ಹಿಮಾಚಲ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಮೇಘಸ್ಫೋಟವಾಗಿದ್ದು, ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಭಾನುವಾರು, ಮಂಡಿ ಜಿಲ್ಲೆಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ.
ಜುಲೈ 31ರ ರಾತ್ರಿ ಕುಲು ಜಿಲ್ಲೆಯ ನಿರ್ಮಂದ್, ಸೈನ್ಜ್ ಮತ್ತು ಮಲಾನಾ ಹಾಗೂ ಮಂಡಿ ಜಿಲ್ಲೆಯ ಪಧಾರ್ ಮತ್ತು ಶಿಮ್ಲಾ ಜಿಲ್ಲೆಯ ರಾಂಪುರ್ ಪ್ರದೇಶದಲ್ಲಿ ಮೇಘಸ್ಪೋಟ ಸಂಭವಿಸಿದೆ. 11 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ರಕ್ಷಣಾ ಕಾರ್ಯಗಳು ನಡೆಯುತ್ತಿದ್ದು, ನಾಪತ್ತೆಯಾದವರ ಪತ್ತೆಗೆ ಸ್ನಿಫರ್ ಡಾಗ್‌ಗಳು, ಡ್ರೋನ್‌ಗಳು ಮತ್ತು ಇತರ ಉಪಕರಣಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಐಟಿಬಿಪಿ, ಸಿಐಎಸ್‌ಎಫ್, ಹಿಮಾಚಲ ಪ್ರದೇಶ ಪೊಲೀಸ್ ಮತ್ತು ಗೃಹ ರಕ್ಷಕರ ತಂಡಗಳ 410 ಸಿಬ್ಬಂದಿಗಳು ರಕ್ಷಣಾ ಕಾರ್ಯಗಳಲ್ಲಿ ತೊಡಗಿದ್ದಾರೆ.
ರಾಂಪುರ ಉಪವಿಭಾಗದ ಸರ್ಪಾರ ಗ್ರಾಮ ಪಂಚಾಯತಿಯ ಸಮೇಜ್ ಗ್ರಾಮದಲ್ಲಿ 30ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
“ರಾಜ್ಯ ಸರ್ಕಾರ ಶುಕ್ರವಾರ ಸಂತ್ರಸ್ತರಿಗೆ 50,000 ರೂಪಾಯಿ ತಕ್ಷಣದ ಪರಿಹಾರ ಘೋಷಿಸಿದೆ ಮತ್ತು ಮುಂದಿನ ಮೂರು ತಿಂಗಳುಗಳ ಕಾಲ ಮನೆ ಬಾಡಿಗೆ, ಗ್ಯಾಸ್, ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಜೊತೆಗೆ ಮಾಸಿಕ 5,000 ರೂಪಾಯಿಗಳನ್ನು ನೀಡಲಾಗುತ್ತದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 27ರಿಂದ ಆಗಸ್ಟ್ 3ರವರೆಗೆ ರಾಜ್ಯದಲ್ಲಿ ಎದುರಾದ ಪ್ರವಾಹದಿಂದಾಗಿ 662 ಕೋಟಿ ರೂ.ನಷ್ಟವಾಗಿದೆ. 89 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ.