“ಎಲೆಕ್ಷನ್ ಇದ್ದಾಗ್ ಬಂದ್ರು, ಮನಿ ಜಾಗ ಕೊಡ್ತಿವಿ ಅಂದ್ರು, ಎಲೆಕ್ಷನ್ ಮುಗಿದ್ಮೇಲೆ ಸತ್ತೀವಿ ಬದುಕಿವಿ ತಿರುಗಿ ನೋಡಿಲ್ಲ. ಮೊದ್ಲ ಶೆಟ್ರ್ ಜಾಗದಗ್ ಇದ್ವಿ, ಅಲ್ಲಿಂದ ಎಪಿಎಂಸಿ ಬಂದ್ ಗುಡಿಸ್ಲಾ ಹಾಕೊಂಡು ಹತ್ತು ವರ್ಷ ಇದ್ವಿ. ಅಲ್ಲಿನೂ ಯಾರು ದಾದ್ ಮಾಡ್ಲಿಲ್ಲ. ಬುಲ್ಡೋಜರ್ ತಗೊಂಡ್ ಬಂದು, ಗುಡಿಸ್ಲಾ ಕಿತ್ತು ಹೋಗಿತೀವಿ, ನೀವು ಎಲ್ಲೆರ ಹೋಗ್ರಿ, ಕಿತ್ತು ಹೋಗಿತೀವಿ ಹೋಗ್ರಿ ಅಂದಾಗ್ ಆಗೀನಿ ತಹಶೀಲ್ದಾರ್ ಬಂದು ಮುನ್ಸಿಪಾಲ್ಟಿ ಜಗದಾಗ ಇರ್ರಿ ಎಂದ್ರು. ಇಲ್ಲಿಗೆ ಬಂದು ಮೂವತ್ತು ವರ್ಷ ಆತು. ಮಳೆ ಆದ್ರ ಗುಡಿಸಿಲುಗಳು ಸೋರ್ತಾವ, ಮಕ್ಕಳು ಮರಿ ಮರ ಮರ ಮಾರಗ್ತಾವ, ಚಲೋ ದಾರಿ ಇಲ್ಲ ಬರಿ ರಜ್ಜು ಐತ್ರಿ. ಇದ್ರಾಗ ಸಾಲಿಗೆ ಹುಡ್ರು ಹೋಗ್ತಾರ, ಗುಡಿಸಲುಗಳ ಸುತ್ತ ಮುತ್ತ ಕಸ ಕಡ್ಡಿ, ಜಾಲಿಕಂಟಿ ಬೆಳದೈತಿ, ಹಾವು-ಮುಂಗುಸಿ, ಚೇಳು ಹುಳ ಹುಪ್ಪಡಿ ಕಾಟ ಬಾಳ್ ಆಗೈತ್ರಿ, ಡಿಸಿ ಕಚೇರಿಗೆ, ತಹಸೀಲ್ದಾರ್ ಕಚೇರಿಗೆ ಹೋಗಿ ಹೋಗಿ, ಇರಾಕ ಜಾಗ ಕೊಡ್ರಿ ಅಂದ್ರು ಯಾವ ಅಧಿಕಾರಿಗಳು, ಗೌರ್ಮೆಂಟನವರು ಏನು ಮಾಡ್ತಿಲ್ರಿ, ಬಾಳ್ ಸಮಸ್ಯೆ ಆಗೈತ್ರಿ”…
ಹೀಗಂತ ನೋವು ತೋಡಿಕೊಂಡದ್ದು ಅಲೆಮಾರಿ ಸಮುದಾಯದ ದುರುಗಪ್ಪ ಡೊಂಕಣ್ಣನವರ.
ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣ ಹಾಗೂ ಬೆಳ್ಳಟ್ಟಿ ಗ್ರಾಮದಲ್ಲಿ ಬದುಕುತ್ತಿರುವ ಅಲೆಮಾರಿ- ಅರೆ ಸಮುದಾಯಗಳ ಪರಿಸ್ಥಿತಿ. ಅವರ ಜೀವನವನ್ನೊಮ್ಮೆ ನೋಡಿದರೆ ಮನ ಕಲುಕುವುದು ಖಂಡಿತ.
ಹೌದು. ಶಿರಹಟ್ಟಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಏಳೆಂಟು ಕುಟುಂಬಗಳು ಹಾಗೂ ವಿಜಯ ನಗರ ನೀರಿನ ಟ್ಯಾಂಕ್ ಜಾಗದಲ್ಲಿ ಹದಿನೈದಕ್ಕಿಂತ ಹೆಚ್ಚು ಕುಟುಂಬಗಳು ಅರವತ್ತಕ್ಕೂ ಹೆಚ್ಚು ಜನರು ಇದ್ದಾರೆ.
ಕಾಡುಸಿದ್ದರು, ದುರುಗು ಮುರುಗಿ, ಹಂದಿಜೋಗಿ ಅಲೆಮಾರಿ ಸಮುದಾಗಳು ಹರಿದ ಸೀರೆ, ತುಂಡು ತುಂಡು ಬಟ್ಟೆಗಳನ್ನೇ ಗುಡಿಸಲುಗಳಿಗೆ ಹೊದಿಕೆ ಹೊಚ್ಚಿ ಬದುಕುತ್ತಿರುವ ಅಲೆಮಾರಿ -ಅರೆ ಅಲೆಮಾರಿ ಸಮುದಾಯಗಳ ಮೂಲಭೂತ ಸೌಲಭ್ಯಗಳಿಲ್ಲದೆ ಬದುಕು ಸಾಗಿಸುತ್ತಿದ್ದಾರೆ.

ಹೊಟ್ಟೆಪಾಡಿಗೆ ಸುಡುಗಾಡು ಸಿದ್ದರು ಊರು ಊರಿಗೆ ಹೋಗಿ ಪನಕಟ್ಟಿ, ಮರುದಿನ ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿ ಕಾಳು ಕಡಿ ಸಂಗ್ರಹಿಸುತ್ತಾರೆ. ಉಳಿದ ಸಮುದಾಯದವರು ಜೋಗ್ಯಾರ್ ಸಾಮಾನುಗಳನ್ನು, ಕೂದ್ಲ ಪಿನ್ನು ಮಾರಾಟ ಮಾಡಿ ಬದುಕು ಸವೆಸುತ್ತಿದ್ದಾರೆ.
ಗುಡಿಸಲುಗಳ ಸುತ್ತಲೂ ಕಸ, ಜಾಲಿಕಂಟಿ
ನೀರಿನ ಟ್ಯಾಂಕ್ ಆವರಣದಲ್ಲಿ ಇರುವ ಗುಡಿಸಲುಗಳ ಸುತ್ತಲು ಕಸ ಕಡ್ಡಿಯಿಂದ ತುಂಬಿದೆ. ಜಾಲಿಕಂಟಿ ಬೆಳೆದು ನಿಂತಿದೆ. ಇದರಿಂದ ಹಾವು – ಮುಂಗುಸಿ ಚೇಳು ಗುಡಿಸಲುಗಳಿಗೆ ಬರುತ್ತವೆ. ಕೆಲವು ತಿಂಗಳ ಹಿಂದೆ ಇಲ್ಲಿಯ ಒಬ್ಬ ಮಹಿಳೆಗೆ ಹಾವು ಕಡಿದಿದ್ದು, ಅದೃಷ್ಟವಶಾಟ್ ಬದುಕುಳಿದಿದ್ದಾರೆ. ಇದರಿಂದ ಇಲ್ಲಿ ಬದುಕುತ್ತಿರುವ ಜನರು ಅನಾರೋಗ್ಯ, ಜೀವ ಭಯದಲ್ಲಿಯೇ ಬದುಕುತ್ತಿದ್ದಾರೆ.
ಮಳೆ ಬಂದರೆ ಬಸ್ ನಿಲ್ದಾಣವೇ ಆಸರೆ
ಮಳೆಗಾಲದಲ್ಲಿ ಗುಡಿಸಲುಗಳು ಸೋರಿ ಪಕ್ಕದಲ್ಲಿರುವ ಬಸ್ ನಿಲ್ದಾಣವೆ ಆಸರೆ. ಗುಡಿಸಲಿಗೆ ಹೋಗುವ ದಾರಿ ಮಳೆಯಿಂದ ಗದ್ದೆಯಂತಾಗುತ್ತಿದ್ದು, ಮಕ್ಕಳಿಗಂತೂ ನಡೆದಾಡಲು ಆಗದಂತೆ ಸ್ಥಿತಿ ನಿರ್ಮಾಣವಾಗುತ್ತದೆ.
ಅಲೆಮಾರಿ ಸಮುದಾಯದ ಮಕ್ಕಳು ಶಿಕ್ಷಣ ವಂಚಿತರು
ಈ ಅಲೆಮಾರಿ ಸಮುದಾಯದ ಮಕ್ಕಳು ಶಿಕ್ಷದಿಂದ ವಂಚಿತರಾಗುತ್ತಿದ್ದಾರೆ. ಇಲ್ಲಿಯ ಮಕ್ಕಳು ಐದರಿಂದ ಆರನೇ ತರಗತಿಯವರೆಗೆ ಕಲಿತಿರುತ್ತಾರೆ. ಅವರ ಶಿಕ್ಷಣವನ್ನು ಅಲ್ಲಿಗೆ ಬಿಡಿಸಿ ದುಡಿಯುವುದಕ್ಕೆ ಕಳಿಸುತ್ತಾರೆ. ಹತ್ತರಿಂದ ಹನ್ನೆರಡನೇ ತರಗತಿ ಪದವಿ ಕಲಿಯುತ್ತಿರುವವರು ಎಲ್ಲೊ ಒಬ್ಬರು. ಉಳಿದ ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ.
ಈದಿನ.ಕಾಮ್‌ನೊಂದಿಗೆ ಮಾತನಾಡಿದ ಅಲೆಮಾರಿ ಸಮುದಾಯದ ಮಂಜಮ್ಮ, “ನಲವತ್ತು ವರ್ಷದಿಂದ ಇದೇ ಹರಕು ಮುರುಕು ಗುಡಿಸಲುಗಳಲ್ಲೇ ಬದುಕುತ್ತಿದ್ದೀವಿ. ಅಧಿಕಾರಿಗಳು ಬರ್ತಾರ್ ಹೋಗ್ತಾರ. ಏನು ಮಾಡಲ್ಲರಿ. ನಮಗ್ ಸ್ವಂತ ಜಾಗ, ಮನಿಯಿಲ್ಲ. ಮಕ್ಳು ಮರಿ ಕಟಗೊಂಡು ಇದರಾಗ್ ಬದುಕ್ತಿದ್ದೀವಿ. ಹಾವು ಗುಡಿಸಲಾಗ್ ಬರ್ತಾವ್ ರಿ… ಸರಕಾರದವ್ರು ನಮಗ್ ಜಾಗ ಮನಿ ಕೊಟ್ಟು ಪುಣ್ಯ ಕಟಗೊಳ್ಳಿ” ಎಂದು ನೋವಿನ ಮಾತುಗಳನ್ನಾಡಿದರು.
ಈ ದಿನ.ಕಾಮ್ ನೊಂದಿಗೆ ಅಲೆಮಾರಿ ಸಮುದಾಯದ ರವಿ ಗಂಟಿ ಮಾತನಾಡಿ, “ನಮ್ಮತ್ರ ರೇಷನ್ ಕಾರ್ಡು, ಆಧಾರ್ ಕಾರ್ಡು, ಓಟರ್ ಕಾರ್ಡು ಇದ್ರು, ಜಾಗ ಮನಿ ಇಲ್ರಿ. ಎಲೆಕ್ಷನ್ ಇದ್ದಾಗ ಇಲ್ಲಿ ಬಂದು ನಿಮಗ ಮನಿ, ಜಾಗ, ರೋಡ್, ನೀರು ಎಲ್ಲ ಕೊಡ್ತುವಿ ಅಂದ್ರು, ಎಲೆಕ್ಷನ್ ಮುಗಿದ್ಮೇಲೆ ಸತ್ತಿವ, ಬದ್ಕಿವ ಅಂತಾನೂ ತಿರುಗಿ ನೋಡಿಲ್ಲ. ಮಳಿ ಅದ್ರ್ ನಮ್ಮ ಪರಿಸ್ಥಿತಿ ನಮ್ಮಗಾ ಗೊತ್ರಿ, ಯಾರೂ ಬರಲ್ಲ” ಎಂದು ತಮ್ಮ ಕಷ್ಟವನ್ನು ಹೇಳತೊಡಗಿದರು.
ಈ ದಿನ.ಕಾಮ್ ನೊಂದಿಗೆ ಸಾಮಾಜಿಕ ಹೋರಾಟಗಾರ ಕೇಶವ್ ಕಟ್ಟಿಮನಿ ಮಾತನಾಡಿ, “ಅಲೆಮಾರಿ ಸಮುದಾಯದ ಜನರು ಆರ್ಥಿಕವಾಗಿ ಬೆಳೆಯಲೆಂದು ನಿಗಮ ಮಾಡಿ, ಇದಕ್ಕೆ ಸಾಕಷ್ಟು ಹಣ, ಸೌಲಭ್ಯಗಳು ಬರುತ್ತವೆ. ಅವು ಯಾವ ಪ್ರಯೋಜನಕ್ಕೂ ಸಿಗುತ್ತಿಲ್ಲ. ಕೊಳಚೆ ಪ್ರದೇಶಗಳಲ್ಲಿ ಜನ ಬದುಕುತ್ತಿದ್ದಾರೆ. ಮಾನವೀಯ ದೃಷ್ಟಿಯಿಂದ ಅಧಿಕಾರಿಗಳು, ಪ್ರತಿನಿಧಿಗಳು, ಇವರ ಕಷ್ಟಕ್ಕೆ ಸ್ಪಂದಿಸಬೇಕು. ಇಲ್ಲದೆ ಹೋದಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈದಿನ.ಕಾಮ್ ನೊಂದಿಗೆ ಶಿರಹಟ್ಟಿ ತಹಶೀಲ್ದಾರ್ ಅನಿಲ್ ಬಡಿಗೇರ್ ಮಾತನಾಡಿ, “ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಸ್ಥಳೀಯ ಆಡಳಿತದೊಂದಿಗೆ ಮಾತನಾಡಿ, ಅಲೆಮಾರಿ ಸಮುದಾಯದ ಜನರಿಗೆ ಸರಕಾರದಿಂದ ಸಹಾಯ ಮಾಡಲು ಪ್ರಯತ್ನಿಸುವೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ರಾಮನಗರ | ಪತ್ರಕರ್ತ ದಿ.ಮೋಹನ್ ಕುಮಾರ್ ಮಗನ ಮೇಲೆ ಮಾರಣಾಂತಿಕ ಹಲ್ಲೆ; ಕೊಲೆ ಯತ್ನ ಆರೋಪ
ಈ ದಿನ.ಕಾಮ್ ತಾಲೂಕು ಪಂಚಾಯತ್ ಅಧಿಕಾರಿಗೆ ಫೋನ್ ಮೂಲಕ ಸಂಪರ್ಕ ಮಾಡಿತ್ತು. ಸಂಪರ್ಕ ಸಿಗಲಿಲ್ಲ.
ಈ ಅಲೆಮಾರಿ ಸಮುದಾಯದ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುನ್ನಲೆಗೆ ತರಲು ಸರಕಾರ ಅಲೆಮಾರಿ ಅರೆ-ಅಲೆಮಾರಿ ನಿಗಮ ಮಾಡಿದೆ. ಅಲೆಮಾರಿ ಸಮುದಾಯಗಳಿಗೆ ಈ ನಿಗಮ ಸ್ಪಂದಿಸದೆ ಇದ್ದು, ಇಲ್ಲದಂತೆ ಆಗಿದೆ. ಈಗಲಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಅಲೆಮಾರಿ ಸಮುದಾಯಗಳಿಗೆ ಸ್ಪಂದಿಸುತ್ತಾರೋ ಕಾದು ನೋಡಬೇಕಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.