ಬಾಲೆಹೊಸೂರು ಗ್ರಾಮದ ರಸ್ತೆಯುದ್ಧಕ್ಕೂ ತಗ್ಗು ಗುಂಡಿಗಳು ತುಂಬಿದ್ದು, ರಸ್ತೆಗಳು ಕೆಸರುಗದ್ದೆಯಾಗಿರುವ ಲಕ್ಷ್ಮೇಶ್ವರ ತಾಲೂಕಿನ ಹಳ್ಳಿಗಳ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಸತತ ಸುರಿದ ಮಳೆಯಿಂದಾಗಿ, ಬಾಲೆಹೊಸೂರು ಗ್ರಾಮಕ್ಕೆ ಹೋಗುವ ರಸ್ತೆಯು ತಗ್ಗು, ಗುಂಡಿಗಳು ಬಿದ್ದಿವೆ. ಅಲ್ಲಲ್ಲಿ ದೊಡ್ಡ ತಗ್ಗುಗಳಲ್ಲಿ ನೀರು ತುಂಬಿದ್ದು, ಹೊಂಡಗಳೇ ನಿರ್ಮಾಣವಾಗಿ ಸಂಪೂರ್ಣ ಹದಗೆಟ್ಟು, ಕೆಸರು ಗದ್ದೆಯಾಗಿ ಜನರಿಗೆ, ವಾಹನ ಸವಾರರಿಗೆ ಹೋಗಲು ತೊಂದರೆಯಾಗಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು ಗ್ರಾಮಕ್ಕೆ ಹೋಗುವ ರಸ್ತೆ ಹಾಗೂ ಗುತ್ತಲಕ್ಕೆ ಹೋಗುವ ರಸ್ತೆಗಳು ಹದಗೆಟ್ಟಿದ್ದು, ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ. ಸುರಣಗಿ ಗ್ರಾಮದಿಂದ ಬಾಲೆಹೊಸೂರು ಗ್ರಾಮವು ಏಳು ಕಿಲೋ ಮೀಟರ್ ದೂರವಿದೆ. ದಾರಿಯುದ್ಧಕ್ಕೂ ತಗ್ಗು ಗುಂಡಿಗಳು, ಬಿದ್ದು ಹೋದ ಸೇತುವೆ, ಕಿತ್ತುಹೋದ ಡಾಂಬರ್, ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ನಿತ್ಯ ಇಲ್ಲಿಯ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ.
ಒಂದು ತಿಂಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ಇಪ್ಪತ್ತು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ತಗ್ಗು ಗುಂಡಿಗಳಲ್ಲಿ ನೀರು ತುಂಬಿದೆ. ದೊಡ್ಡ ದೊಡ್ಡ ತಗ್ಗುಗಳಲ್ಲಿ ನೀರು ನಿಂತು ಹಳ್ಳಗಳಾಗಿ ಮಾರ್ಪಟ್ಟು, ಕೆಸರುಗದ್ದೆಯಾಗಿ ನಿರ್ಮಾಣಗೊಂಡಿದೆ. ಇದರಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ಗ್ರಾಮದಿಂದ ಸುಮಾರು 200 ಮಂದಿ ವಿದ್ಯಾರ್ಥಿಗಳು ಲಕ್ಷ್ಮೇಶ್ವರಕ್ಕೆ ಶಾಲೆ-ಕಾಲೇಜುಗಳಿಗೆ ಹೋಗುತ್ತಾರೆ. ಹಾಗಾಗಿ ಗ್ರಾಮದಿಂದ ಒಂಬತ್ತು ಕಿಲೋಮೀಟರ್ ನಡೆದುಕೊಂಡು ಅಥವಾ ಬೈಕ್‌ಗಳಲ್ಲಿ ಸುರಣಗಿ ಗ್ರಾಮ ತಲುಪುತ್ತಾರೆ.

ಈ ರಸ್ತೆಯಲ್ಲಿಯೇ ಬಾಲೆಹೊಸೂರು ಹಾಗೂ ಸುರಣಗಿ ಗ್ರಾಮದ ರೈತರುಗಳ ಹೊಲಗಳು ಇದ್ದು, ನಿತ್ಯ ಈ ಹದಗೆಟ್ಟ ರಸ್ತೆಯಲ್ಲಿ ಬಹುತೇಕ ರೈತರು, ರೈತ ಮಹಿಳೆಯರು, ದುಡಿಯುವ ವರ್ಗದವರು ಓಡಾಡುತ್ತಾರೆ. ಎಷ್ಟೋ ಬಾರಿ ಈ ರಸ್ತೆಯಲ್ಲಿ ಹೋಗುವಾಗ ಬೈಕ್ ಸವಾರರು ಬಿದ್ದು ಕೈ ಕಾಲು ಮುರಿದುಕೊಂಡು, ಗಾಯಗಳಾಗಿವೆ. ಜೀವ ಭಯದಲ್ಲಿಯೇ ತಿರುಗಾಡುತ್ತಾರೆ.
ಹದಗೆಟ್ಟಿರುವ ರಸ್ತೆಯು ಸುಮಾರು ಐದಾರು ವರ್ಷಗಳಿಂದ ಹೀಗೆಯೇ ಇದೆ. ತಾತ್ಕಾಲಿಕವಾಗಿ ಗರಸು ಮಣ್ಣು ಹಾಕುತ್ತಾರೆ. ಟ್ರಕ್ ಲಾರಿಗಳ ಓಡಾಟದಿಂದ ಕಿತ್ತು ಹೋಗಿ ಮತ್ತೆ ಗುಂಡಿಗಳು ನಿರ್ಮಾಣವಾಗುತ್ತವೆ. ಪ್ರತಿ ವರ್ಷವೂ ಮಳೆಯಾದಾಗ ಈ ರಸ್ತೆಯಲ್ಲಿ ಬಸ್ ಸಂಚಾರ ಸ್ಥಗಿತಗೊಳ್ಳುತ್ತದೆ. ಇದರಿಂದ ಸ್ಥಳೀಯರು ತೊಂದರೆ ಎದುರಿಸುತ್ತಾರೆ.
ಬಾಲೆಹೊಸೂರು ಗ್ರಾಮಸ್ಥ ಕೇಶವ ಕಟ್ಟಿಮನಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸುಮಾರು ಐದಾರು ವರ್ಷಗಳಿಂದ ಈ ರಸ್ತೆಯ ಸಮಸ್ಯೆ ಅನುಭವಿಸುತ್ತಾ ಬಂದಿದ್ದೇವೆ. ಈ ರಸ್ತೆಯಲ್ಲಿ ನಿತ್ಯವೂ ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ದ್ವಿಚಕ್ರ ವಾಹನ ಸವಾರರು ಹೋಗುತ್ತಾರೆ. ಏನಾದರೂ ಅನಾಹುತಗಳು ಸಂಭವಿಸುವ ಮೊದಲು ರಾಜಕಾರಣ ಮಾಡದೇ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಕಚೇರಿ ಮುಂದೆ ಸತ್ಯಾಗ್ರಹ ಧರಣಿ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಸುರಣಗಿ ಗ್ರಾಮಸ್ಥ ಅಬ್ದುಲಸಾಬ್ ಮಾತನಾಡಿ, “ದಿನಪ್ರತಿ ಇದರಾಗೇ ಸತ್ತು ಬದುತ್ತಿದ್ದೇವಪ್ಪ, ನಾವು ಕೂಲಿ ಮಾಡೋರು, ಕಾಲು ಇಲ್ಲದವರು. ಮೊನ್ನೆ ಮಗಳನ್ನು ಕೂರಿಸಿಕೊಂಡು ಹೋಗುವಾಗ ಗಾಡಿ ಜತೆಗೆ ಕೆಳಗೆ ಬಿದ್ದೆವು. ಇಲ್ಲಿ ಶಾಸಕರು ಇದ್ದಾರೋ, ಇಲ್ಲವೋ ಎಂಬುದೇ ತಿಳಿಯದಾಗಿದೆ. ಒಟ್ಟಾರೆಯಾಗಿ ಈ ತೊಂದರೆಯಿಂದ ಮುಕ್ತಿ ಪಡೆದರೆ ಸಾಕು ಎಂಬಾಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ವಯನಾಡು ಭೂಕುಸಿತದಿಂದ ಸ್ಥಳೀಯರ ಜಲಸಮಾಧಿ; ಮಾನವ ಕುಲಕ್ಕೇ ಎಚ್ಚರಿಕೆಯ ಕರೆಗಂಟೆ
ಇದೊಂದೇ ಗ್ರಾಮವಲ್ಲ ಲಕ್ಷ್ಮೇಶ್ವರ ತಾಲೂಕಿನ ಬಹುತೇಕ ಹಳ್ಳಿಗಳ ರಸ್ತೆಗಳು ಹದಗೆಟ್ಟಿವೆ. ತಾಲೂಕಿನಿಂದ ಹರದಗಟ್ಟಿ, ಶಿಗ್ಲಿ, ದೊಡ್ಡೂರು, ಗೋವನಾಳ, ಮಾಗಡಿ-ಯಳವತ್ತಿ, ಯತ್ನಳ್ಳಿ-ಮಾಡಳ್ಳಿ, ನಾಯಿಕೆರೂರ-ಉಳ್ಳಟ್ಟಿ ಕ್ರಾಸ್‌ನಿಂದ ಶಿಗ್ಲಿ, ಉಂಡೇನಹಳ್ಳಿ-ಮುನಿಯನ ತಾಂಡಾ, ಬಾಲೆಹೊಸೂರು-ಇಚ್ಚಂಗಿ, ಪುಟಗಾಂವ್‌ಬಡ್ನಿ-ಸೂರಣಗಿ, ಅಕ್ಕಿಗುಂದ-ಲಕ್ಷ್ಮೇಶ್ವರ, ಕಲ್ಲೂರು, ಭಾಗವಾಡ ಮಾಡಳ್ಳಿ, ಬರದ್ವಾಡ ಹೋಗುವ ಎಲ್ಲ ರಸ್ತೆಗಳಲ್ಲಿ ತಗ್ಗು ಗುಂಡಿಗಳಿಂದ ನಿರ್ಮಾಣಗೊಂಡು ಹದಗೆಟ್ಟಿವೆ. ಇವು ಜನರ ಪ್ರಾಣಕ್ಕೆ ಕುತ್ತಾಗುತ್ತಿವೆ.
ಈಗಲಾದರೂ ಲೋಕೋಪಯೋಗಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳೆಲ್ಲ ಹಾಗೂ ಜನಪ್ರತಿನಿದಿನಗಳು ಎಚ್ಚೆತ್ತುಕೊಂಡು ದುರಸ್ತಿ ಮಾಡಿಸುತ್ತರಾ ಕಾದು ನೋಡಬೇಕಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.