ಗದಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮಹಿಳೆಯರು ಮಳೆಗಾಲದಲ್ಲಿ ಕೂಲಿ ಕೆಲಸ ಕಡಿಮೆಯಾದಾಗ ನೈಸರ್ಗಿಕವಾಗಿ ಬೆಳೆಯುವ ಬೇವಿನ ಬೀಜ ಹೆಕ್ಕುವುದನ್ನೇ ಉದ್ಯೋಗವನ್ನಾಗಿ ಮಾಡಿಕೊಂಡು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿರುವುದು ವಿಶೇಷ. ಹೊಲದ ಬದುವುಗಳಲ್ಲಿ, ಕಿನಾಲು ದಂಡೆಗಳ ಮೇಲೆ, ಅರಣ್ಯ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೇವಿನ ಮರಗಳು ಬೆಳೆದಿರುತ್ತವೆ. ಯುಗಾದಿ ಸಮಯದಲ್ಲಿ ಬೇವಿನ ಮರಗಳು ಹೂವುಗಳನ್ನು ಬಿಟ್ಟು, ಜೂನ್ ಜುಲೈ ತಿಂಗಳಲ್ಲಿ ಹಣ್ಣಾಗುತ್ತವೆ. ಹಣ್ಣುಗಳನ್ನು ಪಕ್ಷಿಗಳು ತಿಂದು, ಬರಿ ಬೀಜಗಳು ಗಿಡಗಳಲ್ಲಿ ಉಳಿದಿರುತ್ತವೆ. ಬೀಜಗಳು ತೊಟ್ಟು ಉದುರಿ ಕೆಳಗೆ ಬೀಳುತ್ತವೆ.
ಇದೇ ಜೂನ್ ಸಮಯದಲ್ಲಿ ಮಳೆಗಾಲ ಆರಂಭವಾಗಿ ಮುಂಗಾರು ಬಿತ್ತನೆ ಕಾರ್ಯ ಆಗತಾನೆ ಆರಂಭವಾಗಿರುತ್ತದೆ. ಈ ಸಂದರ್ಭದಲ್ಲಿ ಕೃಷಿ ಮಹಿಳೆಯರಿಗೆ ಹೊಲಗಳಲ್ಲ ಕೃಷಿ ಕೆಲಸ ಕಡಿಮೆ ಇರುವುದರಿಂದ, ಹೊಲದ ಬದುವುಗಳಲ್ಲಿ, ಕೆರೆಯ ದಂಡೆಗಳ ಮೇಲೆ ಬೆಳೆದಿರುವ ಬೇವಿನ ಮರಗಳನ್ನು ಹುಡುಕಿ ಬೀಜಗಳನ್ನು ಒಂದೊಂದಾಗಿ ಆರಿಸಿ, ಸಂಗ್ರಹಿಸಿ, ಅವುಗಳನ್ನು ಮಾರಾಟ ಮಾಡಿ ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಆರು ಡಂಬಿ ಸೇರಿ ಒಂದು ಚೀಲಕ್ಕೆ ಬೇವಿನ ಬೀಜಕ್ಕೆ 650 ರೂ.ಗಳಿಂದ 700 ರೂ. ಇರುತ್ತದೆ. ಕೃಷಿ ಮಹಿಳೆಯರು ಅಡವಿಗಳಲ್ಲಿ ಅಲೆದಾಡಿ ದಿನಕ್ಕೆ ನಾಲ್ಕರಿಂದ ಐದು ಡಂಬಿಗಳಷ್ಟು ಬೀಜಗಳನ್ನು ಸಂಗ್ರಹಿಸುತ್ತಾರೆ. ಕೃಷಿ ಮಹಿಳೆಯರು ದಿನಕ್ಕೆ ನಾಲ್ಕುನೂರರಿಂದ ಐದುನೂರು ರೂಪಾಯಿಗಳಷ್ಟು ಆದಾಯ ಗಳಿಸುತ್ತಾರೆ. ಹೀಗೆ ಹದಿನೈದರಿಂದ ಒಂದು ತಿಂಗಳುಗಳ ಕಾಲ ಬೇವಿನ ಬೀಜ ಹೆಕ್ಕುವ ಉದ್ಯೋಗವನ್ನು ಅವಲಂಬಿಸಿರುತ್ತಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಎಪಿಎಂಸಿಯಲ್ಲಿ ಬೇವಿನ ಬೀಜದ ದೊಡ್ಡ ಮಾರುಕಟ್ಟೆ ಇದೆ. ಈ ಮಾರುಕಟ್ಟೆಯ ಖರೀದಿದಾರರು, ರೋಣ, ಗಜೇಂದ್ರಗಡ, ಹುನಗುಂದ, ಲಿಂಗಸೂರು, ಯಲಬುರ್ಗಾ ತಾಲೂಕಿನ ಹಳ್ಳಿ ಹಳ್ಳಿಗಳಿಗೆ ಹೋಗಿ, ಕೃಷಿ ಮಹಿಳೆಯರು ಸಂಗ್ರಹಿಸಿದ ಬೀಜಗಳನ್ನು ಖರೀದಿ ಮಾಡ್ಕೊಂಡು ಹೋಗುತ್ತಾರೆ.
ಬೇವಿನ ಬೀಜದಿಂದ ಆದಾಯ ಕಳಿಸುವ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಕುಷ್ಟಗಿ ತಾಲೂಕಿನ ರೈತ ವೀರೇಶ್ ಕಟ್ಟಿಮನಿ, “ಬೇವಿನ ಬೀಜಗಳಿಂದ ಕೂದಲು ಎಣ್ಣೆ, ಔಷಧಿಗಳನ್ನು ತಯಾರಿಸುತ್ತಾರೆ. ಬೀಜದ ಹಿಂಡಿಯನ್ನು ಮರ, ಗಿಡ, ಬೆಳೆಗಳ ಬುಡಕ್ಕೆ ಹಾಕಿದರೆ ಹೆಚ್ಚು ಆರೋಗ್ಯವಾಗಿ, ಒಳ್ಳೆಯ ರೀತಿಯಲ್ಲಿ ಬೆಳೆಯುತ್ತವೆ” ಎಂದು ಹೇಳಿದರು.
ಈದಿನ.ಕಾಮ್ ಜೊತೆಗೆ ಮಾತನಾಡಿದ ರೋಣ ತಾಲೂಕಿನ ಚಿಕ್ಕಮನ್ನೂರು ಗ್ರಾಮದ ಕೃಷಿ ಮಹಿಳೆ ಮುತ್ತವ್ವ, “ಮುಂಜಾನೆಯಿಂದ ಸಂಜೆವರೆಗೂ ಆರಿಸಿದ್ರು ಮೂರರಿಂದ ನಾಲ್ಕು ಡಬ್ಬಿ ಅರಿಸ್ತೀವಿ. ದಿನಕ್ಕೆ ನಾಲ್ಕುನೂರು ದುಡಿತೀವಿ” ಎಂದು ಹೇಳಿದರು.