರಕಟಣೆಗೆ ತಿಳಿಸಿರುವ ಅವರು, “ಮನುಷ್ಯ ಮನುಷ್ಯನನ್ನು ಪ್ರೀತಿಯಿಂದ ಕಂಡರೆ ಪ್ರೀತಿಯೇ ಹುಟ್ಟಲು ಸಾಧ್ಯ. ಅದು ಬಿಟ್ಟು ಒಂದು ಸಮುದಾಯವನ್ನು ಪರಸ್ಪರ ವಿರೋಧಿಸುವುದರಿಂದ ವೈಷಮ್ಯಗಳು ಹುಟ್ಟುತ್ತವೆಯೇ ಹೊರತು, ಪ್ರೀತಿ ಕಾಣಲು ಸಾಧ್ಯವಿಲ್ಲ. ಶರಣರು ನಡೆದಾಡಿದ ಸುಕ್ಷೇತ್ರ ಬಳಗಾನೂರ ಗ್ರಾಮದಲ್ಲಿ ಎಲ್ಲ ಸಮುದಾಯದ ಜನರು ಪರಸ್ಪರ ಸಹೋದರತ್ವದ ಭಾವನೆಯಿಂದ ಯಾವುದೇ ಕೋಮು ಗಲಬೆಯಿಲ್ಲದೇ ಸೌಹಾರ್ದತೆಯಿಂದ ಬದುಕು ಕಟ್ಟಿಕೊಂಡಿರುವುದು ಸಂತೋಷಕರ ಸಂಗತಿ” ಎಂದರು.
“ವಿಶೇಷವಾಗಿ ನಮ್ಮ ಗ್ರಾಮದ ಮುಸಲ್ಮಾನ ಬಂಧುಗಳು ಮಠದ ಭಕ್ತರ ಪ್ರಸಾದಕ್ಕಾಗಿ 5,000 ರೊಟ್ಟಿಗಳನ್ನು ಬಡಿದು ಶ್ರೀಮಠಕ್ಕೆ ನೀಡಿರುವುದು ಒಳ್ಳೆಯ ಬೆಳವಣಿಗೆ. ಎಲ್ಲ ಸಮುದಾಯದ ಜನರೊಂದಿಗೆ ಸಹೋದರತ್ವದ ಮನೋಭಾವನೆಯಿಂದ ಎಲ್ಲರನ್ನೂ ಪ್ರೀತಿಯಿಂದ ಕಂಡು ಹಿಂದು-ಮುಸ್ಲಿಂ ಏಕ್ ಹೈ ಎಂಬ ಭಾವನೆಯಿಂದ ಹಿಂದುಗಳ ಜತೆಗೆ ಹಬ್ಬ ಹರಿದಿನಗಳಲ್ಲಿ ಕೈ ಜೋಡಿಸಿ ಸೌಹಾರ್ದತೆಯಿಂದಿರುವುದು ವಿಶೇಷ” ಎಂದು ಹೇಳಿದರು.
“ಗ್ರಾಮದ ಪ್ರಸಿದ್ದವಾದ ಮಠದ ಜಾತ್ರೆಯ ಕೆಲಸಗಳಲ್ಲಿ ಎಲ್ಲ ಸಮುದಾಯದ ಜನರು ಒಗ್ಗಟ್ಟಾಗಿ ಕೆಲಸ ಮಾಡುವುದು ಹಾಗೂ ಯಾವುದೇ ಜಾತಿ ಮತ ಪಂಕ್ತಗಳಿಗೆ ಮಠದಲ್ಲಿ ಅವಕಾಶ ನೀಡದೇ ಎಲ್ಲ ಜನರಿಗೂ ಮುಕ್ತವಾದ ಅವಕಾಶವನ್ನು ಕಲ್ಪಿಸಿ ಗ್ರಾಮದಲ್ಲಿ ಸೌಹಾರ್ದತೆ ನೆಲೆಸಿ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸಿರುವುದಕ್ಕೆ ಕಾರಣವೇ ಶ್ರೀಮಠದ ಸಂಸ್ಕೃತಿ” ಎಂದು ಹರ್ಷ ವ್ಯಕ್ತಪಡಿಸಿದರು.
“ಪ್ರತಿ ವರ್ಷ ಶಿವಶಾಂತವೀರ ಶರಣರು ಜಾತ್ರೆಯ ತಿಂಗಳುಗಳ ಕಾಲ ಮೊದಲೇ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಸದ್ಭಾವನಾ ಯಾತ್ರೆ ಹಮ್ಮಿಕೊಂಡು ದುಶ್ಚಟಗಳನ್ನು ಜೋಳಿಗೆಗೆ ಹಾಕಿ. ಗೋರಕ್ಷಣೆ ನಮ್ಮೆಲ್ಲರ ಹೊಣೆ. ರೈತರೇ ದೇಶದ ಉಸಿರು ಎಂಬ ವಿವಿಧ ವಾಣಿಯನ್ನು ಬಿತ್ತರಿಸುತ್ತಾ ಸಾಮಾಜಿಕ ಜಾಗೃತಿ ಮೂಡಿಸುವುದರ ಜತೆಗೆ ಸೌಹಾರ್ದತೆಯ ಬದುಕು ಕಟ್ಟಿಕೊಂಡು ಜೀವಿಸಬೇಕೆಂಬ ಸಂದೇಶ ನೀಡುತ್ತಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬೀದಿಬದಿ ವ್ಯಾಪಾರಿಗಳ ಬೇಡಿಕೆ ಈಡೇರಿಕೆಗೆ ಆಗ್ರಹ
“ಶಿವಶಾಂತವೀರ ಶರಣರು ಹಲವಾರು ರೀತಿಯ ಧಾರ್ಮಿಕ ಕಾರ್ಯಗಳ ಜತೆಗೆ ಸಾಮಾಜಿಕ ಕಾರ್ಯಗಳನ್ನು ಮಾಡುವುದರೊಂದಿಗೆ ಭಕ್ತ ಸಮೂಹದ ಹೃದಯಾಂತರಾಳದಲ್ಲಿ ನೆಲೆಯೂರಿ ನಮ್ಮ ಭಾಗದ ನಡೆದಾಡುವ ದೇವರೆಂದು ಖ್ಯಾತಿ ಪಡೆದಿದ್ದಾರೆ. ಇಂತಹ ಶರಣರು ನಡೆದಾಡಿದ ಪವಿತ್ರ ಸ್ಥಳ ಸುಕ್ಷೇತ್ರ ಬಳಗಾನೂರ ಗ್ರಾಮ ಜಿಲ್ಲೆಯಲ್ಲಿಯೇ ಕೋಮು ಸೌಹಾರ್ದತೆಯಲ್ಲಿ ಹೆಸರುವಾಸಿಯಾದ ಗ್ರಾಮವೆಂದು ಹೆಮ್ಮೆಯಾಗುತ್ತದೆ” ಎಂದರು.